ಪುತ್ತೂರು : ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ದ.ಕ. ಜಿಲ್ಲಾಡಳಿತ ವತಿಯಿಂದ, ನೃತ್ಯೋಪಾಸನಾ ಕಲಾ ಅಕಾಡೆಮಿ ಪುತ್ತೂರು ಇದರ ಸಹಯೋಗದಲ್ಲಿ ದಿನಾಂಕ 20 ಡಿಸೆಂಬರ್ 2025ರಂದು ಗಡಿ-ಸಂಸ್ಕೃತಿ ಉತ್ಸವದ ಅಂಗವಾಗಿ ‘ಕಲಾರ್ಣವ-2025’ ಭಾವ-ರಾಗ-ತಾಳ ಕಾರ್ಯಕ್ರಮವು ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಾಸಕ ಅಶೋಕ್ ರೈ ಇವರು ಉದ್ಘಾಟಿಸಿ “ಕರ್ನಾಟಕದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ತುಳುವನ್ನು ಘೋಷಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಆಂಧ್ರಪ್ರದೇಶದಲ್ಲಿ 2ನೇ ಭಾಷಾ ಪ್ರಕ್ರಿಯೆ ಮಾಡಲಾದ ವಿಧಾನವನ್ನು ಅಧ್ಯಯನ ಮಾಡಲು ಪರಿಣಿತರ ತಂಡ ಕಳುಹಿಸಲಾಗಿದ್ದು, ಕೊನೆಯ ಹಂತದಲ್ಲಿದೆ. ಗಡಿನಾಡಿನ ತುಳು ಭಾಷೆಗೆ ಮಾನ್ಯತೆ ದೊರಕಿಸುವಲ್ಲಿ ಸರಕಾರದ ಮಟ್ಟದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರವೂ ಸಹಕರಿಸಬೇಕು” ಎಂದು ಮನವಿ ಮಾಡಿದರು.


ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಆಶೀರ್ವಚನ ನೀಡಿ, “ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳು ನಿಂತ ನೀರಾಗದೆ ನಿರಂತರ ಚಲನೆಯಿರಬೇಕು. ಇದಕ್ಕೆ ಸೂಕ್ತ ರೀತಿಯ ಪ್ರೋತ್ಸಾಹ ಸಿಗಬೇಕು. ಗಡಿ ಪ್ರದೇಶದಲ್ಲಿ ಕನ್ನಡವನ್ನು ಬೆಳೆಸಿ, ಉಳಿಸುವ ಕೆಲಸವನ್ನು ಪ್ರಾಧಿಕಾರ ಮಾಡುತ್ತಿರುವುದು ಸಂತೋಷದಾಯಕ. ಅಂತಾರಾಷ್ಟ್ರೀಯ ಖ್ಯಾತಿಯ ಬಾಲ ಕಲಾವಿದರಿಬ್ಬರು ಪುತ್ತೂರಿನಲ್ಲಿ ಪ್ರದರ್ಶನ ನೀಡುತ್ತಿರುವುದು ಶ್ಲಾಘನೀಯ” ಎಂದರು.

ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸಿದ್ದರು. ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಮಾತನಾಡಿ, “ಗಡಿ ಅಭಿವೃದ್ಧಿ ಪ್ರಾಧಿಕಾರವು ಗಡಿ ಪ್ರದೇಶದ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಿದೆ. ಮಂಗಳೂರಿನಲ್ಲಿ ತುಳು ಭವನ, ಕಾಸರಗೋಡು ಕನ್ನಡ ಭವನಕ್ಕೆ ಅನುದಾನ ನೀಡಿದ್ದೇವೆ. ಮಂಗಳೂರಿನ ಬ್ಯಾರಿ ಭವನಕ್ಕೂ ಅನುದಾನ ನೀಡಲಾಗಿದೆ” ಎಂದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, “ದೇವಳದ ವಠಾರದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ವ್ಯವಸ್ಥಾಪನಾ ಸಮಿತಿ ಬೆಂಬಲ ನೀಡುತ್ತಾ ಬಂದಿದೆ” ಎಂದರು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ತಹಶೀಲ್ದಾರ್ ವಿ.ಎಸ್. ಕೂಡಲಗಿ ಉಪಸ್ಥಿತರಿದ್ದರು. ನೃತ್ಯೋಪಾಸನಾ ಕಲಾ ಅಕಾಡೆಮಿಯ ಸ್ಥಾಪಕ ಟ್ರಸ್ಟಿ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಸ್ವಾಗತಿಸಿ, ನಿರ್ದೇಶಕ ಆತ್ಮಭೂಷಣ್ ಅತಿಥಿಗಳನ್ನು ಗೌರವಿಸಿದರು. ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಪ್ರೊ. ವಿಜಯಾ ಸರಸ್ವತಿ ನಿರ್ವಹಿಸಿದರು.

ಸಭಾ ಕಾರ್ಯಕ್ರಮಕ್ಕೆ ಮೊದಲು ಜಾನಪದ ನೃತ್ಯ ವೈವಿಧ್ಯ ನಡೆಯಿತು. ಕಲಾವಿದರನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಗೌರವಿಸಿದರು. ಡ್ಯಾನ್ಸ್ ಫೆಡರೇಶನ್ ಆಫ್ ಇಂಡಿಯಾದ ಯುವ ಕಲಾ ಪ್ರಶಸ್ತಿ ಪುರಸ್ಕೃತ ಬಾಲ ಕಲಾವಿದ ಮಾಸ್ಟರ್ ಶಮಂತಕ ಇವರಿಂದ ಭರತನಾಟ್ಯ ಪ್ರದರ್ಶನ ಮತ್ತು ಅಂತಾರಾಷ್ಟ್ರೀಯ ಬಾಲ ಕಲಾವಿದೆ ಕುಮಾರಿ ಗಂಗಾ ಶಶಿಧರನ್ ಇವರ ವಯಲಿನ್ ವೈಭವ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಕಲಾ ಆರಾಧಕರು ಕಲಾ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
