ಮಂಗಳೂರು : ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ) ಮಂಗಳೂರು ಇವರಿಂದ ಕಲೇವಾ ಸಂಘದ ಹಿರಿಯ ಸದಸ್ಯೆ, ಸಮಾಜಪರ ಚಿಂತಕಿ ಶ್ರೀಮತಿ ಬಿ.ಎಂ. ರೋಹಿಣಿಯವರ ತಾಯಿಯ ಸ್ಮರಣಾರ್ಥ ‘ದೇವಕಿಯಮ್ಮ ದತ್ತಿನಿಧಿ’ ಕಾರ್ಯಕ್ರಮದ ಅಂಗವಾಗಿ ‘ಜೀವ ಭಾವಕೆ ಗಾನ ಸಮ್ಮಿಲನ’ವು ದಿನಾಂಕ 07-10-2023ರಂದು ಮಂಗಳೂರಿನ ಆಸೈಗೋಳಿಯಲ್ಲಿರುವ ಅಭಯ ಆಶ್ರಮದ ಧ್ಯಾನಮಂದಿರದಲ್ಲಿ ನಡೆಯಿತು.
ಅಲ್ಲಿಯ ಪ್ರಶಾಂತ ವಾತಾವರಣದಲ್ಲಿ, ಆಶ್ರಮದ ಹಿರಿಯ ಜೀವಗಳ ಮನಸ್ಸಿಗೆ ಮುದನೀಡುವ, ಉಲ್ಲಾಸ ತುಂಬುವ ಉದ್ದೇಶದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕು.ಮೇಧಾ ಉಡುಪ ಇವರು ಕೊಳಲುವಾದನ ಪ್ರಸ್ತುತ ಪಡಿಸಿದರು. ಇವರಿಗೆ ವಿದ್ವಾನ್ ಸುನಾದ ಕೃಷ್ಣ ಮೃದಂಗದಲ್ಲಿ ಸಹಕಾರ ನೀಡಿದರು. ಬಳಿಕ ಕಲೇವಾ ಸಂಘದ ಸದಸ್ಯೆಯರಾದ ಶ್ರೀಮತಿಯರಾದ ಆಶಾ ಶೆಣೈ, ರತ್ನಾವತಿ ಜೆ. ಬೈಕಾಡಿ, ಉಷಾ ಎಂ., ವನಜಾಕ್ಷಿ ಉಳ್ಳಾಲ, ಸುಮಂಗಲಾ ಕೃಷ್ಣಾಪುರ, ಅ.ನಾ. ಪೂರ್ಣಿಮಾ, ಶಶಿಕಲಾ, ಕುಮಾರಿಯರಾದ ಆದಿ ಸ್ವರೂಪ, ಲಗ್ಮ ಇವರುಗಳು ಭಾವಗಾನ ಕಾರ್ಯಕ್ರಮ ನಡೆಸಿಕೊಟ್ಟರು. ಇದರಿಂದ ಸ್ಫೂರ್ತಿಗೊಂಡು ಆಶ್ರಮದ 90 ವರ್ಷದ ಹಿರಿಯರಾದ ವಾಣಿಯಮ್ಮ ಲಯಬದ್ಧವಾಗಿ ಎರಡು ಹಾಡುಗಳನ್ನು ಹಾಡಿ ಜೀವನೋತ್ಸಾಹ ಮೆರೆದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಶ್ರಮದ ನಿರ್ವಾಹಕರಾದ ಶ್ರೀಯುತ ಶ್ರೀನಾಥ ಹೆಗಡೆಯವರು ಮಾತನಾಡಿ “ತಮ್ಮ ನಿವೃತ್ತಿ ಜೀವನದ ಬಳಿಕ ಕುಟುಂಬದವರೊಂದಿಗೆ ಪ್ರತಿ ವರ್ಷ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುತ್ತಾ ಇದ್ದವ ಈಗ ಅದನ್ನು ನಿಲ್ಲಿಸಿದ್ದೇನೆ. ಕಾರಣ ಆಶ್ರಮದಲ್ಲಿರುವ ಹಿರಿಯ ಚೇತನಗಳ ಸೇವೆಯೇ ದೇವರ ಸೇವೆ, ಪುಣ್ಯದ ಕೆಲಸ ಎಂದು ಭಾವಿಸುತ್ತಾ ಅದರಲ್ಲೇ ಸಂತೃಪ್ತಿಯನ್ನು ಕಾಣುತ್ತಿದ್ದೇನೆ” ಎಂದರು.
