ಉಡುಪಿ : ರಾಗಧನ ಉಡುಪಿ ಸಂಸ್ಥೆಯ ವತಿಯಿಂದ, ಅನಂತಪುರ ದೊಡ್ಡಮನೆ ಕುಟುಂಬದವರು ಕೊಡಮಾಡುವ ಕಲಾವಿಹಾರಿ ದಿ.ಎ. ಈಶ್ವರಯ್ಯ ಸ್ಮಾರಕ ‘ಕಲಾಪ್ರವೀಣ ಪ್ರಶಸ್ತಿ’ ಪ್ರದಾನ ಸಮಾರಂಭ ದಿನಾಂಕ 24-09-2023 ರಂದು ಉಡುಪಿ ಸಮೀಪದ ಕುಕ್ಕೆಹಳ್ಳಿಯ ‘ಕನಸು ರೆಸಾರ್ಟ್’ ನಲ್ಲಿ ನಡೆಯಿತು. ಉಡುಪಿಯ ಹಿರಿಯ ಸಾಹಿತಿ, ಅಂಕಣಕಾರ ಹಾಗೂ ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಇವರಿಗೆ ಈ ಪ್ರಶಸ್ತಿಯನ್ನು ರಾಗಧನ ಸಂಸ್ಥೆಯ ರಾಗರತ್ನ ಮಾಲಿಕೆ -16ರ ಸಂದರ್ಭದಲ್ಲಿ ನೀಡಿ ಗೌರವಿಸಲಾಯಿತು
“ಕನ್ನಡದ ವಿಷಯಗಳು ವಿಶ್ವವ್ಯಾಪಿಯಾಗುವಂತೆ ಮಾಡುವಲ್ಲಿ ಸಾಹಿತ್ಯ ವಿಮರ್ಶಕ ಮುರಳೀಧರ ಉಪಾಧ್ಯರ ಕೊಡುಗೆ ದೊಡ್ಡದು. ಲೋಕಕ್ಕೆ ಕನ್ನಡವನ್ನು ವಿಸ್ತಾರವಾಗಿ ಪರಿಚಯಿಸುವ ಸೇವೆಯನ್ನು ಅವರು ಮಾಡಿರುತ್ತಾರೆ” ಎಂದು ಪಾದೇಕಲ್ಲು ವಿಷ್ಣು ಭಟ್ಟ ಅಭಿಪ್ರಾಯ ಪಟ್ಟರು. ಅವರು ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಇವರಿಗೆ ಶ್ರೀ ಎ.ಈಶ್ವರಯ್ಯ ಸ್ಮಾರಕ ‘ಕಲಾಪ್ರವೀಣ’ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಅಭಿನಂದಿಸಿ ಮಾತನಾಡಿದರು. ಶ್ರೀಕೃಷ್ಣಯ್ಯ ಅನಂತಪುರ ಈ ಪ್ರಶಸ್ತಿಯ ಬಗ್ಗೆ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಡಾ.ಶ್ರೀಕಿರಣ ಹೆಬ್ಬಾರ್ ವಹಿಸಿದ್ದರು. ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀ ರಾಜೇಶ್ ಬಾಗ್ಲೋಡಿ ಹೊಸಬೆಟ್ಟು ಮತ್ತು ಶಿಷ್ಯರಿಂದ ಕೊಳಲು ವಾದನ, ಶ್ರೀ ಕೆ.ಆರ್.ರಾಘವೇಂದ್ರ ಆಚಾರ್ಯ, ಶ್ರೀಮತಿ ಗಾರ್ಗಿ ಎನ್.ಶಬರಾಯ, ಶ್ರೀಮತಿ ಶ್ರುತಿ ಗುರುಪ್ರಸಾದ್ ಮತ್ತು ಕು.ಶ್ರಾವ್ಯ ಬಾಸ್ರಿ ಅವರಿಂದ ‘ಭಾವಗಾನ ಸಿಂಚನ’ ಕಾರ್ಯಕ್ರಮವೂ ನಡೆಯಿತು. ಶ್ರೀಮತಿ ಜ್ಯೋತಿ ಶೈಲೇಂದ್ರ ಸ್ವಾಗತಿಸಿ ಶ್ರೀಮತಿ ಸರೋಜಾ ಆಚಾರ್ಯ ವಂದಿಸಿ, ಕಾರ್ಯದರ್ಶಿ ಉಮಾಶಂಕರಿ ಕಾರ್ಯಕ್ರಮ ನಿರೂಪಿಸಿದರು.