ಮಂಗಳೂರು : ಕೊಂಕಣಿಯ ಏಕ ಮಾತ್ರ ರೆಪರ್ಟರಿ ಕಲಾಕುಲ್ ಇದರ 2024-25ನೇ ಸಾಲಿನ ರಂಗಭೂಮಿ ಡಿಪ್ಲೊಮಾ ಪದವಿ ಪ್ರದಾನ ಕಾರ್ಯಕ್ರಮವು ಶಕ್ತಿನಗರದ ಕಲಾಂಗಣದಲ್ಲಿ ದಿನಾಂಕ 26 ಅಕ್ಟೋಬರ್ 2025ರಂದು ನಡೆಯಿತು.
ಮುಖ್ಯ ಅತಿಥಿ ಸರಕಾರಿ ಪ್ರ.ದ. ಮಹಿಳಾ ಕಾಲೇಜು ಪುತ್ತೂರು ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಝೇವಿಯರ್ ಡಿಸೋಜ ಇವರು ಏಳು ಜನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ʻʻರಂಗಭೂಮಿ ಒಂದು ಶೈಕ್ಷಣಿಕ ಮಾಧ್ಯಮ. ಸೃಜನಾತ್ಮಕತೆ ಮತ್ತು ಶಿಸ್ತು ಇಲ್ಲಿ ಅಗತ್ಯ. ಜನರನ್ನು ಪರಿಣಾಮಕಾರಿಯಾಗಿ ತಲುಪುವ ಈ ಮಾಧ್ಯಮಕ್ಕೆ ನಿರ್ದೇಶಕ ಸ್ಪಷ್ಟ ರೂಪುರೇಷೆ ನೀಡಬಲ್ಲ. ನಾವು ಚೌಕಟ್ಟಿನ ಹೊರಗೆ ಯೋಚಿಸಿದರೆ ಹೊಸ ಸಾಧ್ಯತೆಗಳ ಹೊಳಹು, ಹೊಸತನದ ಸೆಳಹು ಬರಲಿದೆ. ಇಂದಿನ ದಿನಗಳಲ್ಲಿ ಕೆಲ ಯುವಜನರು ಬಾರ್ ಪಬ್ಬ್ ಗಳಲ್ಲಿ, ಮೊಬೈಲಲ್ಲಿ ವ್ಯಸ್ತರಾಗಿರುವ ಸಂದರ್ಭದಲ್ಲಿ ನೀವು ನಾಟಕವನ್ನು ಆಯ್ಕೆ ಮಾಡಿ ಒಂದು ವರ್ಷ ಕಲಿತಿದ್ದೀರಿ. ನಿಮಗೆ ಒಳಿತಾಗಲಿ” ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ ವಿದ್ಯಾಥಿಗಳನ್ನು ಅಭಿನಂದಿಸಿ, ಕೊಂಕಣಿ ನಾಟಕ ಕ್ಷೇತ್ರಕ್ಕಾಗಿ ದುಡಿಯಲು ಕರೆ ಕೊಟ್ಟರು. ತರಬೇತುದಾರ ವಿಕಾಸ್ ಕಲಾಕುಲ್ ವಾರ್ಷಿಕ ವರದಿ ಮಂಡಿಸಿದರು. ಹಾಣೆಂ ವರ್ಸಾಚಿ ವರ್ದಿ ಮಾಂಡ್ಲಿ ವಿದ್ಯಾರ್ಥಿಗಳು ಕಲಿಕೆ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಲಾಕುಲ್ ಆಡಳಿತದಾರ ಅರುಣ್ ರಾಜ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. 2011ರಲ್ಲಿ ಮಾಂಡ್ ಸೊಭಾಣ್ ಸ್ಥಾಪಿಸಿದ ಕಲಾಕುಲ್ ನಾಟಕ ರೆಪರ್ಟರಿಯಲ್ಲಿ ವರ್ಷಕ್ಕೆ 7-10 ಜನ ಯುವಜನರಿಗೆ ಕಲಿಕ ಭತ್ಯೆ ನೀಡಿ ನಾಟಕ ರಂಗದ ಸಮಗ್ರ ತರಬೇತಿ ನೀಡಲಾಗುತ್ತದೆ. ಸಾಂಪ್ರದಾಯಿಕ ಹಾಗೂ ಆಧುನಿಕ ರಂಗಭೂಮಿಯ ಕಲಿಕೆ ಇರುತ್ತದೆ. ಇವರು ವರ್ಷಕ್ಕೆ ನಾಲ್ಕು ಪೂರ್ಣ ಪ್ರಮಾಣದ ನಾಟಕಗಳು, ಕೆಲ ಬೀದಿ ನಾಟಕಗಳು ಮತ್ತು ತರಗತಿ ನಿರ್ಮಾಣಗಳನ್ನು ಮಾಡುತ್ತಾರೆ. ಕಲಾಕುಲ್ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಪ್ರಸಿದ್ಧರಾಗಿದ್ದಾರೆ.
