03 ಮಾರ್ಚ್ 2023, ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರ ಏರ್ಪಡಿಸಿದ “ಕನಕ ಕೀರ್ತನ ಗಂಗೋತ್ರಿ” ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಿಂದ 18 ಮಂದಿ ಗಾಯಕರನ್ನು ಮತ್ತು ಸಾರ್ವಜನಿಕ ವಿಭಾಗದಲ್ಲಿ “ಕನಕ ಕುಣಿತ ಭಜನೆ”ಯ ನಾಲ್ಕು ತಂಡಗಳನ್ನು 2022-23ನೇ ಸಾಲಿನ ಕನಕ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಜನೆಗೆ ತೊಡಕಾಗುವುದಿಲ್ಲ ಬದಲಾಗಿ ಪೂರಕವಾಗುತ್ತದೆ ಎಂಬುದನ್ನು ಇದರಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸಾಬೀತು ಪಡಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಈ ಒಂದು ಕಾರ್ಯಕ್ರಮದಿಂದಾಗಿ ಕಲಿಕೆಯ ಏಕತಾನತೆಯು ತಪ್ಪಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದುವುದಕ್ಕೆ ಅವಕಾಶ ಸಿಕ್ಕಿದಂತಾಗಿದೆ. ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮನೋಭಾವನೆ ಬಲಗೊಳ್ಳುವ ನಿಟ್ಟಿನಲ್ಲಿ ಸಹಾಯಕವಾಗಿದೆ ಮತ್ತು ಸಾರ್ವಜನಿಕ ವಿಭಾಗದಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಹೆಚ್ಚಿನ ಜ್ಞಾನ ಪಡೆದು ಇನ್ನೂ ಮುಂದುವರಿಯಲು ಪ್ರೇರಣೆ ನೀಡಿದಂತಾಗಿದೆ. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಹಮ್ಮಿಕೊಂಡ ಈ ಕಾರ್ಯಕ್ರಮವು ಶ್ಲಾಘನೀಯವಾಗಿದೆ. ಇಂದು ನಡೆಯುವ ಕಾರ್ಯಕ್ರಮದಲ್ಲಿ ಈ ಪುರಸ್ಕಾರವನ್ನು ನೀಡಲಾಗುವುದು.
ಪ್ರೌಢ ಶಾಲಾ ವಿಭಾಗದಲ್ಲಿ ನಾಲ್ಕು ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಮೇಧಾ ಉಡುಪ : ಮೇಧಾ ಉಡುಪ ಕೆನರಾ ಪ್ರೌಢ ಶಾಲೆ ಡೊಂಗರಕೇರಿ ಮಂಗಳೂರು ಇಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ. 7 ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿರುವ ಇವರು ಈಗಾಗಲೇ ಹಲವು ಕಡೆ ಕಛೇರಿಗಳನ್ನು ನೀಡಿದ್ದು, ಕೊಳಲು ನುಡಿಸುವುದನ್ನೂ ಅಭ್ಯಾಸ ಮಾಡುತ್ತಿದ್ದಾರೆ. ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಹೆಚ್ಚಾಗಿ ಪ್ರಥಮ ಬಹುಮಾನಗಳೊಂದಿಗೆ ಅಲ್ಲಿಂದ ಹೊರಬರುವ ಇವರು ಶ್ರೀ ರಾಜಗೋಪಾಲ್ ಉಡುಪ ಮತ್ತು ಶ್ರೀಮತಿ ಅಂಜನಾರವರ ಸುಪುತ್ರಿ.
ಪಂಚಮಿ ಕೆ.: ಪಂಚಮಿ ಕೆ. ತಮ್ಮ ಆರನೆಯ ವ್ಯಯಸ್ಸಿನಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿದ್ದು, ಗುರುಗಳ ಮಾರ್ಗದರ್ಶನದಲ್ಲಿ ಅನೇಕ ಪ್ರತಿಷ್ಟಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಜೊತೆಯಲ್ಲಿ ಚಿತ್ರಕಲೆ, ನೃತ್ಯ, ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿವಿಧ ಸಂಘಟನೆಗಳು ಮತ್ತು ಸಂಸ್ಥೆಗಳು ಆಯೋಜಿಸಿದ ಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನ ಗಳಿಸಿ ಕೇಳುಗರ ಮೆಚ್ಚುಗೆ ಪಡೆದದ್ದೂ ಇದೆ. ಇವರು ಶ್ರೀ ಲಕ್ಷ್ಮಿ ನರಸಿಂಹ ಪೈ ವಿದ್ಯಾಲಯ, ಪಾಣೆ ಮಂಗಳೂರು ಇಲ್ಲಿ 9ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ. ಪ್ರತಿಭಾ ಕಾರಂಜಿಯಲ್ಲಿ ರಾಜ್ಯ ಮಟ್ಟದವರಗೆ ಹೋಗಿ ತನ್ನ ಪ್ರತಿಭೆ ಮೆರೆದಿದ್ದಾರೆ. ಇವರು ಡಾ. ಕಿರಣ ಕೆ. ಯು. ಮತ್ತು ಡಾ. ಪ್ರಮೀಳ ಕೊಳಕೆ ದಂಪತಿಗಳ ಪುತ್ರಿ.
