ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅದ್ಯಯನ ಪೀಠ, ಕನಕದಾಸ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಕನಕ ಜಯಂತಿಯ ಪ್ರಯುಕ್ತ ‘ಕನಕ ತತ್ವಚಿಂತನ’ ಪ್ರಚಾರೋಪನ್ಯಾಸ ಮಾಲಿಕೆ ಮತ್ತು ‘ರಾಮಧಾನ್ಯ ಚರಿತೆ : ಅರ್ಥಾನುಸಂಧಾನ’ ಗಮಕ ವ್ಯಾಖ್ಯಾನ ಬಾನುಲಿ ಸರಣಿ ಕಾರ್ಯಕ್ರಮವು ದಿನಾಂಕ 28-11-2023ರಂದು ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಮಂಗಳೂರು ವಿವಿ ಕುಲಪತಿ ಪ್ರೊ.ಜಯರಾಜ್ ಅಮೀನ್ “ಕನಕದಾಸರ ಸಾಹಿತ್ಯ ರಚನೆಗಳು ಅತ್ಯದ್ಭುತವಾದುದು. ಅವರು ಸಾಹಿತಿ, ಕವಿ ಮಾತ್ರವಲ್ಲ ಭಕ್ತಿ ಚಳುವಳಿಯ ಮೂಲಕ ಸಮಾಜದ ಅಸಮಾನತೆಯನ್ನು ದೂರಗೊಳಿಸಿ ಸಮಾನತೆಯ ಸಮಾಜ ನಿರ್ಮಾಣದ ಕನಸು ಕಂಡವರು. ಅಧ್ಯಾತ್ಮದ ಮೂಲಕ ಸಮಾನತೆಯ ಆಶಯವನ್ನು ಬಿತ್ತಿದವರು. ಅವರ ಸಾಹಿತ್ಯ ರಚನೆಗಳು, ಸಂದೇಶಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ. ಸಮಾಜದಲ್ಲಿ ಎಲ್ಲರನ್ನೂ ಒಗ್ಗೂಡಿಸಿ, ಭಿನ್ನತೆಯನ್ನು ದೂರಗೊಳಿಸಿ ಸಮಾನತೆಯ ಸಮಾಜ ಕಟ್ಟುವುದು ಅವರ ಕನಸಾಗಿತ್ತು. ಅವರ ಸಂದೇಶ ಮತ್ತು ಜೀವನವನ್ನು ವಿದ್ಯಾರ್ಥಿಗಳಿಗೆ, ಸಮಾಜಕ್ಕೆ ತಲುಪಿಸುವ ಕಾರ್ಯ ಪೀಠದಿಂದ ಆಗುತ್ತಿರುವುದು ಶ್ಲಾಘನೀಯ” ಎಂದರು.
ಉಪ್ಪಿನಂಗಡಿ ಕಾಲೇಜು ಪ್ರಾಂಶುಪಾಲರಾದ ಪ್ರೊ. ಸುಬ್ಬಪ್ಪ ಕೈಕಂಬ ಅವರು ‘ಕನಕದಾಸರ ಸಾಹಿತ್ಯದಲ್ಲಿ ಸಾಮರಸ್ಯ’ ಎಂಬ ವಿಷಯದಲ್ಲಿ ಮಾತನಾಡಿ “ಪ್ರಭುತ್ವ ಯಾವತ್ತೂ ದೀನ ದಲಿತರ ಪರವಾಗಿರಬೇಕು. ಅವರನ್ನು ಬೆಂಬಲಿಸಿ ಪ್ರೋತ್ಸಾಹಿಸಬೇಕು ಎಂಬುದನ್ನು ರಾಮಧಾನ್ಯ ಚರಿತೆ ಕಾವ್ಯದ ಮೂಲಕ ತೋರಿಸಿಕೊಟ್ಟ ಕವಿ ಕನಕ. ಅದೇ ಕಾವ್ಯದ ಕೊನೆಯಲ್ಲಿ ಮೇಲ್ವರ್ಗ ಮತ್ತು ಶ್ರಮಿಕ ವರ್ಗ ಪರಸ್ಪರ ಗೌರವ ಪ್ರೀತಿಗಳಿಂದ ಸಮಾನತೆಯ ಭಾವದಲ್ಲಿ ಬದುಕಬೇಕೆಂಬ ಸಂದೇಶವನ್ನು ಕನಕದಾಸರು ಸಾರಿದ್ದಾರೆ. ಅವರು ಸಮಾಜದ ದುಷ್ಟತನವನ್ನು ವಿರೋಧಿಸಿದರು. ಆದರೆ ಸಂಘರ್ಷಕ್ಕಿಂತ ಸಾಮರಸ್ಯದ ದಾರಿಯಲ್ಲಿಯೇ ಪರಿವರ್ತನೆ ಸಾಧ್ಯವಾಗಬೇಕೆಂದು ಬಯಸಿದ್ದರು. ಹರಿದಾಸ ಪರಂಪರೆಯಲ್ಲಿ ಒಬ್ಬನೇ ಒಬ್ಬ ಶೂದ್ರಕವಿ ಎಂದರೆ ಕನಕದಾಸ. ಸಮಕಾಲೀನ ತಲ್ಲಣಗಳಿಗೆ ಕನಕದಾಸರ ಕಾವ್ಯ ಮತ್ತು ಕೀರ್ತನೆಗಳಲ್ಲಿ ಉತ್ತರವಿದೆ” ಎಂದರು.
ಮಂಗಳೂರು ಆಕಾಶವಾಣಿಯ ಸೂರ್ಯನಾರಾಯಣ ಭಟ್ ಮಾತನಾಡಿ “ವಿಶ್ವ ಸಂಸ್ಥೆ ಈ ವರ್ಷವನ್ನು ಸಿರಿಧಾನ್ಯಗಳ ವರ್ಷವೆಂದು ಸಾರಿದೆ. ಈ ಹಿನ್ನೆಲೆಯಿಂದ ಕನಕದಾಸರ ರಾಮಧಾನ್ಯ ಚರಿತೆಯನ್ನು ಹೊಸ ಓದಿಗೆ ಒಳಪಡಿಸಬೇಕಿದೆ” ಎಂದರು. ಪ್ರೊ. ಸೋಮಣ್ಣ ಹೊಂಗಳ್ಳಿ ಮಾತನಾಡಿ “ಭಾರತೀಯ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಾದಿಗಳು ಕೆಳಜಾತಿಯವರಿಂದಲೇ ಸೃಷ್ಟಿಗೊಂಡಿವೆ. ಕನಕದಾಸರ ಕಾವ್ಯಗಳಲ್ಲೂ ಆ ಉತ್ಕೃಷ್ಟತೆಯನ್ನು ಗುರುತಿಸಬಹುದಾಗಿದೆ” ಎಂದರು. ಸಮಾಜಶಾಸ್ತ್ರ ವಿಭಾಗದ ಪ್ರೊ.ವಿನಯ ರಜತ್, ಡಾ.ಸಬಿತಾ, ಡಾ.ಗೋವಿಂದರಾಜ್, ಡಾ.ಯಶುಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಶೋಧನ ಸಹಾಯಕ ಆನಂದ ಎಂ. ಕಿದೂರು ವಂದಿಸಿ, ವಿದ್ಯಾರ್ಥಿನಿ ವೀಕ್ಷಿತ ಮತ್ತು ವಿಸ್ಮಾ ಡಿಮೆಲ್ಲೊ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಕನಕ ಕೀರ್ತನ ಗಾಯನ ಕಾರ್ಯಕ್ರಮ ನಡೆಯಿತು.