ಮಂಗಳೂರು : ಕಲ್ಲಚ್ಚು ಪ್ರಕಾಶನದ 14ನೇ ಆವೃತ್ತಿಯ 2023ನೇ ಸಾಲಿನ ‘ಕಲ್ಲಚ್ಚು ಪ್ರಶಸ್ತಿ’ ಪ್ರದಾನ ಸಮಾರಂಭ ಹಾಗೂ ಮಹೇಶ ಆರ್.ನಾಯಕ್ ಅವರ ಕೃತಿ ‘ಮೊಹಬ್ಬತ್ ಕಾ ದಾಗ…’ ಕಥಾ ಸಂಕಲನದ ಬಿಡುಗಡೆ ಸಮಾರಂಭವು ದಿನಾಂಕ 02-09-2023ರಂದು ನಡೆಯಿತು.
ಈ ಪ್ರತಿಷ್ಠಿತ “ಕಲ್ಲಚ್ಚು ಪ್ರಶಸ್ತಿ” ಸ್ವೀಕರಿಸಿದ ಹಿರಿಯ ಸಾಹಿತಿ ತುರುವೇಕೆರೆ ಪ್ರಸಾದ್ “ಸಾಹಿತ್ಯ, ಕಿರುತೆರೆ ಮತ್ತು ಸಿನಿಮಾರಂಗದ ಬರವಣಿಗೆ ಕ್ಷೇತ್ರದಲ್ಲಿ ನಿರಂತರ ಅಧ್ಯಯನ ಹಾಗೂ ತಾದ್ಯಾತ್ಮಕತೆ ಇಲ್ಲದೆ ಯಶಸ್ಸು ಖಂಡಿತ ಅಸಾಧ್ಯ ಹಾಗಾಗಿ ವಿಪುಲ ಅವಕಾಶ ಇರುವ ಇದಕ್ಕೆ ಪಾದಾರ್ಪಣೆ ಮಾಡುವ ಯುವ ಜನತೆ ಇದನ್ನು ಸ್ಪಷ್ಟ ಮನಗಂಡು ಮುನ್ನಡೆಯಬೇಕು” ಎಂಬ ಸಂದೇಶವನ್ನು ನೀಡಿ ಕಿರುತೆರೆ ಚಲನಚಿತ್ರ ರಂಗದ ಬರವಣಿಗೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಿ ಸಾಹಿತ್ಯದ ಮೂಲಮಂತ್ರವಾಗಿರುವ ಕನ್ನಡ ಶಾಲೆಗಳನ್ನು ಉಳಿಸುವ ಕೈಂಕರ್ಯವನ್ನು ನಾವು ಕಟಿಬದ್ಧರಾಗಿ ಮಾಡುವಂತೆ ಕರೆನೀಡಿದರು. ಗೋವಿಂದದಾಸ ಕಾಲೇಜು ಪ್ರಾಂಶುಪಾಲ ಪ್ರೊ.ಪಿ.ಕೃಷ್ಣಮೂರ್ತಿ ಅಭಿನಂದನಾ ಮಾತುಗಳಾನ್ನಾಡಿದರು.
ಈ ಸಂದರ್ಭದಲ್ಲಿ “ಮೊಹಬ್ಬತ್ ಕಾ ದಾಗ” ಕಥಾಸಂಕಲನ ಬಿಡುಗಡೆಗೊಂಡಿತು. ವಿಶ್ರಾಂತ ಪ್ರಾಂಶುಪಾಲ ಡಾ ಸತ್ಯನಾರಾಯಣ ಮಲ್ಲಿಪಟ್ಟಣ. ಡಾ. ವಿಜಯಲಕ್ಷ್ಮಿ ನೇರಳಕೋಡಿ, ಶ್ರೀನಿಧಿ ಆರ್.ಎಸ್, ಮೌಶೀರ್ ಅಹಮದ್ ಸಾಮಣಿಗೆ, ಡಾ.ಮೀನಾಕ್ಷಿ ರಾಮಚಂದ್ರ, ಪೊ.ಡಾ.ಝೀಟಾ ಲೋಬೊ, ಲೇಖಕ ಎನ್.ವಿ.ಪೌಲೋಸ್, ಮಾರ್ಷಲ್ ಡಿಸೋಜ, ಕಲಾವಿದರಾದ ವಿಜಯಕುಮಾರ್ ಕೊಡಿಯಲ್ ಬೈಲ್, ರಾಜೇಂದ್ರ ಕೇದಿಗೆ ಮೊದಲಾದವರು ಉಪಸ್ಥಿತರಿದ್ದರು. ಮಹೇಶ ಆರ್.ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಯುವ ಚಿತ್ರಕಲಾವಿದೆ ಬೆಂಗಳೂರಿನ ಶಾರ್ವೀ ನಾಯಕ್ ಅವರನ್ನು ಅಭಿನಂದಿಸಲಾಯಿತು.