ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ‘ಕನಕ ಸ್ಮೃತಿ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವು ದಿನಾಂಕ 25-06-2024ರ ಮಂಗಳವಾರದಂದು ಮಂಗಳಗಂಗೋತ್ರಿಯ ಡಾ. ಯು.ಆರ್. ರಾವ್ (ಹಳೆಯ ಸೆನೆಟ್) ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನರೇಂದ್ರ ರೈ ದೇರ್ಲ ಮಾತನಾಡಿ “ಕರಾವಳಿ ಇಂದು ಶಿಕ್ಷಣದ ವ್ಯಾಪಾರೀಕರಣ ಮತ್ತು ಅಭಿವೃದ್ಧಿಯ ಭೌತಿಕತೆಯ ಭಾರದಲ್ಲಿ ಕುಸಿಯುತ್ತಿದೆ. ಮಾನವೀಯತೆ ಮಾಯವಾಗಿದೆ. ಮನುಷ್ಯ ಇನ್ನೊಬ್ಬರನ್ನು ಪ್ರೀತಿಯಿಂದ ನೋಡದೆ ಅನುಮಾನ, ಭಯದಿಂದ ನೋಡುವಂತಾಗಿದೆ. ಕನಕ ಹಾಗೂ ನಾರಾಯಣ ಗುರುಗಳಂತಹ ಸಂತರ ಸಂದೇಶ ಹೃದಯವನ್ನು ಮುಟ್ಟಿದರೆ ನಾವು ಮತ್ತೆ ಮನುಷ್ಯರಾಗುತ್ತೇವೆ. ಕನಕದಾಸರಿಗೆ ಅವಸರ ಪಡದೆ, ಪ್ರತಿಭಟಿಸದೆ ಕಾಯುವ ತಾಳ್ಮೆಯಿತ್ತು. ಕಾಯುವುದರ ಮೂಲಕ ಒಂದು ಅರಿವು ಸೃಷ್ಟಿಯಾಗುತ್ತದೆ ಎಂಬುದನ್ನು ನಾವು ಕನಕರಿಂದ ಹಾಗೂ ಅವರ ಚಿಂತನೆಗಳಿಂದ ಅರ್ಥ ಮಾಡಿಕೊಳ್ಳಬೇಕು. ನೈಜವಾಗಿ ಕನಕದಾಸರ ಅರಿವೇ ಭಗವಂತ ಅಥವಾ ಕೃಷ್ಣನಾಗಿದ್ದಾನೆ. ಮಂಗಳೂರು ವಿವಿಯ ಕನಕ ಅಧ್ಯಯನ ಕೇಂದ್ರ ಕನಕ ಚಿಂತನೆಗಳನ್ನು ವೈಚಾರಿಕ ಚಿಂತನೆಗೆ ಒಡ್ಡಿ ಹೊಸ ಬೆಳಕನ್ನು ಮೂಡಿಸಿದೆ.” ಎಂದರು.
ಕಾರ್ಯಕ್ರಮದಲ್ಲಿ ಹಾವೇರಿ ವಿ.ವಿ. ವಿಶ್ರಾಂತ ಕುಲಪತಿ ಹಾಗೂ ಜಾನಪದ ವಿದ್ವಾಂಸ ಪ್ರೊ. ಚಿನ್ನಪ್ಪ ಗೌಡ ಮಾತನಾಡಿ “ಕನಕದಾಸರ ಕೃತಿಯಲ್ಲಿ ಸಕಾಲಿಕವೂ, ಸಾರ್ವಕಾಲಿಕ ಸಂಗತಿಗಳೂ ಇರುವುದನ್ನು ನಾವು ಮುಖ್ಯವಾಗಿ ಗಮನಿಸಬೇಕಿದೆ. ಸಮಾಜದ ನೈತಿಕ ಅಧ:ಪತನದ ಕಾಲಘಟ್ಟದಲ್ಲಿ ಮೌಲ್ಯಯುತ ಸಂಗತಿಗಳನ್ನು ಸಮಾಜದಲ್ಲಿ ಪಸರಿಸಿ ಸಮನ್ವಯತೆಯನ್ನು ಬೆಳೆಸಿದರು. ಅರಿವನ್ನು ಬೆಳೆಸುವ ಕನಕನ ಚಿಂತನೆಗಳು ಸಾರ್ವಕಾಲಿಕವಾಗಿದೆ.” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ “ಕನಕದಾಸರಲ್ಲಿ ನಾವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಣಲು ಸಾಧ್ಯವಿದೆ. ಸಮಾಜದ ಪರಿಕಲ್ಪನೆಯನ್ನು ಹೊಂದಿದ್ದ ಅವರ ಸಾಹಿತ್ಯ ಚಿಂತನೆಗಳು ನಮಗೆಲ್ಲರಿಗೂ ಮಾದರಿಯಾಗಿದ್ದು, ಅವರ ಚಿಂತನೆಗಳನ್ನು ನಾವು ಮೈಗೂಡಿಸಿಕೊಂಡು ಮನುಷ್ಯ ಸಮಾಜವನ್ನು ಕಟ್ಟೋಣ.” ಎಂದರು. ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ರಘುರಾಜ್ ಕದ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ಕನಕ ಕೀರ್ತನ ಗಂಗೋತ್ರಿ ಕಾರ್ಯಕ್ರಮದಲ್ಲಿ ವಿಜೇತರಾದ 23 ಮಂದಿ ಅಭ್ಯರ್ಥಿಗಳಿಗೆ ‘ಕನಕ ಪುರಸ್ಕಾರ’ ಪ್ರದಾನ ಮಾಡಲಾಯಿತು ಮತ್ತು ಕೀರ್ತನ ಪ್ರಸ್ತುತಿ ನಡೆಯಿತು. ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಡಾ. ಯಶುಕುಮಾರ್ ಕಾರ್ಯಕ್ರಮ ನಿರೂಪಿಸಿ, ತೇಜಶ್ರೀ ಪುರಸ್ಕೃತರ ವಿವರ ವಾಚಿಸಿ, ಪ್ರತಿಕ್ಷಾ ವಂದಿಸಿದರು.