ಕೋಣಾಜೆ : ಮಂಗಳೂರು ವಿಶ್ವವಿದ್ಯಾನಿಲಯ, ಕನಕದಾಸ ಸಂಶೋಧನ ಕೇಂದ್ರ, ಮಂಗಳ ಗಂಗೋತ್ರಿ ಇದರ ವತಿಯಿಂದ ‘ಕನಕ ಜಯಂತಿ’ ಪ್ರಯುಕ್ತ ಎಸ್.ವಿ.ಪಿ. ಸಂಸ್ಥೆಯ ಪ್ರೊ. ವಿವೇಕ್ ರೈ ವಿಚಾರವೇದಿಕೆಯಲ್ಲಿ ದಿನಾಂಕ 12 ನವೆಂಬರ್ 2025ರಂದು 2025-26ನೇ ಸಾಲಿನ ಶೈಕ್ಷಣಿಕ ವರ್ಷದ ‘ಕನಕ ಕೀರ್ತನ ಗಂಗೋತ್ರಿ’ ಶೈಕ್ಷಣಿಕ ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಕನಕದಾಸರ ಕೀರ್ತನೆಗಳ ಸಮೂಹ ಗಾಯನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಶಿವಮೊಗ್ಗದ ಕಲಾವಿದರು ಮತ್ತು ಸಂಶೋಧಕರಾದ ಡಾ. ಕೆ.ಎಸ್. ಪವಿತ್ರ “ಸಂಗೀತ, ಸಾಹಿತ್ಯದ ಮೂಲಕ ಸಾಮಾಜಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಕನಕದಾಸರ ಕಾವ್ಯ, ಸಾಹಿತ್ಯ ಸಂಗತಿಗಳು ಅತ್ಯಂತ ವಿಸ್ತಾರವಾಗಿದೆ. ಅವರ ಸಾಹಿತ್ಯ, ಕೀರ್ತನೆಗಳ ಜೊತೆ ಜೊತೆಯಾಗಿ ಭಕ್ತಿ, ವೈಚಾರಿಕತೆ, ಭಾವನಾ ತೀವ್ರತೆಯೂ ಇರುವುದನ್ನು ನಾವು ಗಮನಿಸಬಹುದು. ಕನಕದಾಸ ಜೀವನ ಚರಿತ್ರೆಯನ್ನು ನಾವು ಓದಿದರೆ ಅದರಲ್ಲಿ ಅವರ ಪಾಡು ಹಾಡಾಗಿ ಹರಿದಿದೆ ಎಂಬುವುದು ನಮಗೆ ಸ್ಪಷ್ಟವಾಗುತ್ತದೆ. ಅವರ ಕಾವ್ಯ, ಕೀರ್ತನೆಗಳನ್ನು ಹಾಡುವುದರ ಜೊತೆಗೆ ಅದರ ಅರ್ಥ, ವೈಶಿಷ್ಟ್ಯತೆಯನ್ನೂ ಅರ್ಥ ಮಾಡಿಕೊಳ್ಳಬೇಕು. ಕನಕದಾಸರ ಕೀರ್ತನೆ, ಸಾಹಿತ್ಯದ ಶಕ್ತಿ ಹಾಗೂ ಮೌಲ್ಯವನ್ನು ಅರಿತುಕೊಂಡರೆ ನಿಜವಾದ ಕನಕದಾಸರನ್ನು ಕಾಣಲು ಸಾಧ್ಯ. ರಸಾನುಭವವನ್ನು ಸವಿಯಲು ಸಾಧ್ಯವಾಗುತ್ತದೆ” ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ದೇವೇಂದ್ರಪ್ಪ ಇವರು ಮಾತನಾಡಿ, “ಕನಕದಾಸರು ಹದಿನೈದನೇ ಶತಮಾನದಲ್ಲಿ ಹುಟ್ಟಿ ಮೌಲ್ಯಗಳ ಬುಟ್ಟಿಯನ್ನೇ ಬಿಟ್ಟು ಹೋಗಿದ್ದಾರೆ. ಅಂದಿನ ಕಾಲದ ಅವರ ಕಾವ್ಯಗಳಲ್ಲಿರುವ ಸಮಾಜಮುಖ ಮೌಲ್ಯಗಳು ಇಂದಿನ ಡಿಜೀಟಲೀಕರಣ ಯುಗದಲ್ಲೂ ಪ್ರಸ್ತುತವಾಗಿದೆ. ಅವರ ಸಮಾಜಪರ ಚಿಂತನೆ, ಸಾಮಾಜಿಕ, ಸಾಮರಸ್ಯದ ಆಲೋಚನೆಗಳು ಬಹಳ ಮುಖ್ಯವಾಗಿದೆ” ಎಂದರು.

ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ನಾಗಪ್ಪ ಗೌಡ ಆರ್. ಇವರು ಅಧ್ಯಕ್ಷತೆಯನ್ನು ವಹಿಸಿದ್ದು, “ಇದು ಸಾಮುದಾಯಿಕ ಪಾಲ್ಗೊಳ್ಳುವಿಕೆಯ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಕನಕದಾಸರ ಸಾಹಿತ್ಯದಲ್ಲಿ ಆರೋಗ್ಯಪೂರ್ಣ ಸಮಾಜದ ಕಟ್ಟುವಿಕೆಯ ಮಹತ್ವವನ್ನು ಅರಿತುಕೊಳ್ಳಬೇಕು. ಅವರ ಭಕ್ತಿಯ ಪ್ರತಿಪಾದನೆಯನ್ನು ಅರ್ಥಮಾಡಿಕೊಳ್ಳಬೇಕು ಜೊತೆಗೆ ಅವರ ವೈಚಾರಿಕತೆಯ ಅಂಶಗಳ ಮೂಲಕವೂ ಅರ್ಥ ಮಾಡಿಕೊಳ್ಳಬೇಕು” ಎಂದರು.
ಮಂಗಳೂರು ವಿ.ವಿ. ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಶಿವರಾಮ ಶೆಟ್ಟಿ, ಪ್ರಾಧ್ಯಾಪಕ ಪ್ರೊ. ಸೋಮಣ್ಣ ಹೊಂಗಳ್ಳಿ ಉಪಸ್ಥಿತರಿದ್ದರು. ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತೋನ್ಸೆ ಪುಷ್ಕಲ್ ಕುಮಾರ್ ಕನಕ ಕೀರ್ತನೆ ಹಾಡಿ, ವಿದ್ಯಾರ್ಥಿನಿ ಆಶ್ರಿತ ವಂದಿಸಿ, ವಿದ್ಯಾರ್ಥಿ ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ‘ಕನಕ ಕೀರ್ತನ ಗಂಗೋತಿ’ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ಪ್ರೌಢಶಾಲೆ, ಪದವಿಪೂರ್ವ, ಸ್ನಾತಕೋತ್ತರ ಪದವಿ, ಅಧ್ಯಾಪಕ ವಿಭಾಗಗಳಲ್ಲಿ ಮತ್ತು ಪದವಿ, ಸಿಬ್ಬಂದಿ, ಸಾರ್ವಜನಿಕ ಮಟ್ಟದಲ್ಲಿ ನಡೆಯಿತು. ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮದಲ್ಲಿ 216 ಗಾಯಕರು ಕನಕ ಕೀರ್ತನೆಗಳನ್ನು ಹಾಡಿದರು.
