ಮಂಗಳೂರು : ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮಂಗಳೂರು ಕೆನರಾ ಪ್ರೌಢ ಶಾಲೆಯ ಶಿಕ್ಷಕಿ ರಾಜೇಶ್ವರಿ ಕುಡುಪು ಇವರು ರಚಿಸಿರುವ ‘ಕಲಾ ಸಂಪದ’ ಕೃತಿ ಬಿಡುಗಡೆ ಕಾರ್ಯಕ್ರಮವು ಮಂಗಳೂರಿನ ಪತ್ರಿಕಾ ಭವನದಲ್ಲಿ ದಿನಾಂಕ 18-10-2023ರಂದು ಬುಧವಾರ ನಡೆಯಿತು. ಡೊಂಗರಕೇರಿಯ ಕೆನರಾ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಶ್ರೀಮತಿ ಅರುಣಾ ಕುಮಾರಿ ಸಿ. ಪ್ರಾಸ್ತಾವಿಕ ಮಾತುಗಳನ್ನಾಡಿ ಕಲಾ ಸಂಪದ ಲೇಖಕಿಯಾದ ಶ್ರೀಮತಿ ರಾಜೇಶ್ವರಿ ಕುಡುಪು ಇವರ ಪರಿಚಯ ಮತ್ತು ಸಾಧನೆಯ ಬಗ್ಗೆ ಹೇಳಿದರು. ಕೆನರಾ ಹೈಸ್ಕೂಲಿನ ಸಂಚಾಲಕರಾದ ಶ್ರೀ ಕೆ. ಸುರೇಶ್ ಕಾಮತ್ ಇವರು ಕಲಾ ಸಂಪದ ಕೃತಿಯನ್ನು ಬಿಡುಗಡೆ ಮಾಡಿ ತಮ್ಮ ಮೆಚ್ಚುಗೆ ವ್ಯಕಪಡಿಸಿದರು.
ಆ ನಂತರ ಶ್ರೀಮತಿ ರಾಜೇಶ್ವರಿ ಕುಡುಪು ಇವರು ಒಂಬತ್ತನೇ ತರಗತಿಯ ಕಲಾ ಸಂಪದ ಪುಸ್ತಕ ರಚನೆಯ ಹಿಂದೆ ಪ್ರೋತ್ಸಾಹ ನೀಡಿದ ಅವರ ಪತಿ ಶ್ರೀ ಕೆ. ರಮಾನಂದ ರಾವ್ ಮತ್ತು ಕೆನರಾ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಅರುಣ ಕುಮಾರಿ ಹಾಗೂ ಕೆನರಾ ಪ್ರೌಢ ಶಾಲೆಯ ಆಡಳಿತ ಮಂಡಳಿಯನ್ನು ಸ್ಮರಿಸಿದರು. ಈ ಪುಸ್ತಕ ರಚನೆಯಲ್ಲಿ ರಾಜೇಶ್ವರಿ ಕೆ. ಅವರ ಸಹೋದರ ವಸಂತ ಕೇದಿಗೆ ಅವರ ಪಾತ್ರ ಹಿರಿದಾದುದು ಎಂದು ಹೇಳಿ ಅವರ ಪ್ರೋತ್ಸಾಹ ಮತ್ತು ಸಹಕಾರಕ್ಕೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದರು. ಶ್ರೀಮತಿ ಫಾತಿಮಾ ಹಿರಿಯ ಪ್ರಾಧ್ಯಾಪಕರು ಡಯಟ್ ಮಂಗಳೂರು ಇವರು ರಾಜೇಶ್ವರಿ ಕೆ. ಮತ್ತು ಪುಸ್ತಕಕ್ಕೆ ಸಹಕರಿಸಿದ ಕೆನರಾ ಪ್ರೌಢ ಶಾಲೆಯ ಎಲ್ಲಾ ಹಿರಿಯ ಸದಸ್ಯರಿಗೆ ವಂದನೆಗಳನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ವಸಂತ ಕೇದಿಗೆ ಹಾಗೂ ರಾಜೇಂದ್ರ ಕೇದಿಗೆ ಇವರುಗಳು ಉಪಸ್ಥಿತರಿದ್ದರು.
ಕೃತಿಕಾರರ ಬಗ್ಗೆ :
ಶ್ರೀಮತಿ ರಾಜೇಶ್ವರಿ ಕುಡುಪು ಇವರು ಮಂಗಳೂರಿನ ಕೆನರಾ ಪ್ರೌಢ ಶಾಲೆಯಲ್ಲಿ 30 ವರ್ಷಗಳ ಕಾಲ ಚಿತ್ರಕಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಇವರು ಈಗಾಗಲೇ ಎಂಟನೇ ತರಗತಿ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಮಾರ್ಗದರ್ಶಿ ಪುಸ್ತಕವನ್ನು ರಚಿಸಿದ್ದಾರೆ. ಮಾರ್ಗದರ್ಶಿ ಪುಸ್ತಕದಿಂದ ಮಕ್ಕಳು ಪಡೆದ ಪ್ರಯೋಜನದಿಂದ ಇನ್ನಷ್ಟು ಪ್ರೇರಿತರಾಗಿ ಒಂಬತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ‘ಕಲಾ ಸಂಪದ’ ಎನ್ನುವ ಪುಸ್ತಕವನ್ನು ರಚನೆ ಮಾಡಿದ್ದಾರೆ. ಈ ಕಲಾ ಸಂಪದ ಪುಸ್ತಕವು ಒಂಬತ್ತನೇ ತರಗತಿಯ ಮಕ್ಕಳಿಗೆ ಮಾರ್ಗದರ್ಶನವಾಗಿಲಿ ಎಂಬುದು ಅವರ ಆಶಯ. ರಾಜೇಶ್ವರಿ ಕೆ. ಇವರು ಕಲೆಯ ಮೂಲಕ ತನ್ನ ಶಾಲೆಯ ಸೌಂದರ್ಯವನ್ನು ಹೆಚ್ಚಿಸಿದ್ದಲ್ಲದೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಇತರ ಶಾಲೆಗಳ ಗೋಡೆ ಮತ್ತು ಆವರಣದ ಅಂದವನ್ನು ಹೆಚ್ಚಿಸುವಲ್ಲಿಯೂ ಶ್ರಮಿಸಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಮತಗಟ್ಟೆ ಸೌಂದರೀಕರಣಕ್ಕೆ ಸಂಬಂಧಿಸಿದ ವಿವಿಧ ಶಾಲೆಗಳನ್ನು ಸೌಂದರೀಕರಣಗೊಳಿಸುವಲ್ಲಿ ತನ್ನ ಕೈಚಳಕವನ್ನು ತೋರಿಸಿದ್ದಾರೆ.