ಕುಂಬಳೆ: ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕಾಸರಗೋಡಿನ ಹಿರಿಯ ಸಾಹಿತಿ, ಕವಿ, ಶಿಕ್ಷಣ ತಜ್ಞ ವಿ. ಬಿ. ಕುಳಮರ್ವ ಅವರ ಮುಕ್ತಕಗಳ ಸಂಕಲನ ‘ಕಂದನ ಮುತ್ತು’ ಇದರ ಲೋಕಾರ್ಪಣಾ ಸಮಾರಂಭವು ದಿನಾಂಕ 17 ನವೆಂಬರ್ 2024ರ ಭಾನುವಾರದಂದು ಕುಂಬಳೆ ಸಮೀಪದ ನಾರಾಯಣಮಂಗಳದಲ್ಲಿರುವ ಅವರ ನಿವಾಸದಲ್ಲಿ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮದುರೈ ಕಾಮರಾಜ ಯುನಿವರ್ಸಿಟಿಯ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥರಾಗಿರುವ ಡಾ. ಹರಿಕೃಷ್ಣ ಭರಣ್ಯ ಕೃತಿ ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಹಾಗೂ ನಿವೃತ್ತ ಶಿಕ್ಷಕರಾದ ಬಳ್ಳಂಬೆಟ್ಟು ಈಶ್ವರ ಭಟ್ ಹಾಗೂ ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಆಯಿಶಾ ಪೆರ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಕೃತಿಕಾರರು ಮತ್ತು ಕೃತಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಕೃತಿಯನ್ನು ಪ್ರಕಟಿಸಿದ ಮಂಗಳೂರಿನ ಕಥಾಬಿಂದು ಪ್ರಕಾಶನದ ಪಿ. ವಿ. ಪ್ರದೀಪ್ ಕುಮಾರ್ (ಲೇಖಕ, ಪ್ರಕಾಶಕ) ಉಪಸ್ಥಿತರಿದ್ದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕೃತಿಕಾರರಾದ ವಿ.ಬಿ ಕುಳಮರ್ವ “10,000ಕ್ಕೂ ಅಧಿಕ ಮುಕ್ತಕಗಳು ಇದುವರೆಗೆ ರಚನೆಯಾಗಿದ್ದು, ಮೊದಲ ಹಂತದಲ್ಲಿ 1000 ಮುಕ್ತಕಗಳನ್ನು ಒಳಗೊಂಡ ಸಂಕಲನ ‘ಕಂದನ ಮುತ್ತು’ ಲೋಕಾರ್ಪಣೆಗೊಳ್ಳುತ್ತಿದೆ.” ಎಂದು ತಿಳಿಸಿದರು.
ಕವಿ, ಸಾಹಿತಿ, ರಾಧಾಕೃಷ್ಣ ಉಳಿಯತ್ತಡ್ಕ ಶುಭಾಶಂಸನೆಗೈದರು. ಬೆಳ್ತಂಗಡಿ ನಡ ಸರಕಾರಿ ಪದವಿಪೂರ್ವ ಕಾಲೇಜು ಇಲ್ಲಿನ ಉಪನ್ಯಾಸಕಿಯಾದ ವಸಂತಿ ಜಿ. ಭಟ್ ಕುಳಮರ್ವ ಅವರು ಕಾರ್ಯಕ್ರಮ ನಿರೂಪಿಸಿ, ಕಾಸರಗೋಡಿನ ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಲಲಿತಾ ಲಕ್ಷ್ಮೀ ಕುಳಮರ್ವ ವಂದನಾರ್ಪಣೆಗೈದರು.
ಪುಸ್ತಕ ಲೋಕಾರ್ಪಣೆಯ ಬಳಿಕ ಕೃತಿಯಿಂದ ಆಯ್ದ ಕೆಲವು ಮುಕ್ತಕಗಳ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು. ನಿವೃತ್ತ ಪ್ರಾಂಶುಪಾಲರಾದ ಉಂಡೆಮನೆ ವಿಶ್ವೇಶ್ವರ ಭಟ್ ಹಾಗೂ ಗಣಪತಿ ಭಟ್ ಕುಳಮರ್ವ ಅವರು ಈ ಕಾರ್ಯಕ್ರಮ ನಡೆಸಿಕೊಟ್ಟರು. ಅನಂತರ ಪ್ರೊ. ಕೊಳಚೆಪ್ಪು ಗೋವಿಂದ ಭಟ್ಟರ ಅಧ್ಯಕ್ಷತೆಯಲ್ಲಿ ಕಿರು ಕವಿಗೋಷ್ಠಿ ನಡೆಯಿತು.