ಮಂಗಳೂರು : ಎರಡು ವರ್ಷಗಳ ಹಿಂದೆ ಅಗಲಿದ ಯುವ ರಂಗಕರ್ಮಿ ಮತ್ತು ನಂದಗೋಕುಲದ ವ್ಯವಸ್ಥಾಪಕ ಕನಸು ಕಾರ್ತಿಕ್ ನೆನಪಿನಲ್ಲಿ ಅರೆಹೊಳೆ ಪ್ರತಿಷ್ಠಾನ ನೀಡುವ ‘ಕನಸು ಕಾರ್ತಿಕ್ ಯುವ ರಂಗ ಪುರಸ್ಕಾರ’ಕ್ಕೆ ನಿರ್ದೇಶಕ ಹಾಗೂ ನಟರಾದ ಭುವನ್ ಮಣಿಪಾಲ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂಪಾಯಿ ಐದು ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಶೀಘ್ರದಲ್ಲೇ ನಡೆಯಲಿರುವ ನಾಟಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ತಿಳಿಸಿದ್ದಾರೆ.
ಭುವನ್ ಮಣಿಪಾಲ್ :
‘ನೀನಾಸಂ’ ಪದವೀಧರರಾದ ಭುವನ್ ಮಣಿಪಾಲ್ ಇವರು ರಂಗ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿ ರಂಗ ಅಧ್ಯಾಪಕರಾಗಿ ಅನೇಕ ವಿದ್ಯಾರ್ಥಿಗಳಿಗೆ ರಂಗ ನಟನೆಯ ಅಭ್ಯಾಸ ನೀಡಿದ್ದಾರೆ. ಸಂಗಮ ಕಲಾವಿದರು (ರಿ.) ಮಣಿಪಾಲ, ರಥಬೀದಿ ಗೆಳೆಯರು (ರಿ.) ಉಡುಪಿ, ಚಿನ್ನಾರಿ ನಾಟಕ ತಂಡ ಮಣಿಪಾಲ, ಕುಸುಮ ಸಾರಂಗ ಸುಬ್ರಹ್ಮಣ್ಯ, ಸುರಭಿ ಬೈಂದೂರು, ನೃತ್ಯ ನಿಕೇತನ ಕೊಡವೂರು ಉಡುಪಿ ಮುಂತಾದ ಸಂಸ್ಥೆಗಳಲ್ಲಿ ನಟರಾಗಿ, ರಂಗ ವಿನ್ಯಾಸಕರಾಗಿ ಕಾರ್ಯ ನಿರ್ವಹಿಸಿದ ಇವರು ಗಣೇಶ್ ಮಂದಾರ್ತಿ ನಿರ್ದೇಶನದ ‘ವಾಲಿವಧೆ’ ಹಾಗೂ ‘ಚೋಮನ ದುಡಿ’, ಶ್ರೀಪಾದ್ ಭಟ್ ನಿರ್ದೇಶನದ ‘ಮಹಿಳಾ ಭಾರತ’ ಹಾಗೂ ‘ಚಿತ್ರ’, ಪ್ರಥ್ವಿನ್ ಕೆ. ವಾಸು ನಿರ್ದೇಶನದ ‘ಗಾಂಧಿ@ಗೋಡ್ಸೆ.ಕಾಂ’, ಪ್ರಶಾಂತ್ ಉದ್ಯಾವರ ನಿರ್ದೇಶನದ ‘We teach life Sir’ ಹಾಗೂ ಶಂಕರ್ ವೆಂಕಟೇಶ್ವರನ್ ನಿರ್ದೇಶನದ ‘ಒಳಾಂಗಣ’ ಹೀಗೆ ಹಲವಾರು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ‘ಗೋವಿನ ಹಾಡು’, ‘ಬೆಳಕಿನೆಡೆಗೆ’, ‘ಮಕ್ಕಳ ರಾಮಾಯಣ’, ‘ಕೊನೆಗೆ ಸಿಕ್ಕಿದ್ದೇನು’, ‘ಸಾಹೇಬರು ಬರುತ್ತಾರೆ’ ಹಾಗೂ ‘ಮೂಕ ನರ್ತನ’ ಮೊದಲಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ.