ಮಂಗಳೂರು : ತೆಂಕುತಿಟ್ಟು ಯಕ್ಷಗಾನದ ಬಹುಮುಖ ಪ್ರತಿಭೆಯ ಪ್ರಸಿದ್ದ ಯುವ ವೇಷಧಾರಿ, ಯಕ್ಷ ಗುರು, ಸಂಘಟಕ, ಪ್ರಯೋಗಶೀಲ ನಿರ್ದೇಶಕ ರಾಕೇಶ್ ರೈ ಅಡ್ಕ ಇವರಿಗೆ ಕದ್ರಿ ಕಂಬಳಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ ಪ್ರದಾನವು ದಿನಾಂಕ 11 ಜನವರಿ 2026ರಂದು ಕದ್ರಿ ಕಂಬಳ ಗುತ್ತಿನ ಪಾವಂಜೆ ಮೇಳದ ಸೇವೆ ಆಟದ ವೇದಿಕೆಯಲ್ಲಿ ಜರಗಲಿದೆ.
ರಾಕೇಶ್ ರೈ ಅಡ್ಕ ಇವರು ಪ್ರಖರ ರಾಷ್ಟ್ರೀಯವಾದಿ ಸಂಘಟಕ, ಶಿಕ್ಷಕ ದಿ. ಜಲಂಧರ ರೈ ಇವರ ಶಿಷ್ಯರಾಗಿ ಹವ್ಯಾಸಿ ವಲಯದಲ್ಲಿ ಸಿದ್ದಿ ಪ್ರಸಿದ್ದಿ ಪಡೆದು ಪುಂಡು, ಸ್ತ್ರೀ, ರಾಜವೇಷ ನಿರ್ವಹಣೆಯಲ್ಲಿ ಅನುಪಮ ಸಾಧನೆ ಮಾಡಿ ಕಟೀಲು, ಬಪ್ಪನಾಡು ಮೇಳಗಳಲ್ಲಿ ಮೆರೆದು, ಪಟ್ಲ ಭಾಗವತರ ಪಾವಂಜೆ ಮೇಳದಲ್ಲಿ ಕಲಾ ವ್ಯವಸಾಯ ಮಾಡುತ್ತಾ ಬಪ್ಪನಾಡು ಮೇಳದಲ್ಲಿ ಅತಿಥಿ ಕಲಾವಿದರರಾಗಿ ದುಡಿಯುವ ಕಲಾವಿದರು. ಮೇಳಗಳ ತಿರುಗಾಟದ ಜೊತೆಯಲ್ಲೇ ಮೂರು ಜಿಲ್ಲೆಗಳಲ್ಲಿ 19 ಕೇಂದ್ರಗಳಲ್ಲಿ ಯಕ್ಷಗಾನ ತರಬೇತಿ ನೀಡುವ ಯಕ್ಷ ಗುರು ಇವರಾಗಿದ್ದಾರೆ.

ಕದ್ರಿ ಕಂಬಳಗುತ್ತಿನ ಯಜಮಾನರಾಗಿ, ಹವ್ಯಾಸಿ ಯಕ್ಷಗಾನ ಅರ್ಥಧಾರಿಗಳಾಗಿದ್ದ ಬಾಲಕೃಷ್ಣ ಶೆಟ್ಟಿಯವರ ಸ್ಮರಣೆಯೊಂದಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಖ್ಯಾತ ವೈದ್ಯ ಡಾ. ಜಯಶಂಕರ ಮಾರ್ಲ ಇವರು ಪ್ರಶಸ್ತಿ ವಿತರಿಸಲಿರುವರು ಎಂದು ಸೇವಾರ್ಥಿ ಉಷಾ ನವನೀತ ಶೆಟ್ಟಿ ತಿಳಿಸಿದ್ದಾರೆ. ಕದ್ರಿ ಕಂಬಳ ಗದ್ದೆಯಲ್ಲಿ ಪಾವಂಜೆ ಮೇಳದವರಿಂದ ‘ಶ್ರೀ ದೇವೀ ಮಹಾತ್ಮೆ’ ಯಕ್ಷಗಾನ ಬಯಲಾಟ ಜರಗಲಿದೆ.

