ವಿಜಯಪುರ : ಕುಮಾರವ್ಯಾಸ ಭಾರತ ವೇದಿಕೆಯಿಂದ `ಕನಕದಾಸರ ಜಯಂತಿ’ ಕಾರ್ಯಕ್ರಮವನ್ನು ದಿನಾಂಕ 30 ನವೆಂಬರ್ 2024ರ ಶನಿವಾರದಂದು ವಿಜಯಪುರದ ಗುಜ್ಜರ ಗಲ್ಲಿಯ ಶ್ರೀ ಗುರುವಿಠ್ಠಲ ಕೃಪಾ ಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದರಬಾರ ಶಾಲೆಯ ನಿವೃತ್ತ ಶಿಕ್ಷಕಿಯಾದ ಶ್ರೀಮತಿ ಇಂದಿರಾ ಗೋವಿಂದ ಪುರೋಹಿತ ಮಾತನಾಡಿ “ಕನಕದಾಸರು ಪ್ರತಿಭಾವಂತ ಹಾಗೂ ವಿನಯವಂತ ವ್ಯಕ್ತಿತ್ವವನ್ನು ಹೊಂದಿದ್ದರು. ಪುರಂದರ ದಾಸರ ಜೊತೆಗೆ ಕನಕದಾಸರ ಹೆಸರು ಕರ್ನಾಟಕದಲ್ಲಿ ಅತೀ ಖ್ಯಾತಿಯನ್ನು ಪಡೆದಿದೆ. ಇವರು ಕೀರ್ತನೆಗಳ ಜೊತೆಗೆ ಮಹಾಕಾವ್ಯಗಳಾದ ನಳ-ದಮಯಂತಿ, ಹರಿಭಕ್ತಿಸಾರ, ರಾಮಧಾನ್ಯ ಚರಿತೆ, ಮೋಹನ ತರಂಗಿಣಿ ಮುಂತಾದ ಕಾವ್ಯಗಳನ್ನು ಬರೆದಿರುವುದು ಕನ್ನಡಿಗರಿಗೆ ಮಾಡಿದ ಮಹದುಪಕಾರವಾಗಿದೆ. `ಕೂಡಿ ಬಾಳಿದರೆ ಸ್ವರ್ಗಸುಖ’ ಎಂಬ ನೀತಿ ವಾಕ್ಯವನ್ನು ಕನಕದಾಸರು ಸಮಾಜದ ಎಲ್ಲ ವರ್ಗಗಳಿಗೆ ನೀಡಿದರು.” ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಹಿರಿಯ ಗಮಕಿ ಶ್ರೀಮತಿ ಶಾಂತಾ ಕೌತಾಳ್ ಹಾಗೂ ಕಲ್ಯಾಣರಾವ್ ದೇಶಪಾಂಡೆ ಇವರುಗಳಿಂದ ಕನಕದಾಸರ ನಳಚರಿತ್ರೆಯ ‘ಕಾರ್ಕೋಟಕ’ ಪ್ರಸಂಗದ ಗಮಕ ಕಾವ್ಯವಾಚನ ಹಾಗೂ ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು. ನಂತರ ವಿಜಯಪುರ ನಗರದ ಕಲಾವಿದರಿಂದ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ಜರುಗಿತು. ಶ್ರೀಮತಿ ಸುವರ್ಣಾ ಹಳ್ಳೂರ್, ಶ್ರೀಮತಿ ವೀಣಾ ಥಿಟೆ, ಶ್ರೀಮತಿ ಲತಾ ಜಹಾಗೀರದಾರ್, ಶ್ರೀಮತಿ ಶಾಂತಾ ಕೌತಾಳ್, ಶ್ರೀ ವಿಶಾಲ್ ಕಟ್ಟಿ ಇವರುಗಳು ಕನಕದಾಸರ ಕೀರ್ತನೆಗಳಾದ `ತೊರೆದು ಜೀವಿಸಬಹುದೇ’, `ರಾಮ ಹರೇ’ ಮುಂತಾದ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿದರು. ಇದೇ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ-2024 ಪ್ರಶಸ್ತಿ ವಿಜೇತ ಹಿಂದುಸ್ತಾನಿ ಸಂಗೀತ ಕಲಾವಿದೆ ಶ್ರೀಮತಿ ಲತಾ ಜಹಾಗೀರದಾರ್, ನಾಟಕ ಅಕಾಡೆಮಿಯ ಉತ್ತರ ಕರ್ನಾಟಕ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ಶ್ರೀ ಶಶಿಧರ ತಾವರಗೇರಿ, ಮುಖ್ಯ ಅತಿಥಿಗಳಾದ ಶ್ರೀ ಗೋವಿಂದ ಪುರೋಹಿತ ಹಾಗೂ ಶ್ರೀಮತಿ ಇಂದಿರಾ ಗೋವಿಂದ ಪುರೋಹಿತ ಇವರುಗಳನ್ನು ಫಲಪುಷ್ಪ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಲತಾ ಜಹಾಗೀರದಾರ್ “ನಗರದ ಕುಮಾರವ್ಯಾಸ ಭಾರತ ಗಮಕ ವೇದಿಕೆಯು ಗಮಕದ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಬಗೆ ಪ್ರಶಂಶನಾರ್ಹ. ವಯೋವೃದ್ಧ ಹಿಂದುಸ್ತಾನಿ ಸಂಗೀತ ಕಲಾವಿದ ಹಾಗೂ ಗಮಕಿಗಳೂ ಆದ ಶ್ರೀಮತಿ ಶಾಂತಾ ಕೌತಾಳ್ ಇವರ ಉತ್ಸಾಹ ಹಾಗೂ ಕಲಾ ಸೇವೆಯು ಎಲ್ಲ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ, ಇದು ಹೀಗೆ ಮುಂದುವರೆಯಲಿ.” ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಶಶಿಕಲಾ ಅಪರಂಜಿ, ಶ್ರೀಮತಿ ಮಂಜುಳಾ ವಿಜಯೀಂದ್ರ ಪಾಟೀಲ್, ಶ್ರೀಮತಿ ಸ್ಮಿತಾ ಮೂರ್ತಿ, ಶ್ರೀಮತಿ ಪ್ರಮಿಲಾ ದೇಶಪಾಂಡೆ, ಶ್ರೀಮತಿ ಮೀನಾಕ್ಷಿ ಜೋಶಿ, ಶ್ರೀಮತಿ ಪದ್ಮಾ ಕುಲಕರ್ಣಿ, ಶ್ರೀಮತಿ ಸುಲಭಾ ಕುಲಕರ್ಣಿ, ಶ್ರೀ ಜಗನ್ನಾಥ್ ಅಳ್ಳಗಿ, ಶ್ರೀ ವಿನಾಯಕ್ ಕಟ್ಟಿ, ಗಮಕ ಪರಿಷತ್ ವಿಜಯಪುರ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಿ.ಎಂ.ಪಾಟೀಲ ಮುಂತಾದವರು ಭಾಗವಹಿಸಿದ್ದರು.