ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ ಕರಾವಳಿ ಉತ್ಸವ ಪ್ರಯುಕ್ತ ಮಂಗಳೂರಿನ ಶರಧಿ ಪ್ರತಿಷ್ಠಾನ ಆಯೋಜಿಸುವ, ಅಸ್ತ್ರ ಗೋಲ್ಡ್ ಮತ್ತು ಡೈಮಂಡ್ಸ್ ಸಹಕಾರದೊಂದಿಗೆ ‘ಕಲಾಪರ್ಬ’ ಚಿತ್ರ- ಶಿಲ್ಪ- ಸಾಂಸ್ಕೃತಿಕ ಮೇಳವು ಕದ್ರಿ ಪಾರ್ಕಿನಲ್ಲಿ ದಿನಾಂಕ 09ರಿಂದ 11 ಜನವರಿ 2026ರವರೆಗೆ ನಡೆಯಲಿದೆ ಎಂದು ಚಿತ್ರಕಲಾ ಚಾವಡಿಯ ಕಾರ್ಯದರ್ಶಿ ಎಸ್.ಎಂ. ಶಿವಪ್ರಕಾಶ್ ತಿಳಿಸಿದ್ದಾರೆ.
ದಿನಾಂಕ 06 ಜನವರಿ 2026ರಂದು ಕದ್ರಿ ಪಾರ್ಕಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ “ಈಗಾಗಲೇ 120 ಮಳಿಗೆಗಳಲ್ಲಿ ರಾಜ್ಯಾದ್ಯಂತ ಕಲಾವಿದರ ಸಾವಿರಾರು ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ ಮಕ್ಕಳಿಗಾಗಿ ಚಿತ್ರ ಕಲಾಸ್ಪರ್ಧೆ ನಡೆಯಲಿದೆ. ಕಲಾವಿದರಿಗೆ ಉತ್ತೇಜನ ಸಿಗಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಉತ್ಸವದಲ್ಲಿ ದೇಶದ 120ಕ್ಕೂ ಅಧಿಕ ಕಲಾವಿದರು ಪಾಲ್ಗೊಳ್ಳಲಿದ್ದು 5,000ಕ್ಕೂ ಅಧಿಕ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ” ಎಂದು ಹೇಳಿದರು.

ದಿನಾಂಕ 09 ಜನವರಿ 2026ರಂದು ಸಂಜೆ ಗಂಟೆ 5-30ಕ್ಕೆ ಕಲಾ ಪರ್ಬ ಉದ್ಘಾಟನೆ, ಮಳಿಗೆಗಳ ಉದ್ಘಾಟನೆ ಹಾಗೂ ಶಿಲ್ಪಕಲಾ ಮಳಿಗೆಗಳ ಉದ್ಘಾಟನೆ, ಭರತನಾಟ್ಯ ನಡೆಯಲಿದೆ. ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಮೊದಲಾದವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ದಿನಾಂಕ 10 ಮತ್ತು 11 ಜನವರಿ 2026ರಂದು ಬೆಳಗ್ಗೆ ಗಂಟೆ 9-00ರಿಂದ ರಾತ್ರಿ 9-30ರವರಗೆ ‘ಕಲಾಪರ್ಬ‘ ನಡೆಯಲಿದ್ದು, ಕಲಾಪರ್ಬದ ಪ್ರಯುಕ್ತ 10 ಜನವರಿ 2026ರಂದು ಬೆಳಗ್ಗೆ 11-00ರಿಂದ ಚಿತ್ರಕಲಾ ಸಂವಾದ, ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಸಾಂಸ್ಕೃತಿಕ ಮೇಳ, ಹಿಂದೂಸ್ತಾನಿ ಕೊಳಲು ವಾದನ, ತಬಲ, ಸಾಧಕ ಕಲಾವಿದರಿಗೆ ಸನ್ಮಾನ, ಸಾನಿಧ್ಯ ವಿಶೇಷ ಮಕ್ಕಳಿಂದ ಯಕ್ಷಗಾನ, ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಆಯ್ಕೆಯಾಗಿರುವ 100ಕ್ಕೂ ಅಧಿಕ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ. 11 ಜನವರಿ 2026ರಂದು ಬೆಳಗ್ಗೆ 11-00ರಿಂದ ಶಿಲ್ಪಕಲಾ ಪ್ರಾತ್ಯಕ್ಷಿಕೆ, ಮೆಹಂದಿ ಬಿಡಿಸುವ ಸ್ಪರ್ಧೆ, ಬೀದಿ ನಾಟಕ, ಕಲಾ ಕಾರ್ಯಾಗಾರ, ಯಕ್ಷಗಾನ ಮೊದಲಾದವು ನಡೆಯಲಿವೆ. ಸಂಜೆ ಗಂಟೆ 3-00ಕ್ಕೆ ಬಿ.ಎಸ್. ದೇಸಾಯಿ ಇವರ ಶಿಷ್ಯ ವೃಂದದವರಿಂದ 5 ಅಡಿ ಎತ್ತರ, 20 ಅಡಿ ಉದ್ದದ ಪರಿಸರ ಜಾಗೃತಿಯ ಜಲವರ್ಣ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಪುನೀಕ್ ಶೆಟ್ಟಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಚಿತ್ರಕಲಾ ಚಾವಡಿಯ ಗೌರವಾಧ್ಯಕ್ಷ ಗಣೇಶ ಸೋಮಯಾಜಿ, ಅಧ್ಯಕ್ಷ ಕೋಟಿಪ್ರಸಾದ್ ಆಳ್ವ, ಉಪಾಧ್ಯಕ್ಷ ಶರತ್ ಹೊಳ್ಳ, ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ಜಿನೇಶ್ ಪ್ರಸಾದ್ ಉಪಸ್ಥಿತರಿದ್ದರು.

