ಕೋಟ : ಬೆಂಗಳೂರಿನ ಕಲಾ ಕದಂಬ ಆರ್ಟ್ ಸೆಂಟರ್ ಸಂಸ್ಥೆಯ 2023ರ ಸಾಲಿನ ‘ಕಾಳಿಂಗ ನಾವಡ ಪ್ರಶಸ್ತಿ’ ಪ್ರದಾನ ಸಮಾರಂಭವು ಕೋಟದ ಹಂದಟ್ಟು ಉರಾಳಕೇರಿಯ ವೇದಿಕೆಯಲ್ಲಿ ದಿನಾಂಕ 25-12-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ವೇದ ಬಹ್ಮಶ್ರೀ ಅನಂತ ಪದ್ಮನಾಭ ಐತಾಳ ಇವರು ಮಾತನಾಡಿ “ಯಕ್ಷಗಾನಕ್ಕೆ ಮೆರುಗು ನೀಡಿ, ಯಕ್ಷಗಾನದ ಪರಿಚಯವೂ ಇಲ್ಲದಂತೆ ಪ್ರದೇಶಗಳಲ್ಲಿಯೂ ಯಕ್ಷಗಾನದ ಮಹತ್ವವನ್ನು ತಮ್ಮ ಗಾಯನದ ಮೂಲಕ ಸಾರಿ ಯಕ್ಷಗಾನದ ಆಸಕ್ತಿಯನ್ನು ಬೆಳೆಸಿದವರು ಕಾಳಿಂಗ ನಾವಡರು. ಕಾಳಿಂಗ ನಾವಡರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಹಿರಿಯ ಭಾಗವತ, ಪ್ರಸಂಗಕರ್ತ ಶ್ರೀ ಸುರೇಶ್ ರಾವ್ ಬಾರ್ಕೂರು ಅವರಿಗೆ ನೀಡುತ್ತಿರುವುದು ಹೆಮ್ಮೆಯ ಸಂಗತಿ” ಎಂದು ಹೇಳಿದರು.
ಕಾಳಿಂಗ ನಾವಡರ ಸಹೋದರ ಗಣಪಯ್ಯ ನಾವಡ, ಯಕ್ಷಗಾನ ಕಲಾವಿದರಾದ ಗೋವಿಂದ ಉರಾಳರು, ಗಣಪಯ್ಯ ಉರಾಳ, ಕಲಾಕದಂಬದ ಅಧ್ಯಕ್ಷ ಅಂಬರೀಶ್ ಭಟ್ ಹಾಗೂ ಕಲಾಕದಂಬದ ನಿರ್ದೇಶಕ ಡಾ. ರಾಧಾಕೃಷ್ಣ ಉರಾಳ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಳಿಕ ತೆಕ್ಕಟ್ಟೆ ಯಶಸ್ವಿ ಕಲಾಕೇಂದ್ರದ ಕಲಾವಿದರಿಂದ ‘ಗಾನ ವೈಭವ’ ಮತ್ತು ಅತಿಥಿ ಕಲಾವಿದರುಗಳಿಂದ ‘ಶರಸೇತು ಬಂಧನ’ ತಾಳಮದ್ದಳೆ ಪ್ರದರ್ಶನಗೊಂಡಿತು. ಮುರಳೀಧರ ನಾವಡ, ವಿಶ್ವನಾಥ ಉರಾಳ, ಧನಂಜಯ ನಾವಡ, ಅದಿತಿ ಉರಾಳ, ಸುದರ್ಶನ ಉರಾಳ, ಮಂಜು ಉರಾಳ ಸಹಕರಿಸಿದರು.
ಕಲಾ ಕದಂಬ ಆರ್ಟ್ ಸೆಂಟರ್ ಸಂಸ್ಥೆ :
ಯಕ್ಷಗಾನ ಕಲೆಯ ಆಸಕ್ತಿಯ ವೀಕ್ಷಣೆಗೆ, ಹವ್ಯಾಸವಾಗಿರಿಸಿ ಕಲಿತು ಕುಣಿಯುವುದಕ್ಕೆ ಅಥವಾ ಅದನ್ನೇ ಬದುಕಿನ ದಾರಿಯಾಗಿಸಿಕೊಳ್ಳುವವರಿಗೆ ಕಲಾ ಕದಂಬ ಆರ್ಟ್ ಸೆಂಟರ್ ಒಂದು ಉತ್ತಮ ತಾಣವೆನಿಸಿದೆ. ಡಾ. ರಾಧಾಕೃಷ್ಣ ಉರಾಳ ಕೆ. ಅವರ ಕಲ್ಪನೆ ಪರಿಶ್ರಮದ ಫಲವಾಗಿ 2009ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡ ಈ ಕಲಾಸಂಸ್ಥೆ ಯಕ್ಷಗಾನ, ನಾಟಕ, ನೃತ್ಯ, ವಾದ್ಯ ಸಂಗೀತ, ಜಾನಪದ, ಸಿನೆಮಾ.. ಹೀಗೆ ಎಲ್ಲಾ ರಂಗದಲ್ಲೂ ತನ್ನ ಛಾಪು ಬೀರಿದೆ. ಭಾರತೀಯ ರಂಗ ಕಲೆಗಳ ಪ್ರದರ್ಶನ, ಪರಿಚಯ, ತರಭೇತಿ, ಪರಿಣತಿ, ಶಾಲಾ ಮಕ್ಕಳಿಗೆ ಕಲಾ ಶಿಕ್ಷಣದ ಆಶಯಗಳನ್ನಿರಿಸಿಕೊಂಡು ಸಾಧನೆಯ ಹಾದಿಯಲಿ ಮುನ್ನಡೆದಿದೆ.
