ಮಂಗಳೂರು: ಕಲಾಕುಲ್ ರೆಪರ್ಟರಿಯ ಹೊಸ ನಾಟಕ ತಂಡಕ್ಕೆ ಚಾಲನೆ ಮತ್ತು ಅಸ್ತಿತ್ವ ತಂಡದಿಂದ ಎಮ್ಮಾವ್ಸ್ ನಾಟಕ ಪ್ರದರ್ಶನವು ದಿನಾಂಕ 02-07-2023 ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು.
ಕಲಾಕುಲ್ ರೆಪರ್ಟರಿಯ ಹೊಸ ನಾಟಕ ತಂಡಕ್ಕೆ ಚಾಲನೆ ನೀಡಿ ಮಾತನಾಡಿದ ನಾರಾವಿ ಸಂತ ಆಂಟನಿ ಕಾಲೇಜಿನ ಪ್ರಾಂಶುಪಾಲ ವಂ ಡಾ. ಆಲ್ವಿನ್ ಸೆರಾವೊ “ಕಲಾ ವಿಭಾಗಕ್ಕೆ ಮಕ್ಕಳ ಆಸಕ್ತಿ ಕುಂಠಿತವಾಗುತ್ತಿದೆ. ಬಹಳ ಕಾಲೇಜುಗಳಲ್ಲಿ ಕಲಾ ವಿಭಾಗ ಮುಚ್ಚಲ್ಪಟ್ಟಿವೆ. ಎಲ್ಲರೂ ಇಂಜಿನಿಯರಿಂಗ್, ಮೆಡಿಸಿನ್, ವಾಣಿಜ್ಯ, ಆಡಳಿತ ವಿಭಾಗಗಳಿಗೆ ಸೇರುತ್ತಿದ್ದಾರೆ. ಸಮಾಜಶಾಸ್ತ್ರ, ಮನೋಶಾಸ್ತ್ರ, ತತ್ವಶಾಸ್ತ್ರ ಇವೆಲ್ಲಾ ಜೀವಿಸಲು ಅಗತ್ಯವಿರುವ ವಿಷಯಗಳು. ಇವೆಲ್ಲಾ ಕಲಿಯದಿದ್ದರೆ ನಮ್ಮ ಸಮಾಜ ಎಲ್ಲಿ ತಲುಪಬಹುದು? ಇಂತಹ ಸಂದರ್ಭದಲ್ಲಿ ಮಾಂಡ್ ಸೊಭಾಣ್ ಕಲಾಕುಲ್ ರೆಪರ್ಟರಿಯನ್ನು ಪುನರಾರಂಭಿಸಿದ್ದು ಸಂತಸದ ಸಂಗತಿ. ಈ ಎಂಟು ಜನ ವಿದ್ಯಾರ್ಥಿಗಳು ಧೈರ್ಯದಿಂದ ನಾಟಕ ಕಲಿಯಲು ಮುಂದೆ ಬಂದಿದ್ದಾರೆ. ನಿಮಗೆ ಮೂರು ಕಿವಿ ಮಾತು ಹೇಳುತ್ತೇನೆ. ಪ್ರಥಮವಾಗಿ ಜನರನ್ನು ಅವಲೋಕಿಸಿ. ಮುಖ ಚಹರೆಗಳಲ್ಲಿ, ಅವರ ಭಾವನೆಗಳಲ್ಲಿ ಕತೆಗಳಿವೆ, ನಾಟಕಗಳಿವೆ. ಎರಡನೆಯದು ಓದು. ಓದು ಮಾತ್ರ ನಿಮ್ಮನ್ನು ಪರಿಪೂರ್ಣತೆಯತ್ತ ಒಯ್ಯಬಹುದು. ಮೂರನೆಯದು ಬೇರೆ ಬೇರೆ ನಾಟಕ ನೋಡಿ. ಬೇರೆ ಭಾಷೆಯ ನಾಟಕಗಳನ್ನು ವೀಕ್ಷಿಸಿ. ಇಂದು ಸಾಮಾಜಿಕ ಜಾಲತಾಣದಲ್ಲಿ ಹಲಭಾಷೆಯ ನಾಟಕಗಳು ಲಭ್ಯವಿವೆ. ಆಸಕ್ತಿಯಿಂದ ಕಲಿತು, ಕೊಂಕಣಿ ನಾಟಕ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿ’’ ಎಂದು ಹೇಳಿದರು.