ತನ್ವಿ ಕಾವೂರು
ತನ್ವಿ ಕಾವೂರು ಇವರು ಶ್ರೀ ರಘುನಾಥ್ ಎನ್. ಮತ್ತು ಶ್ರೀಮತಿ ಗೀತಾಕ್ಷಿ ಕೆ.ಆರ್. ಇವರ ಸುಪುತ್ರಿ. ಇವರ ಪ್ರಧಾನ ಆಸಕ್ತಿ ಸಂಗೀತ. ಮೊದಲು ತಾನೇ ಸ್ವತಃ ಆಸಕ್ತಿಯಿಂದ ಅಲ್ಲಿ ಇಲ್ಲಿ ಕೇಳಿ ಸಂಗೀತ ಅಭ್ಯಾಸ ಮಾಡಿದರೂ, ಮುಂದೆ ಗುರು ಮುಖೇನ ಸಂಗೀತಾಭ್ಯಾಸ.ಮುಂದುವರಿಯಿತು.ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನೂ ಪಡೆದಿದ್ದಾರೆ. ಅದೇ ರೀತಿ ಕೆಲವು ವರ್ಷ ಶಾಸ್ತ್ರೀಯ ನೃತ್ಯವನ್ನೂ ಅಭ್ಯಾಸ ಮಾಡಿದ್ದಾರೆ. ಚಿತ್ರಕಲೆಯಲ್ಲಿಯೂ ಇವರಿಗೆ ಆಸಕ್ತಿ ಇದೆ. ಹಲವಾರು ಸಂಗೀತ ಸ್ಪರ್ಧೆಗಳು,ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಇವರು ಕೇಂದ್ರೀಯ ವಿದ್ಯಾಲಯ ಪಣಂಬೂರು ಇಲ್ಲಿ 9 ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.
ಅನ್ವಿತ. ಟಿ.
ಅನ್ವಿತ ಟಿ. ಇವರು ಸುಮಾರು 10 ವರ್ಷಗಳಿಂದ ಸಂಗೀತಾಭ್ಯಾಸ ಮಾಡುತ್ತಿದ್ದಾರೆ. 5ನೇ ತರಗತಿಯಲ್ಲಿ ಜೂನಿಯರ್ ಪರೀಕ್ಷೆ ಪಾಸ್ ಮಾಡಿ, ಈಗ ಸೀನಿಯರ್ ಪರೀಕ್ಷೆ ಮುಗಿಸಿ, ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಚಿತ್ರಕಲೆಯಲ್ಲಿ ಆಸಕ್ತಿ. ರಾಗ ತರಂಗದ ಬಾಲ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳ ಅಧ್ಯಕ್ಷೆಯಾಗಿದ್ದರು. ಇವರು ಶ್ರೀ ಶಿವಶಂಕರ ಭಟ್, ಮತ್ತು ಶ್ರೀಮತಿ ಸುಧಾವಾಣಿ ಬಿ. ಇವರ ಸುಪುತ್ರಿ. ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ ಇವರು ಕರಾವಳಿ ಸರಿಗಮಪ ಜೂನಿಯರ್ “ಪ್ರಥಮ”, ಗಾನಸಿರಿ ಪುತ್ತೂರು ಇವರ ಸುಗಮ ಸಂಗೀತ ರಿಯಾಲಿಟಿ ಶೋ ಇವುಗಳಲ್ಲಿ ಪ್ರಥಮ ಬಹುಮಾನಗಳನ್ನ ಪಡೆದಿದ್ದಾರೆ. ಮಹಾಜನ್ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಸ್ಕೂಲ್, ನೀರ್ಚಾಲ್ ಇಲ್ಲಿಯ 9 ನೇ ತರಗತಿಯ ವಿದ್ಯಾರ್ಥಿನಿ.
ಪದವಿ ಪೂರ್ವ ವಿಭಾಗದಲ್ಲಿ ಆಯ್ಕೆಯಾದವರು ಮೂರು ಮಂದಿ.
ಕೀರ್ತನ್ ನಾಯ್ಗ
ಕೀರ್ತನ್ ನಾಯ್ಗ ಕೋಟೆಕಾರು ಇವರು ಸೈಂಟ್ ಅಲೋಶಿಯಸ್ ಪಿ.ಯು. ಕಾಲೇಜು ಮಂಗಳೂರಿನಲ್ಲಿ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಯಾಗಿದ್ದಾರೆ. ತನ್ನ 8ನೇ ವಯಸ್ಸಿನಿಂದಲೇ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿದ್ದು, ಬೇರೆ ಬೇರೆ ವೇದಿಕೆಗಳಲ್ಲಿ ಕಛೇರಿಗಳನ್ನು ನೀಡಿದ್ದಾರೆ ಮತ್ತು ಸ್ಪರ್ಧೆಗಳಲ್ಲೂ ಭಾಗವಹಿಸಿದ್ದಾರೆ. ಸಂಗೀತದೊಂದಿಗೆ ತಬ್ಲಾ ಮತ್ತು ಹಾರ್ಮೋನಿಯಂ ಕೂಡ ಗುರು ಮುಖೇನ ತರಬೇತಿ ಪಡೆಯುತ್ತಿರುವ ಇವರು ಶ್ರೀ ಹರಿಶ್ಚಂದ್ರ ಮತ್ತು ಶ್ರೀಮತಿ ಸತ್ಯ ನಾಯ್ಗ ದಂಪತಿಗಳ ಸುಪುತ್ರ.