ಕಲೇವಾ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳೈರು ಎಲ್ಲರನ್ನೂ ಸ್ವಾಗತಿಸಿ, ಸಂಘದ ಹಾಗೂ ದತ್ತಿನಿಧಿಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಶ್ರಮದ ವತಿಯಿಂದ ದತ್ತಿನಿಧಿಯ ರೂವಾರಿ ಶ್ರೀಮತಿ ಬಿ.ಎಂ. ರೋಹಿಣಿ ಹಾಗೂ ಸಂಘದ ಹಿರಿಯ ಸದಸ್ಯೆ ಶ್ರೀಮತಿ ಗಂಗಾ ಪಾದೇಕಲ್ ಇವರುಗಳನ್ನು ಗೌರವಿಸಲಾಯಿತು. ಸಂಘದ ಪರವಾಗಿ ಶ್ರೀ ಶ್ರೀನಾಥ ಹೆಗಡೆಯವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ ಹಾಗೂ ದೇವಕಿಯಮ್ಮ ಇವರ ಮಗ ಶ್ರೀ ರೋಹಿತಾಕ್ಷ ಇವರುಗಳು ಉಪಸ್ಥಿತರಿದ್ದರು. ಮಿರಾಂದ ಹಾಗೂ ದೇವಿಕಾ ನಾಗೇಶ್ ಸಂಯೋಜಿಸಿದ್ದ, ಈ ಕಾರ್ಯಕ್ರಮದಲ್ಲಿ ಆಕೃತಿ ಭಟ್ ಆಶಯಗೀತೆ ಹಾಡಿದರು. ದೇವಿಕಾ ನಾಗೇಶ್ ವಂದಿಸಿ, ಸುಧಾ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.
ಮೇಧಾ ಉಡುಪ ಇವರು ಕೊಳಲಿನಲ್ಲಿ ಬಾಲ ಪಾಠವನ್ನು ಗುರುಗಳಾದ ರಾಜೇಶ್ ಬಾಗ್ಲೋಡಿ ಹಾಗೂ ಸತ್ಯವತಿ ಮುಡಂಬಡಿತ್ತಾಯ ಅವರಲ್ಲಿ ಅಭ್ಯಾಸ ಮಾಡಿದ್ದು, ಪ್ರಸ್ತುತ ಶಾಂತಲಾ ಸುಬ್ರಹ್ಮಣ್ಯಮ್, ಚೆನ್ನೈ ಅವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಓದುತ್ತಿರುವ ಇವರು ಹಲವಾರು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗಳಿಸಿರುತ್ತಾರೆ. ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ ಹಾಗೂ ಕೊಳಲುವಾದನದಲ್ಲಿ ಮಂಗಳೂರು, ಮೈಸೂರು, ಚೆನ್ನೈ ಇಲ್ಲಿಯ ಪ್ರಸಿದ್ಧ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ ಖ್ಯಾತಿ ಇವರದು. 2019ರಿಂದ ಕೊಳಲುವಾದನದಲ್ಲಿ ಕೇಂದ್ರ ಸರ್ಕಾರದಿಂದ ಕೊಡಮಾಡುವ ಸಿ.ಸಿ.ಆರ್.ಟಿ. ವಿದ್ಯಾರ್ಥಿವೇತನ ಪಡೆಯುತ್ತಿದ್ದಾರೆ.
ಸುನಾದ ಕೃಷ್ಣ ಅಮೈ : ವಿದ್ವಾನ್ ತಿರುಚ್ಚಿ ಕೆ.ಆರ್. ಕುಮಾರ್ ಹಾಗೂ ಮನ್ನಾರ್ ಗುಡಿ ಎ. ಈಶ್ವರನ್ ಚೆನ್ನೈ, ಇವರಲ್ಲಿ ಮೃದಂಗ ಅಭ್ಯಾಸ ನಡೆಸಿರುತ್ತಾರೆ. ಆಕಾಶವಾಣಿಯ ಎ ಗ್ರೇಡ್ ಕಲಾವಿದರಾಗಿರುವ ಇವರು ಮುಂಬಯಿಯ ಪ್ರತಿಷ್ಟಿತ ಷಣ್ಮುಖಾನಂದ ಸಭಾ ನೀಡುವ ಭಾರತ ರತ್ನ ಡಾ. ಎಂ.ಎಸ್. ಸುಬ್ಬಲಕ್ಷ್ಮೀ ಫೆಲೋಶಿಪ್ ಗಳಿಸಿರುವುದು ಮಾತ್ರವಲ್ಲದೆ, ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ನೀಡುವ Award of scholarship to young Artists 2023ರಿಂದ 2025ರವರೆಗೆ ಪಡೆದಿರುತ್ತಾರೆ.
ಕೊನ್ನಕ್ಕೋಲ್ ವಿಭಾಗದಲ್ಲಿ ಆಕಾಶವಾಣಿಯ ಬಿ ಗ್ರೇಡ್ ಕಲಾವಿದರಾಗಿದ್ದು, ಆಕಾಶವಾಣಿ ನಡೆಸುವ ರಾಷ್ಟ್ರಮಟ್ಟದ ಮೃದಂಗ ವಾದನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಚೆನ್ನೈಯ ಸಂಗೀತ ಅಕಾಡೆಮಿ ಸಹಿತ ಹಲವು ಪ್ರತಿಷ್ಟಿತ ಸಭಾಗಳಲ್ಲಿ ನಡೆದ ಕಛೇರಿಗಳಿಗೆ ಮೃದಂಗ ನುಡಿಸಿದ್ದು, ಹಿರಿಯ ಕಲಾವಿದರ ಪ್ರಶಂಸೆಗೆ ಪಾತ್ರರಾಗಿರುವುದು ಇವರ ಹೆಗ್ಗಳಿಕೆ. ಚೆನ್ನೈಯ ‘ಮುದ್ರಾ ಪ್ರಶಸ್ತಿ’ ಸಹಿತ ಹಲವು ಪುರಸ್ಕಾರ ಹಾಗೂ ಬಹುಮಾನಗಳನ್ನು ಪಡೆದಿರುತ್ತಾರೆ.