ಪುತ್ತೂರು : ಗಂಗಾ ಪ್ರತಿಷ್ಠಾನ ಕುಮಾರಪುರ ಅರ್ಪಿಸುವ ‘ಕಲ್ಲುರ್ಟಿ ಕಥನ’ ಕಲ್ಲುರ್ಟಿ ದೈವದ ಕುರಿತಾದ ಒಂದು ಸಮಗ್ರ ಮತ್ತು ರೋಚಕವಾದ ಗೀತ ಕಥನ ‘ನಮ್ಮ ಕೊಂಬಾರು’ ಯೂಟ್ಯೂಬ್ ವಾಹಿನಿಯಲ್ಲಿ ದಿನಾಂಕ 14 ಜನವರಿ 2026ರಂದು ಬಿಡುಗಡೆಗೊಂಡಿದೆ ಎಂದು ಯೂಟ್ಯೂಬ್ ಸಂಚಾಲಕ ಹಾಗೂ ಬೆಂಗಳೂರಿನಲ್ಲಿ ಹೈಕೋರ್ಟ್ ವಕೀಲರಾಗಿರುವ ಪ್ರವೀಣ ಕುಮಾರ್ ಕಟ್ಟೆ ತಿಳಿಸಿದ್ದಾರೆ. ಹಿರಿಯ ಕವಿ, ಸಾಹಿತಿ ಮತ್ತು ಯಕ್ಷಗಾನ ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಇವರ ಸಾಹಿತ್ಯಕ್ಕೆ ಖ್ಯಾತ ಗಾಯಕ ಎಂ. ರವೀಂದ್ರ ಪ್ರಭು ಧ್ವನಿ ನೀಡಿದ್ದಾರೆ.

ಕಥಾ ಹಂದರ : ತುಳುನಾಡಿನ ಸತ್ಯ ದೇವತೆ ಕಾರಣೀಕದ ಶ್ರೀ ಕಲ್ಲುರ್ಟಿ ದೈವದ ಆರಾಧನಾ ಕ್ಷೇತ್ರಗಳು ಹಲವು. ಬಂಟ್ವಾಳ ತಾಲೂಕಿನ ಪಣೋಲಿಬೈಲು, ಬಾಳ್ತಿಲ ಗ್ರಾಮದ ಚೆಂಡೆ ಮೊದಲಾದೆಡೆ ನೆಲೆ ನಿಂತು ನಂಬಿದವರನ್ನು ಪವಾಡ ಸದೃಶವಾಗಿ ಅನುಗ್ರಹಿಸುವ ಕಲ್ಲುರ್ಟಿ ಅಮ್ಮನ ಕಥನವು ಅಷ್ಟೇ ಹೃದಯಂಗಮವಾದುದು.
ತುಳು ಜನಪದ ಸಾಹಿತ್ಯದಲ್ಲಿ ಕೆಲ್ಲತ್ತ ಮಾರ್ನಾಡಿನ ಬಡ ಕಲ್ಲು ಕುಟಿಗರ ಕುಟುಂಬವೊಂದರಲ್ಲಿ ಹುಟ್ಟಿದ ಅಣ್ಣ – ತಂಗಿಯರು ವೀರ ಕಲ್ಕುಡ ಮತ್ತು ಕಾಳಮ್ಮರು ಆಳರಸರ ದೌರ್ಜನ್ಯಕ್ಕೊಳಗಾಗಿ ತಮ್ಮ ಭೌತಿಕ ಕಾಯವನ್ನು ತ್ಯಜಿಸಿ ಮಾಯಾ ರೂಪ ಹೊಂದಿ ಕಲ್ಕುಡ – ಕಲ್ಲುರ್ಟಿ ಎಂಬ ಅವಳಿ ದೈವಗಳಾಗಿ ದುಷ್ಟರನ್ನು ದಂಡಿಸಿ ಶಿಷ್ಟರನ್ನು ಸಲಹುವ ರುದ್ರ ರಮಣೀಯ ಕಥೆ ಪಾಡ್ದನ ರೂಪದಲ್ಲಿ ಪ್ರಚಲಿತವಾಗಿದೆ. ಇದನ್ನು ಆಧರಿಸಿ ಭಾಸ್ಕರ ರೈ ಕುಕ್ಕುವಳ್ಳಿಯವರು ಈ ಕಥನ ಕಾವ್ಯವನ್ನು ರಚಿಸಿದ್ದಾರೆ.

ನಿರ್ಮಾಣ ನೆರವು : ಕಲ್ಲಡ್ಕ ಸಮೀಪದ ಚೆಂಡೆ ಶ್ರೀ ಕಲ್ಲುರ್ಟಿ ದೈವಸ್ಥಾನದ ಆಡಳಿತ ಮೋಕ್ತೇಸರ, ನ್ಯಾಯವಾದಿ ಪುಳಿಂಚ ಶ್ರೀಧರ ಶೆಟ್ಟಿಯವರು ಈ ಧ್ವನಿ ಸುರುಳಿಯ ನಿರ್ಮಾಪಕರು. ಸಂಗೀತ ಸಂಯೋಜನೆ ಮತ್ತು ಧ್ವನಿ ಮುದ್ರಣದಲ್ಲಿ ಸಹಕರಿಸಿದವರು ಕವಿ, ನಾಟಕಕಾರ ಶಶಿರಾಜ್ ರಾವ್ ಕಾವೂರು ಮತ್ತು ಕ್ಯಾಡ್ ಮೀಡಿಯಾದ ಶಿನೋಯ್ ಜೋಸೆಫ್ ಸ್ವರ ಸಂಯೋಜಿಸಿ, ಹಾಡಿದವರು ಎಂ. ರವೀಂದ್ರ ಪ್ರಭು. ವಿಡಿಯೋ ಸಂಕಲನ ಬೆಂಗಳೂರಿನ ಶಿಲ್ಪಾ ಸುನಿಲ್. ವಿಡಿಯೋ ನಿರ್ಮಾಣ ಮತ್ತು ಪ್ರಸ್ತುತಿ ವಕೀಲ ಪ್ರವೀಣ ಕಟ್ಟೆ ಅವರದು.
ಅತ್ಯುತ್ತಮ ದೃಶ್ಯ ಸಂಯೋಜನೆಯೊಂದಿಗೆ ‘ನಮ್ಮ ಕೊಂಬಾರು – ಸಂಸ್ಕೃತಿಯ ತೇರು’ ಯೂ ಟ್ಯೂಬ್ ಚ್ಯಾನೆಲ್ ನಲ್ಲಿ ಪ್ರಸಾರವಾಗುವ ‘ಕಲ್ಲುರ್ಟಿ ಕಥನ’ ಗೀತ ಚಿತ್ರವನ್ನು ಸಹೃದಯರು ವೀಕ್ಷಿಸುವುದರೊಂದಿಗೆ ನೂತನವಾಗಿ ಆರಂಭಗೊಂಡಿರುವ ಚ್ಯಾನೆಲ್ ಗೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ಅವರು ವಿನಂತಿಸಿದ್ದಾರೆ.