ಸುಧೀಕ್ಷಾ ಆರ್.
ಸುಧೀಕ್ಷಾ ಆರ್. ಇವರು 6ನೇ ವರ್ಷದ ಎಳವೆಯಲ್ಲಿಯೇ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿ, 10ನೇ ವಯಸ್ಸಿನಲ್ಲಿ ಕಛೇರಿ ನೀಡಿದ ಪ್ರತಿಭಾವಂತೆ. ಇವರು ಎನ್.ಐ.ಟಿ.ಕೆ.ಯಲ್ಲಿ ನಡೆದ ಸ್ಪಿಕ್ ಮೆಕೆ ಆರಾಧನಾ ಕಾರ್ಯಕ್ರಮದಲ್ಲಿ, ಸಂಗೀತ ಪರಿಷತ್ ಮಂಗಳೂರು ನಡೆಸಿದ ಸಂಗೀತ ಸ್ಪರ್ಧೆಗಳಲ್ಲಿ ಮತ್ತು ಆಳ್ವಾಸ್ ನುಡಿಸಿರಿಯಲ್ಲಿ ಬಹುಪಾಲು ಬಹುಮಾನವನ್ನು ತನ್ನದಾಗಿಸಿಕೊಂಡವರು. ಭಾವಗೀತೆ, ಭಕ್ತಿಗೀತೆ ಜಾನಪದ ಗೀತೆಗಳ ದೈವದತ್ತ ಕಂಠಸಿರಿ ಈಕೆಯದ್ದು. 4 ವರ್ಷಗಳಿಂದ ಮೃದಂಗ ಅಭ್ಯಾಸ, ಯಕ್ಷಗಾನದ ಹಿಮ್ಮೇಳವಾದ ಭಾಗವತಿಗೆ, ಚೆಂಡೆ, ತಾಳ, ಮದ್ದಳೆಯೊಂದಿಗೆ ನಾಟ್ಯವನ್ನು ಅಭ್ಯಾಸ ಮಾಡಿ ವೇದಿಕೆಯ ಮೇಲೆ ವಿವಿಧ ಪಾತ್ರಗಳನ್ನು ನಿರ್ವಸಿದ್ದಾರೆ. ಲಕ್ಷ್ಮಿದೇವಿಯಾಗಿ, ಹನುಮಂತನಾಗಿ, ಕೃಷ್ಣನಾಗಿ ಪ್ರೇಕ್ಷಕರ ಮನ ಸೂರೆಗೊಂಡ ಸುಧೀಕ್ಷಾ ಆರ್, ಇವರು ಶ್ರೀ ರಾಜೇಶ್ ಪಿ. ಮತ್ತು ಶ್ರೀಮತಿ ರಮ್ಯಾ ಆರ್. ದಂಪತಿಯ ಸುಪುತ್ರಿ. ಸುರತ್ಕಲ್ ನ ಗೋವಿಂದ ದಾಸ್ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ. ಅಧ್ಯಯನ ಮಾಡುತ್ತಿದ್ದಾರೆ.
ಶ್ರೀರಕ್ಷಾ
ಶ್ರೀರಕ್ಷಾ ಇವರು ಸುಮಾರು 10 ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾರೆ. ಈಗಾಗಲೇ ಅನೇಕ ಕಛೇರಿಗಳನ್ನು ನೀಡಿದ ಖ್ಯಾತಿ ಇವರದ್ದು, ಶಾಸ್ತ್ರೀಯ ಸಂಗೀತದೊಂದಿಗೆ ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆಗಳಲ್ಲೂ ತಮ್ಮ ಉತ್ತಮ ಶಾರೀರದೊಂದಿಗೆ ವಿವಿಧ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಮಂಗಳೂರಿನ ವಿವಿಧ ಚಾನಲ್ಗಳಲ್ಲೂ ಕಾರ್ಯಕ್ರಮ ನೀಡಿ ಶಬಾಷ್ ಗಿರಿ ಪಡೆದವರು. ಹಾಗೆಯೇ ಶಾಸ್ತ್ರೀಯ ನೃತ್ಯವನ್ನೂ ಕಲಿಯುತ್ತಿದ್ದಾರೆ. ಸಂಗೀತ ಮತ್ತು ನೃತ್ಯ ಪ್ರದರ್ಶನ ನೀಡಿ, ಹಲವಾರು ಪ್ರಶಸ್ತಿಗಳನ್ನು ಪಡೆದು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ. ಸೈoಟ್ ಆಗ್ನೆಸ್ ನಲ್ಲಿ ದ್ವಿತೀಯ ಪಿ.ಯು.ಸಿ.ಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ಕೊಣಾಜೆಯ ಶ್ರೀ ಹರೀಶ್ ಪೂಜಾರಿ ಮತ್ತು ಶ್ರೀಮತಿ ಸುರೇಖಾ ದಂಪತಿಗಳ ಸುಪುತ್ರಿ.
ಪದವಿ ವಿಭಾಗ :
ಶರಣ್ಯ ಕೆ.ಎನ್.