2008ರಲ್ಲಿ ಕೊಂಕಣಿಯ ಪ್ರಥಮ ರೆಪರ್ಟರಿಯಾಗಿ ಆರಂಭಗೊಂಡ ಕಲಾಕುಲ್ 12 ತಂಡಗಳಲ್ಲಿ 100ಕ್ಕೂ ಮಿಕ್ಕಿ ಕಲಾವಿದರಿಗೆ ತರಬೇತಿ ನೀಡಿದ್ದು 52 ನಾಟಕಗಳ 250 ಪ್ರದರ್ಶನಗಳನ್ನು ಆಯೋಜಿಸಿತ್ತು. ಕೊರೊನಾ ಕಾಲದಲ್ಲಿ ಸ್ಥಗಿತಗೊಂಡ ಈ ರೆಪರ್ಟರಿ ಹೊಸ ಉತ್ಸಾಹದೊಡನೆ ಗರಿಗೆದರಿದೆ. ಅನಿತಾ ಫ್ಲಾವಿಯಾ ಮಿನೇಜಸ್ ಬಂಟ್ವಾಳ, ಡಾರ್ವಿನ್ ಲಿಸ್ಟನ್ ಆಲ್ವಾರಿಸ್ ವಾಮಂಜೂರು, ಫ್ರಾಂಕ್ಲಿನ್ ಕ್ರಿಸ್ಟನ್ ಕ್ಯಾಸ್ತೆಲಿನೊ ಪಾನೀರ್, ಜೊಯ್ಸನ್ ಡಿಸೋಜ ತಲಪಾಡಿ, ವರ್ಷಿತಾ ಫ್ಲೊರಾ ಶಕ್ತಿನಗರ, ವೆನಿಶಾ ಜೆಸ್ಸಿಕಾ ಸಲ್ಡಾನ್ಹಾ ಗುರುಪುರ, ವಿನ್ಸನ್ ಮತಾಯಸ್ ಕಿರೆಂ, ವಿಶಾಲ್ ಡಿಸೋಜ ಸೂರಿಕುಮೇರು ಇವರು 2023-24ನೇ ತಂಡದಲ್ಲಿ ಇರುವರು. ಇದು ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಆಗಿದ್ದು, ನಾಟಕ ಕ್ಷೇತ್ರದ ವಿವಿಧ ತಜ್ಞರು ಬಂದು ಸಮಗ್ರ ತರಬೇತಿ ನೀಡುವರು.
ವೇದಿಕೆಯಲ್ಲಿ ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಲುವಿ ಪಿಂಟೊ, ಕಿಶೋರ್ ಫೆರ್ನಾಂಡಿಸ್, ಸ್ಟ್ಯಾನಿ ಆಲ್ವಾರಿಸ್ ಉಪಸ್ಥಿತರಿದ್ದರು. ಕಲಾಕುಲ್ ಆಡಳಿತದಾರ ಅರುಣ್ ರಾಜ್ ರಾಡ್ರಿಗಸ್ ಸೂತ್ರ ಸಂಚಾಲನೆಗೈದರು.
ನಂತರ 259 ನೇ ತಿಂಗಳ ವೇದಿಕೆ ಕಾರ್ಯಕ್ರಮವಾಗಿ ಅಸ್ತಿತ್ವ ತಂಡದಿಂದ ಎಮ್ಮಾವ್ಸ್ ನಾಟಕ ಪ್ರದರ್ಶನವಾಯಿತು.
ಹಿಂಸೆ, ಸೋಲು, ಹತಾಶ ಮನೋಭಾವ, ಆತ್ಮಹತ್ಯೆಯತ್ತ ಸೆಳೆತ ಮತ್ತು ಅದರಿಂದ ಹೊರ ಬರುವ ತುಡಿತಗಳ ಬಗ್ಗೆ ಎರಡು ಪಾತ್ರಗಳ ಸುತ್ತ ಹೆಣೆದ ವಿಶಿಷ್ಟ ವಿನ್ಯಾಸದ ಈ ನಾಟಕವು ಮಾಂಡ್ ಸೊಭಾಣ್ ಹೊಸ ನಾಟಕ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿತ್ತು. ವಂ. ಡಾ. ಆಲ್ವಿನ್ ಸೆರಾವೊ ರಚಿಸಿ, ಕ್ರಿಸ್ಟೋಫರ್ ಡಿಸೋಜ ನಿರ್ದೇಶಿಸಿದ್ದಾರೆ. ಕ್ಲ್ಯಾನ್ವಿನ್ ಮತ್ತು ಸ್ವೀಡಲ್ ನಟನೆಯ ಈ ನಾಟಕಕ್ಕೆ ಸಂಗೀತದಲ್ಲಿ ಆ್ಯನ್ಸ್ಟಿನ್ ಮಚಾದೊ ಹಾಗೂ ಕ್ರಿಸ್ಟನ್, ಯಶಸ್ವಿನ್, ಚಿನ್ಮಯಿ, ಕೇತನ್ ಕ್ಯಾಸ್ತಲಿನೊ ಸಹಕಾರ ನೀಡಿದ್ದಾರೆ. ಬೆಳಕಿನಲ್ಲಿ ಏಂಜಲ್ಸ್ ಪಡೀಲ್ ಹಾಗೂ ಧ್ವನಿವರ್ಧಕದಲ್ಲಿ ಸುರಭಿಸೌಂಡ್ಸ್ ಸಹಕರಿಸಿದ್ದಾರೆ. ಈ ನಾಟಕದ ಪ್ರಾಯೋಜಕರು ಗ್ಲೋಬ್ ಲಿಂಕ್ ವೆಸ್ಟಾರ್ ಶಿಪಿಂಗ್ ಕಂಪೆನಿ.