ಯಕ್ಷಗಾನ ಭಾಗವತಿಕೆಯ ಸ್ಥಾನಕ್ಕೆ ತಾರಾ ಮೆರುಗು ತಂದುಕೊಟ್ಟ ‘ಕಾಳಿಂಗ ನಾವಡ’ ಯಕ್ಷಗಾನ ಪ್ರಪಂಚ ಮರೆಯದ ಹೆಸರು. ನಾರ್ಣಪ್ಪ ಉಪ್ಪೂರರ ಶಿಷ್ಯರಾಗಿ ಮೂವತ್ತೆರಡನೇ ವಯಸ್ಸಿಗೇ ಪ್ರಶಂಸೆಯ ಗಿರಿಯೇರಿ, ಮೆರೆದು ಮರೆಯಾದವರು. ಕುಳಿತು, ಕಲಿಸಿ ಶಿಷ್ಯರನ್ನು ಸಿದ್ಧಮಾಡದಿದ್ದರೂ ಇಂದಿಗೂ ತಮ್ಮ ಗಾನ ಮೋಡಿಯಿಂದ ಲಕ್ಷಾಂತರ ಪ್ರೇಕ್ಷಕರನ್ನು, ನೂರಾರು ಮಂದಿ ಗಾನಾಸಕ್ತರನ್ನು ಭಾಗವತಿಕೆಗೆ ಪ್ರೇರೇಪಿಸುತ್ತಿರುವ ಶಕ್ತಿ. ತಂದೆ ರಾಮಚಂದ್ರ ನಾವಡ ಹಾಗೂ ತಮ್ಮ ವಿಶ್ವನಾಥ ನಾವಡ ಕೂಡಾ ಭಾಗವತಿಕೆಗೆ ಹೆಸರಾಗಿದ್ದು, ಗುಂಡ್ಮಿ ಎಂದರೆ ನಾವಡರ ಮನೆ ಎಂಬ ನೆನಪು.. ಯಕ್ಷಕಲಾಸಕ್ತರ ಮನ ಮನದಲ್ಲಿ ಈಗಲೂ ಮರೆಯಲಾಗದ ನಾದಲಹರಿಯ ತರಂಗವನ್ನಿರಿಸಿದೆ.
ಈ ಯಕ್ಷಲೋಕದ ಗಾನದೇವತೆಯ ನೆನಪಿನಲ್ಲಿ ಕಲಾ ಕದಂಬ ಆರ್ಟ್ ಸೆಂಟರ್ ಪ್ರತೀ ವರ್ಷ ಯಕ್ಷಗಾನದ ಸಾಧಕರೊಬ್ಬರಿಗೆ ‘ಕಾಳಿಂಗ ನಾವಡ ಪ್ರಶಸ್ತಿ’ ನೀಡುತ್ತಿದೆ. ಹತ್ತು ಸಾವಿರ ನಗದು, ಬೆಳ್ಳಿ ತಟ್ಟೆ, ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ‘ಕಾಳಿಂಗ ನಾವಡ ಪ್ರಶಸ್ತಿ’ ಒಳಗೊಂಡಿರುತ್ತದೆ. ಗುಂಡ್ಮಿ ಸದಾನಂದ ಐತಾಳ್, ಸುಬ್ರಹ್ಮಣ್ಯ ಧಾರೇಶ್ವರ್, ಕೆಪ್ಪೆಕೆರೆ ಸುಬ್ರಾಯ ಹೆಗಡೆ, ಎಳ್ಳಾರೆ ವೆಂಕಟ್ರಾಯ ನಾಯಕ್, ನೆಬ್ಬೂರು ನಾರಾಯಣ ಹೆಗಡೆ, ಕರ್ಕಿ ಪ್ರಭಾಕರ ಭಂಡಾರಿ, ಕೆ.ಪಿ. ಹೆಗ್ಡೆ, ಟಿ. ಜಯಂತ್ ಕುಮಾರ್, ಮಂದಾರ್ತಿ ರಾಮಕೃಷ್ಣ, ಶ್ರೀಧರ ಹೆಬ್ಬಾರ್, ಗೋವಿಂದ ಉರಾಳ, ಶಂಕರ ಭಾಗವತ ಯಲ್ಲಾಪುರ ಹಾಗೂ ಬಿದ್ಕಲ್‌ಕಟ್ಟೆ ಕೃಷ್ಣಯ್ಯ ಆಚಾರ್ಯ ಅವರು ಈಗಾಗಲೇ ‘ಕಾಳಿಂಗ ನಾವಡ ಪ್ರಶಸ್ತಿ’ಗೆ ಬಾಜನರಾಗಿದ್ದಾರೆ.
ಈ ಸಾಲಿನ ‘ಕಾಳಿಂಗ ನಾವಡ ಪ್ರಶಸ್ತಿ’ಯನ್ನು ಸುಮಾರು 25 ವರ್ಷಗಳಿಂದ ಹೂವಿನ ಕೋಲಿನ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿರುವ ಹಲವಾರು ಯಕ್ಷಗಾನ ಮೇಳಗಳಲ್ಲಿ ತಮ್ಮ ಭಾಗವತಿಕೆಯ ಮೂಲಕ ಖ್ಯಾತ ಭಾಗವತರು ಎನಿಸಿಕೊಂಡಿರುವ ಹಾಗೂ ಪ್ರಸಂಗಕರ್ತರು ಆದ ಶ್ರೀ ಸುರೇಶ್ ರಾವ್ ಬಾರ್ಕೂರು ಅವರಿಗೆ ನೀಡಿ ಗೌರವಿಸಲಾಗಿದೆ.