ಶರಣ್ಯ ಕೆ.ಎನ್. ಇವರು ಎನ್.ಎಂ.ಎ.ಎಂ.ಐ.ಟಿ. ನಿಟ್ಟೆಯಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿ. ಈ ಉದಯೋನ್ಮುಖ ಸಂಗೀತ ಕಲಾವಿದೆ 10 ವರ್ಷಗಳಿಂದ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ.ಆಳ್ವಾಸ್ ನುಡಿಸಿರಿ,ಪೇಜಾವರ ಮಠದ ಪರ್ಯಾಯ ವೇದಿಕೆ, ಉಡುಪಿಯಲ್ಲಿ ನಡೆದ ಗೋ ಸಮ್ಮೇಳನ ವೇದಿಕೆಯಲ್ಲಿ, ಕಟೀಲು ಬ್ರಹ್ಮಕಲಶೋತ್ಸವದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ, ಹಾಗೂ ಇತ್ತೀಚೇಗೆ ನಡೆದ ಆಳ್ವಾಸ್ ಜಾಂಬೋರೆಯಲ್ಲಿ ಹೀಗೆ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಕಛೇರಿ ನೀಡುವುದರೊಂದಿಗೆ ವಿದೇಶಗಳಲ್ಲೂ ಸಂಗೀತ ಸೌರಭ ಹರಡಿದ ಖ್ಯಾತಿ ಇವರದ್ದು. “ಸಿರಿ ಕನ್ನಡ ಪ್ರಶಸ್ತಿ” ಹಾಗೂ ಯುವ ಸೌರಭ ಪ್ರಶಸ್ತಿಯನ್ನು ಪಡೆದಿರುವರು. ಇವರು ಶ್ರೀ ನಾಗರಾಜ್ ಕುಮಾರ್ ಮತ್ತು ಶ್ರೀಮತಿ ಸವಿತಾ ನಾಗರಾಜ್ ರವರ ಸುಪುತ್ರಿ.
ವಿಭಾಶ್ರೀ ಎಂ.ಎಸ್.
ವಿಭಾಶ್ರೀ ಎಂ.ಎಸ್. ಇವರು 7ನೇ ವರ್ಷದ ಎಳವೆಯಲ್ಲಿ ಸಂಗೀತ ಅಭ್ಯಾಸ ಆರಂಭ ಮಾಡಿದ್ದಾರೆ.10ನೆಯ ತರಗತಿಯಲ್ಲಿರುವಾಗಲೇ ಶಾಸ್ತ್ರೀಯ ಸುಗಮ ಸಂಗೀತ ಕಛೇರಿ ಮಾಡಿದ ಅನುಭವ. ಜ್ಞಾನ ಮಂದಾರ ಅಕಾಡಮಿ ಬೆಂಗಳೂರು ನೀಡಿದ “ಅರಳು ಮಲ್ಲಿಗೆ” ಪ್ರಶಸ್ತಿ, ಸುಳ್ಯ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ “ಪ್ರತಿಭಾ ರತ್ನ” ಪ್ರಶಸ್ತಿ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಕನ್ನಡದಲ್ಲಿ 125 ಅಂಕ. ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಜಿಲ್ಲೆಯಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮ. ಜೆ.ಸಿ.ಐ.ಬೆಳ್ಳಾರೆ ವತಿಯಿಂದ ಸನ್ಮಾನ, ಶ್ರೀ ಮಾಡ ಬಾಗಿಲು ಕಂಬಳ ಆನಂದ್ ಗೌಡ ಟ್ರಸ್ಟ್ ನ ವತಿಯಿಂದ ಸನ್ಮಾನ, ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನ ಪಡೆದ ಇವರು ಶ್ರೀ ಸುರೇಶ್ ಎ. ಮತ್ತು ಶ್ರೀಮತಿ ಅನುಪಮ ಡಿ. ಇವರ ಸುಪುತ್ರಿ .
ಸುಶಾನ್ ಸಾಲಿಯಾನ್ :
ಸುಶಾನ್ ಸಾಲಿಯಾನ್ ಇವರು ಸೈoಟ್ ಜೋಸೆಫ್ ಕಾಲೇಜಿನ ಅಂತಿಮ ಇಂಜಿನಿಯರಿಂಗ್ ವಿದ್ಯಾರ್ಥಿ. ಸುಮಾರು 5 ವರ್ಷಗಳಿಂದ ಹಿಂದೂಸ್ತಾನಿ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ. ಸಂಗೀತ ಕಛೇರಿ ನೀಡುವುದರೊಂದಿಗೆ ಬೇರೆ ಬೇರೆ ವೇದಿಕೆಗಳಲ್ಲಿ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದ ಗೌರವ ಇವರಿಗಿದೆ. ಹಿರಿಯರಿಂದ ಪರಂಪರೆಯಾಗಿ ಬಂದಿರುವ ನಾಗಸ್ವರ ವಾದನವನ್ನು ಅಭ್ಯಾಸ ಮಾಡುತ್ತಿರುವ ಇವರು ಶ್ರೀ ಸುಂದರ ಮತ್ತು ಶ್ರೀಮತಿ ಭವಾನಿ ದಂಪತಿಗಳ ಸುಪುತ್ರರಾಗಿದ್ದಾರೆ.
ರೋಹಿತ್ ಕಾಮತ್ :
ರೋಹಿತ್ ಕಾಮತ್ ಇವರು ಎನ್.ಎಂ.ಎ.ಎಂ.ಐ.ಟಿ.ನಿಟ್ಟೆಯಲ್ಲಿ ತೃತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ. ತನ್ನ ಹನ್ನೊಂದನೆಯ ವರ್ಷದಲ್ಲಿಯೇ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾಭ್ಯಾಸ ಆರಂಭಿಸಿದ ಇವರು ಸಂಗೀತದಲ್ಲಿ ತುಂಬಾ ಆಸಕ್ತಿ ಹೊಂದಿದ್ದಾರೆ. ಕೆಲವೊಂದು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದು ಕನಕ ಕೀರ್ತನ ಗಂಗೋತ್ರಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದ ಇವರು ಶ್ರೀ ಜಯವಂತರಾಯ ಕಾಮತ್ ಮತ್ತು ಶ್ರೀಮತಿ ಶೋಭಿತಾ ಜೆ. ಕಾಮತ್ ಇವರ ಸುಪುತ್ರರಾಗಿದ್ದಾರೆ.
ಸ್ನಾತಕೋತ್ತರ ವಿಭಾಗ :
ಶರಣ್ಯ
ಶರಣ್ಯ ಇವರು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಪ್ರಥಮ ವರ್ಷದ ಎಂ.ಎಸ್ಸಿ. ಅಧ್ಯಯನ ಮಾಡುತ್ತಿದ್ದಾರೆ. 17 ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿ, ಶಾಸ್ತ್ರೀಯ ಸಂಗೀತ ಹಾಗೂ ಶಾಸ್ತ್ರೀಯ ನೃತ್ಯ ಎರಡಲ್ಲೂ ವಿದ್ವತ್ ಮುಗಿಸಿ, ಪ್ರತಿಷ್ಠಿತ ವೇದಿಕೆಗಳಲ್ಲಿ ಸಂಗೀತ ಕಛೇರಿಯನ್ನೂ, ಶಾಸ್ತ್ರೀಯ ನೃತ್ಯ ಪ್ರದರ್ಶನವನ್ನು ನೀಡಿ ಜನ ಮೆಚ್ಚುಗೆ ಪಡೆದಿದ್ದಾರೆ. ಹಲವಾರು ಸಂಘಟನೆಗಳ ವೇದಿಕೆಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಪಡೆದಿದ್ದಾರೆ. ಇವರು ಶ್ರೀಮತಿ ಶೈಲಶ್ರೀ ಭಟ್ ಇವರ ಪುತ್ರಿ.
ಅಭಿರಾಮ್ ಎನ್.ಜಿ. ಇವರು ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ. ಮೈಕ್ರೋ ಬಯೋಲಜಿಯಲ್ಲಿ ಎಂ.ಎಸ್ಸಿ. ಅಧ್ಯಯನ ಮಾಡುತ್ತಿದ್ದಾರೆ. ಮಂಗಳೂರು ವಿವಿ ನಡೆಸಿದ ಕನಕ ಕೀರ್ತನ ಗಂಗೋತ್ರಿ ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗದಿಂದ ಭಾಗವಹಿಸಿ ಆಯ್ಕೆಯಾಗಿದ್ದಾರೆ.
ಶ್ರಾವ್ಯ ಬಿ.
ಶ್ರಾವ್ಯ ಬಿ. ಇವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂ.ಎಸ್ಪಿ. ವಿದ್ಯಾರ್ಥಿನಿ. ಸುಮಾರು 5 ವರ್ಷಗಳ ಕಾಲ ಸಂಗೀತ ಅಭ್ಯಾಸ ಮಾಡಿ, ಜೂನಿಯರ್ ಗ್ರೇಡ್ ಮುಗಿಸಿದ್ದಾರೆ ಭರತನಾಟ್ಯ, ಶಾಸ್ತ್ರೀಯ ನೃತ್ಯ, ಸೀನಿಯರ್ ಗ್ರೇಡ್ ಮುಗಿಸಿದ್ದಾರೆ . ಶ್ರೀ ಎಂ.ಕೆ. ಬಾಲಸುಬ್ರಹ್ಮಣ್ಯ ಮತ್ತು ಶ್ರೀಮತಿ ಸಂಧ್ಯಾ ಕೆ. ಇವರ ಸುಪುತ್ರಿ.
ಶ್ರೀವರದಾ ಪಟ್ಟಾಜೆ
ಶ್ರೀವರದಾ ಪಟ್ಟಾಜೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣಿತ ಶಾಸ್ತ್ರದಲ್ಲಿ ಎಂ.ಎಸ್ಪಿ. ಮಾಡುತ್ತಿರುವ ಇವರು 15 ವರ್ಷಗಳಿಂದ ಶಾಸ್ತ್ರೀಯ ಸಂಗೀತ ಮತ್ತು 7 ವರ್ಷಗಳಿಂದ ವಯೋಲಿನ್ ಅಭ್ಯಾಸ ಮಾಡುತ್ತಿದ್ದಾರೆ. ಸುಮಾರು 7 ವರ್ಷಗಳಿಂದ ಶಾಸ್ತ್ರೀಯ ನೃತ್ಯ ಭರತನಾಟ್ಯದಲ್ಲೂ ತರಬೇತು ಪಡೆಯುತ್ತಿದ್ದಾರೆ. ಹಲವು ಘನವೆತ್ತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ ವೈಶಿಷ್ಟ್ಯ ಇವರದ್ದು. ಇವರು ಶ್ರೀ ಮಹಾಲಿಂಗ ಭಟ್ ಹಾಗೂ ಶ್ರೀಮತಿ ಗೌರಿ ಇವರ ಸುಪುತ್ರಿ.
