ಮೈಸೂರು: ನಟನ ಮೈಸೂರು ಇದರ ರೆಪರ್ಟರಿ ತಂಡದ ಪ್ರಯೋಗ ನಾಟಕ ಕಣಿವೆಯ ಹಾಡು 21-05-2023ರ ಸಂಜೆ ನಟನ ರಂಗ ಶಾಲೆಯಲ್ಲಿ ನಡೆಯಲಿದೆ. ಅತೊಲ್ ಫ್ಯೂಗಾರ್ಡ್ ರಚಿಸಿರುವ ಈ ನಾಟಕವನ್ನು ಡಾ. ಮೀರಾ ಮೂರ್ತಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೇಘ ಸಮೀರ ಮತ್ತು ದಿಶಾ ರಮೇಶ್ ನಟಿಸುವ ನಾಟಕಕ್ಕೆ ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಸಂಗೀತ ನೀಡಲಿದ್ದು, ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ನಾಡಿನ ಹೆಸರಾಂತ ನಿರ್ದೇಶಕ ಡಾ. ಶ್ರೀಪಾದ ಭಟ್ ಅವರದ್ದು.
ನಾಟಕದ ಕುರಿತು: ಮೂಲತಃ ದಕ್ಷಿಣ ಆಫ್ರಿಕಾ ನೆಲದ ಕತೆಯಿದು. ಆದರೆ ಎಲ್ಲ ಶ್ರೇಷ್ಠ ಕೃತಿಗಿರುವಂತೆಯೇ ಈ ಕತೆಗೂ ದೇಶ, ಕಾಲ ಮೀರಿದ ಪ್ರಸ್ತುತಿಯ ಅಪಾರ ಸಾಧ್ಯತೆ ಇದೆ. ಅಂತಹ ಪ್ರಯತ್ನವಿದು. ಕಣಿವೆಯ ಹಾಡು ಕಣಿವೆ ದಾಟುವ, ಕಣಿವೆಯೊಳಗಿನ ಬದುಕು ತನ್ನ ಹಾಡು ಮುಂದುವರಿಸುವ ಸಂಘರ್ಷದ ಕತೆ ಇದು.
ತಮ್ಮದೇ ನೆಲದಲ್ಲಿ ಪರಕೀಯರಾಗುತ್ತ, ಗುಲಾಮರಾಗುತ್ತ ಹೋಗುತ್ತಿರುವ ಮೂಲನಿವಾಸಿಗಳ ಬದುಕನ್ನೂ, ಪುಟ್ಟ ಬೀಜಗಳು ದೊಡ್ಡದಾಗಿ ಕಾಯಿ ಬಿಡುವ ನೆಲದ ಪವಾಡಗಳನ್ನೂ, ಸಾಕಷ್ಟು ಅಪಾಯಗಳಿದ್ದರೂ ಬಿಡುಗಡೆಯ ಕನಸನ್ನು ಬಿತ್ತುವ ನಗರಗಳನ್ನೂ ಒಟ್ಟಾಗಿ ಇಡುವ ನಾಟಕವು ಈ ಎಲ್ಲ ಬಗೆಯ ಚರ್ಚೆಗಳನ್ನೂ ಸಮತೂಕದಲ್ಲಿರಿಸುತ್ತಿದೆ. ಬದುಕನ್ನು ಕಪ್ಪು ಬಿಳುಪು ಆಗಿ ನೋಡದಂತೆ, ತಾತ್ವಿಕವಾಗಿ ಬದುಕನ್ನು ನೋಡುವಂತೆ ನಮ್ಮನ್ನು ಸಿದ್ಧಗೊಳಿಸುತ್ತದೆ. ಪ್ರಸ್ತುತ ನಾಟಕದಲ್ಲಿ ನಾಟಕಕಾರನ ಪಾತ್ರ ಹಾಗೂ ಅಜ್ಜ ಬಕ್ಸ್ ನ ಪಾತ್ರ ಎರಡನ್ನೂ ಒಬ್ಬರೇ ನಿರ್ವಹಿಸಬೇಕು ಎಂದು ಒತ್ತಾಯಿಸುವ ಲೇಖಕ, ಈ ಮೂಲಕ ಯಾವುದೋ ಒಂದು ವಾದದ ಕಡೆ, ಭಾವುಕವಾಗಿ ಒಂದೆಡೆ ವಾಲದೇ ಇರುವಂತೆ ನಮ್ಮನ್ನು ನಿರ್ದೇಶಿಸುತ್ತಾನೆ.
ಕಣಿವೆಯ ಹಾಡು ಹೀಗೆ… ನಮ್ಮ ಎದೆಗಳಲ್ಲಿ ಮಾತ್ರವಲ್ಲ ಬುದ್ಧಿಯಲ್ಲೂ ರಿಂಗುಣಿಸುವುದು ಹೀಗೆ: ದಕ್ಷಿಣ ಆಫ್ರಿಕದ ಇತಿಹಾಸ ಮತ್ತು ವರ್ತಮಾನದ ಬಗ್ಗೆ ನನ್ನಲ್ಲಿ ಅಸಾಧ್ಯ ನೋವಿದೆ, ಸಿಟ್ಟಿದೆ. ಆದರೆ ನನ್ನ ಬರವಣಿಗೆಯ ಶಕ್ತಿ ಪ್ರೀತಿ ಮಾತ್ರ. ನಾನು ನನಗಿರುವ ಸಿಟ್ಟಿನ ಕಾರಣಗಳನ್ನು ಪ್ರೀತಿಗೆ ಹೇಳಿದ್ದೇನೆ. ಅದು ಕೃತಿ ರಚಿಸುತ್ತದೆ.
ಮಂಡ್ಯ ರಮೇಶ್ ಅವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು, ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು, ರಂಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.