ಅಧ್ಯಾಪಕ-ಅಧ್ಯಾಪಕೇತರ ವಿಭಾಗ :
ಡಾ. ಅನಿತಾ ಎಸ್. :
ಡಾ. ಅನಿತಾ ಎಸ್. ಇವರು ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಹಾಸ್ಪಿಟಲ್, ಸುಳ್ಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಇವರಿಗೆ ಸುಮಾರು 15 ವರ್ಷಗಳ ಕಾಲ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ ಅನುಭವ ಇದೆ. ಈ ಸಂದರ್ಭಗಳಲ್ಲಿ ಹತ್ತು ಹಲವು ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ಖ್ಯಾತಿ ಇವರದ್ದು. ಇವರು ಶ್ರೀ ಎಸ್. ಶಂಕರನಾರಾಯಣ ಭಟ್ ಮತ್ತು ಶ್ರೀಮತಿ ಉಮಾದೇವಿ ಕೆ. ಇವರ ಸುಪುತ್ರಿ.
ಶ್ರೀ ಯಶವಂತ
ಶ್ರೀ ಯಶವಂತ ಇವರು ಶ್ರೀ ಚಿಕ್ಕಯ್ಯ ಹಾಗೂ ಶ್ರೀಮತಿ ಕಮಲಾ ದಂಪತಿಯ ಸುಪುತ್ರ. ಮೂರು ವರ್ಷಗಳಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಾಹನ ಚಾಲಕರಾಗಿ ದುಡಿಯುತ್ತಿರುವ ಇವರು ಯಾವುದೇ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿರುವುದಿಲ್ಲ. ದೈವದತ್ತವಾಗಿ ಬಂದ ಕಂಠಸಿರಿಯೇ ಇವರ ಆಸ್ತಿ. ಆರ್ಕೆಸ್ಟ್ರಾಗಳಲ್ಲಿ ಹಾಡುವುದನ್ನು ಹವ್ಯಾಸವಾಗಿಟ್ಟುಕೊಂಡಿದ್ದಾರೆ. ಇದೇ ಮೊದಲ ಬಾರಿ “ಕನಕ ಕೀರ್ತನ ಗಂಗೋತ್ರಿ” ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಯಾಗಿದ್ದಾರೆ.
ಸವಿತಾ ಕುಮಾರಿ ಎಸ್.
ಸವಿತಾ ಕುಮಾರಿ ಎಸ್. ಇವರು ಸುಮಾರು 15 ವರ್ಷಗಳಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಗ್ರಂಥಪಾಲಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಗೀತ ಇವರ ಹವ್ಯಾಸ. ರಾಜರಾಜೇಶ್ವರಿ ಭಜನಾ ಮಂಡಲಿ, ಬೇಡಗುಡ್ಡ ಇದರ ಸದಸ್ಯೆಯಾಗಿದ್ದು, ವಿವಿಧ ಕಡೆಗಳಲ್ಲಿ ಭಜನಾ ಸಂಕೀರ್ತನಾ ಸೇವೆಗೆ ಹೋದ ಅನುಭವ ಇವರಿಗಿದೆ. ಶಾಲಾ ಜೀವನದಿಂದಲೇ ಹಾಡುವುದರಲ್ಲಿ ಆಸಕ್ತಿ ಹೊಂದಿದ್ದು, ವಿವಿಧ ಕಡೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ಈ ಹಿಂದೆ ನಡೆದ ಕನಕ ಪೀಠದ ಕಾರ್ಯಕ್ರಮಗಳಲ್ಲಿ ಹಾಡಿ ಬಹುಮಾನ ಪಡೆದ ಇವರು ಶ್ರೀ ರಾಮಣ್ಣ ನಾಯ್ಕ್ ಮತ್ತು ಶ್ರೀಮತಿ ಸುಮತಿ ಎಸ್. ಇವರ ಸುಪುತ್ರಿ, ಶ್ರೀ ಚಂದ್ರಶೇಖರ್ ಸಿ.ಎಚ್.ರವರ ಧರ್ಮಪತ್ನಿ.
ಸಾರ್ವಜನಿಕ ವಿಭಾಗ (ಕನಕ ಸಮೂಹ ನೃತ್ಯ ಭಜನೆ):
ಗೆಳೆಯರ ಬಳಗ ತಂಡ : ಗೆಳೆಯರ ಬಳಗ ಗ್ರಂಥಾಲಯ ಮಂಗಳೂರು ವಿಶ್ವವಿದ್ಯಾನಿಲಯ ಈ ತಂಡ ಗ್ರಂಥಾಲಯದ ವಿವಿಧ ವಿಭಾಗದಲ್ಲಿ ಉದ್ಯೋಗ ಮಾಡುತ್ತಿರುವ ಮಹಿಳೆಯರದ್ದು. ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತು ಪಡೆದು ಅಭ್ಯಾಸ ಮಾಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ವಿವಿಧ ಕಡೆಗಳಲ್ಲಿ ಭಜನಾ ಸೇವೆ ನೀಡಿದ ಅನುಭವ ಇವರಿಗಿದೆ. ಆದರೆ ಕುಣಿತ ಭಜನೆ ಇದೇ ಮೊದಲ ಸಲ ಮಾಡುತ್ತಿದ್ದು, ಮುಂದಕ್ಕೆ ಇನ್ನೂ ಉತ್ತಮ ರೀತಿಯಲ್ಲಿ ಕುಣಿತ ಭಜನೆಯನ್ನು ಪ್ರಸ್ತುತ ಪಡಿಸುವ ಗುರಿ ಇವರದ್ದು.
ಈ ತಂಡದಲ್ಲಿ ಭಾಗವಹಿಸಿದವರು: ನಾಗವೇಣಿ.ಕೆ., ಶಿಲ್ಪ ಕುಮಾರಿ ಜೈನ್, ಪ್ರೀತಿ, ಸವಿತಾ ಕುಮಾರಿ.ಎಸ್., ಉಷಾ, ಸುಮನ ಎಸ್ ಜೋಗಿ, ವಿನುತ, ಗೀತಾಕುಮಾರಿ ಯು., ಶ್ವೇತಾ ಕುಮಾರಿ, ರೇಣುಕಾ, ಶರತ್, ರಮೇಶ್ ಯು., ಸೃಜನ್ ಗಟ್ಟಿ.
ಶ್ರೀ ರಾಮಾಂಜನೇಯ ಭಜನಾ ತಂಡ ಗುಡ್ಡುಪಾಲ್, ಕೋಣಾಜೆ:
ಇದೊಂದು ಹವ್ಯಾಸಿ ಭಜನಾ ತಂಡ. ಭಜನಾ ಸೇವೆಗಾಗಿ ವಿವಿಧ ಕಡೆಗಳಿಗೆ ಹೋಗಿ ಅನುಭವವಿದೆ. ಆದರೆ ಕುಣಿತ ಭಜನೆಗೆ ಮಕ್ಕಳಿಗೆ ತರಬೇತು ನೀಡಿ, ಉತ್ತಮ ಸಂಸ್ಕಾರ ಕೊಡುವುದರ ಜೊತೆಗೆ ವೇದಿಕೆಗಳನ್ನೂ ಕಲ್ಪಿಸಿಕೊಡುತ್ತಿದೆ. ಈ ಭಜನಾ ತಂಡದವರು ಕಲಿಕಾ ಕೇಂದ್ರದ ಮೂಲಕ ಪರಿಸರದ ವಿದ್ಯಾರ್ಥಿಗಳ ಕಲಿಕೆಗೆ ಸಹಾಯ ಮಾಡುವಂತಹ ಉಪಯುಕ್ತ ಕಾರ್ಯ ಕೈಗೊಂಡಿದ್ದಾರೆ. ವಿದ್ಯಾರ್ಥಿಗಳು ಸಂಸ್ಕಾರವಂತರೂ, ವಿದ್ಯಾವಂತರೂ ಆಗಬೇಕೆಂಬುದೇ ಇವರ ಮುಖ್ಯ ಗುರಿ.
ಈ ತಂಡದಲ್ಲಿ ಭಾಗವಹಿಸಿದವರು: ಭವ್ಯ ಪುರುಷಕೋಡಿ, ಕೊಣಾಜೆ, ದೀಕ್ಷಾ ಪುರುಷಕೋಡಿ, ಕೊಣಾಜೆ, ಕೀತ೯ನಾ ಪುರುಷಕೋಡಿ, ಕೊಣಾಜೆ, ಹಷಿ೯ತಾ ಪುರುಷಕೋಡಿ, ಕೊಣಾಜೆ, ಚಿದಾನಂದ ದೇವ೦ದಬೆಟ್ಟು, ಕೊಣಾಜೆ, ಭುವನ್ ಕೊಪ್ಪಳ, ಕೊಣಾಜೆ, ತನುಶ್ರೀ ಪಾಡಿಗುಡ್ಡೆ, ಕ೦ಡಿಲ, ಲಿಖಿತ ದೇವ೦ದಬೆಟ್ಟು, ಕೊಣಾಜೆ, ಶಿವಪ್ರಸಾದ್ ಕಲ್ಲುಗುಡ್ಡೆ, ಕೊಣಾಜೆ, ಪ್ರತಾಪ್ ಕಲ್ಲುಗುಡ್ಡೆ, ಕೊಣಾಜೆ, ದೇವಿಶ ಕಲ್ಲುಗುಡ್ಡೆ, ಕೊಣಾಜೆ, ಸೂರ್ಯ ಕಲ್ಲುಗುಡ್ಡೆ, ಕೊಣಾಜೆ.
ಸಂತ ಆಲೋಶಿಯಸ್ ಕಾಲೇಜು (ಸ್ವಾಯತ್ತ) ಮಂಗಳೂರು: ಕನಕ ಕೀರ್ತನ ಗಂಗೋತ್ರಿಯಲ್ಲಿ ಕುಣಿತ ಭಜನೆಯಲ್ಲಿ ಸೈಂಟ್ ಆಲೋಶಿಯಸ್ ಕಾಲೇಜು (ಸ್ವಾಯತ್ತ) ಮಂಗಳೂರು ವಿದ್ಯಾರ್ಥಿಗಳ ತಂಡ ಆಯ್ಕೆಯಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಾವೇ ಸ್ವತಃ ಅಭ್ಯಾಸ ಮಾಡಿ, ಕುಣಿತ ಭಜನೆಯನ್ನು ಪ್ರಸ್ತುತ ಪಡಿಸಿದ್ದಾರೆ. ಹನ್ನೆರಡು ಮಂದಿ ಕುಣಿತ ಭಜನೆಯಲ್ಲಿ ಭಾಗವಹಿಸಿದ್ದಾರೆ. ಹಿನ್ನೆಲೆಯಲ್ಲಿ ಹಾಡುಗಾರಿಕೆಗೂ ವಿದ್ಯಾರ್ಥಿಗಳು 6 ಮಂದಿ ಭಾಗವಹಿಸಿದ್ದಾರೆ. ತಂಡದಲ್ಲಿ ಭಾಗವಹಿಸಿದವರು ಈ ಕೆಳಗಿನವರು:
ಕುಣಿತದಲ್ಲಿ : ಯಶಸ್ವಿನಿ ಭಟ್, ದ್ವಿತೀಯ ಬಿ.ಬಿ.ಎ., ಅಂಕಿತ, ಪ್ರಥಮ ಬಿ.ಎಸ್ಸಿ., ಅನನ್ಯ, ಪ್ರಥಮ ಬಿ.ಎ., ಜಾಕ್ಸನ್ ಕ್ರೈಸ್ಟ್ ಡಿ, ದ್ವಿತೀಯ ಬಿ.ಎಸ್ಸಿ., ರೋಹಿತ್ ಕುಮಾರ್, ದ್ವಿತೀಯ ಬಿ.ಎಸ್ಸಿ., ಗಗನ್, ಪ್ರಥಮ ಬಿ.ಎಸ್ಸಿ., ಅಭಯ್, ಪ್ರಥಮ ಬಿ.ಎಸ್ಸಿ., ತನ್ಮಯ್ ಕೆ.ಕೆ., ಪ್ರಥಮ ಬಿ.ಎಸ್ಸಿ., ಸಾಕ್ಷಿ, ಪ್ರಥಮ ಬಿ.ಎಸ್ಸಿ., ಮೋನಿಷ, ಪ್ರಥಮ ಬಿ.ಎಸ್ಸಿ., ಅರ್ಪಿತ, ಪ್ರಥಮ ಬಿ.ಎಸ್ಸಿ., ರಕ್ಷಿತ, ಪ್ರಥಮ ಬಿ.ಎಸ್ಸಿ.
ಹಾಡುಗಾರಿಕೆಯಲ್ಲಿ : ಗಮನ್ ಕುಮಾರ್ ನಾಯಕ್, ದ್ವಿತೀಯ ಬಿ.ಎಸ್ಸಿ., ಸಿಂಜಿತ ಕೆ, ಪ್ರಥಮ ಬಿ.ಎಸ್ಸಿ., ಸಹನಪ್ರಿಯ, ಪ್ರಥಮ ಬಿ.ಎಸ್ಸಿ., ಸುಮೇಧ ಕೆ.ಎನ್., ಪ್ರಥಮ ಬಿ.ಎಸ್ಸಿ., ಚಿನ್ಮಯಿ, ಪ್ರಥಮ ಬಿ.ಎಸ್ಸಿ., ಸುಮಂತ್ ಎನ್., ದ್ವಿತೀಯ ಬಿ.ಕಾಂ.
ಬಾಲಿನಿ ಮತ್ತು ತಂಡ : ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಶೇಷ ಆಸಕ್ತಿ ಹೊಂದಿರುವ ವಿಶ್ವವಿದ್ಯಾನಿಲಯದ ಉದ್ಯೋಗಿಗಳ ಒಂದು ತಂಡ ಇದು. ಈ ತಂಡದವರು ಎಲ್ಲರೂ ಮನೆಯಲ್ಲಿ ದಿನನಿತ್ಯ ಭಜನೆ ಮಾಡುವವರೇ. ಕುಣಿತ ಭಜನೆಯನ್ನು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ, ವಿಶ್ವವಿದ್ಯಾನಿಲಯದಲ್ಲಿ ಕೊಟ್ಟ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ವಿವಿಧ ಕಡೆಗಳಲ್ಲಿ ಭಜನಾ ಸೇವೆ ನೀಡಿದ ಅನುಭವವಿದೆ. ಬಹಳ ಚಟುವಟಿಕೆಯಿಂದ ಕೂಡಿದ ಈ ತಂಡ ವಿಶ್ವವಿದ್ಯಾನಿಲಯದಲ್ಲಿ ಮಹಿಳೆಯರದೇ ಯಕ್ಷಗಾನ ತಂಡವನ್ನೂ ಕಟ್ಟಿಕೊಂಡಿರುವುದು ಒಂದು ವಿಶೇಷತೆ.
ಈ ತಂಡದಲ್ಲಿ ಭಾಗವಹಿಸಿದವರು: ಶ್ರೀಮತಿ ಬಾಲಿನಿ ಕೆ.ಬಿ., ಶ್ರೀಮತಿ ಉಮಾವತಿ ಶೆಣೈ, ಶ್ರೀಮತಿ ಸುಮಂಗಲಿ ಎ., ಡಾ. ಯಶಸ್ವಿನಿ ಬಿ., ಶ್ರೀಮತಿ ಗಾಯತ್ರಿ ನಾಯಕ್, ಶ್ರೀಮತಿ ಕವಿತ, ಶ್ರೀಮತಿ ಕವಿತ, ಶ್ರೀಮತಿ ಲವೀನ.