ಬೈಂದೂರು : ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ಸ್ಥಳೀಯ ಕಲಾಸಂಸ್ಥೆ ‘ಲಾವಣ್ಯ’ದ 47ನೇ ವಾರ್ಷಿಕೋತ್ಸವ ಹಾಗೂ ರಂಗಪಂಚಮಿ-2024 ಐದು ದಿನಗಳ ನಾಟಕೋತ್ಸವದ ಮೂರನೇ ದಿನದ ಕಾರ್ಯಕ್ರಮವು ದಿನಾಂಕ 04-03-2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಶುಭಾಶಂಸನೆಗೈದ ಹಿರಿಯ ಪತ್ರಕರ್ತ ಕೆ.ಸಿ. ರಾಜೇಶ “ಸಮಾಜದಲ್ಲಿರುವಂತಹ ಅಸಮಾನತೆ, ಅಸ್ಪಶ್ಯತೆ ಸೇರಿದಂತೆ ಓರೆಕೋರೆಗಳನ್ನು ರಂಗದ ಮೂಲಕ ತಿದ್ದಬಹುದು ಎಂದು ಹೇಳಿಕೊಟ್ಟಿದ್ದು ರಂಗಭೂಮಿ. ಅಧುನಿಕತೆ ಯುಗದಲ್ಲಿ ರಂಗಭೂಮಿಯನ್ನು ನೋಡುವಂತವರ ಆಸಕ್ತಿ ಕುಂದುತ್ತಿರುವಂತಹ ಇಂದಿನ ದಿನಗಳಲ್ಲಿಯೂ ಕೂಡ ‘ಲಾವಣ್ಯ’ವು ರಂಗಾಸಕ್ತರನ್ನು ಉಳಿಸಿಕೊಳ್ಳುವಂತಹ ಒಂದು ಶೇಷ್ಠತೆಯನ್ನು ಉಳಿಸಿಕೊಂಡಿದೆ. ಪ್ರಸ್ತುತ ಕಾಲಘಟ್ಟದಲ್ಲಿಯೂ ರಂಗಭೂಮಿಯ ಸತ್ವ ಹಾಗೂ ಚಿಂತನೆಗಳನ್ನು ಲಾವಣ್ಯವು ಉಳಿಸಿಕೊಂಡು ಬೆಳೆಯುತ್ತಿರುವುದು ಸಂತೋಷದಾಯಕ. ರಂಗಭೂಮಿ ಮೂಲಕ ಸಾಹಿತ್ಯ, ಶೈಕ್ಷಣಿಕ, ಮಾಧ್ಯಮ ಮತ್ತು ಸಾಮಾಜಿಕ ಜಗತ್ತಿಗೆ ಒಂದಷ್ಟು ಶಕ್ತಿಯನ್ನು ಲಾವಣ್ಯ ಸಂಸ್ಥೆ ತುಂಬಿದೆ” ಎಂದು ಅಭಿಪ್ರಾಯಪಟ್ಟರು.
ಕನಕ ಗ್ರೂಪ್ಸ್ ಇದರ ಆಡಳಿತ ನಿರ್ದೇಶಕ ಜಗದೀಶ ಶೆಟ್ಟಿ ಕುದ್ರುಕೋಡು ಅಧ್ಯಕ್ಷತೆ ವಹಿಸಿ ಮಾತನಾಡಿ “ಇಂದಿನ ಶಿಕ್ಷಣ ಪದ್ಧತಿಯಲ್ಲಿ ಹೃದಯ ಸಂಸ್ಕಾರ ನೀಡುವ ಶಿಕ್ಷಣಕ್ಕೆ ಪ್ರಾಮುಖ್ಯತೆ ಸಿಗುತ್ತಿಲ್ಲ. ಆದ್ದರಿಂದ ಕಲೆಯನ್ನು ಮನೆ ಮನೆಗೆ ತಲುಪಿಸುವ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು. ಕಲೆಯನ್ನು ಸಂಪಾದಿಸಲು ಉತ್ತೇಜನ ನೀಡಬೇಕು. ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವ ಕಾರ್ಯ ನಡೆಯಬೇಕು” ಎಂದರು.
ಹಿರಿಯ ರಂಗ ಕಲಾವಿದ ಕೆ. ಪುಂಡಲೀಕ ನಾಯಕ್ ಹಾಗೂ ಹೋಮಿಯೋಪತಿ ವೈದ್ಯ ಡಾ. ರೋಶನ್ ಪಾಯಸ್ ಇವರನ್ನು ಸನ್ಮಾನಿಸಲಾಯಿತು. ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯ ಜಯಾನಂದ ಹೋಬಳಿದಾರ್, ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಪ್ರಧಾನ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್, ರೋಟರಿ ಕ್ಲಬ್ ಅಧ್ಯಕ್ಷ ಶಿರೂರು ಪ್ರಸಾದ ಪ್ರಭು, ಅರ್ಚಕ ಸುಬ್ರಹ್ಮಣ್ಯ ಅಡಿಗ ಕೆರೆಕಟ್ಟೆ ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರಾದ ರಾಜೇಶ ನಾಯ್ಕ್ ಸ್ವಾಗತಿಸಿ, ಚೈತ್ರಾ ಯಡ್ತರೆ ನಿರೂಪಿಸಿ, ರೋಶನ್ ವಂದಿಸಿದರು. ನಂತರ ‘ನಟನ’ ಮೈಸೂರು ತಂಡದ ಸದಸ್ಯರಿಂದ ‘ಕಣಿವೆಯ ಹಾಡು’ ನಾಟಕ ಪ್ರದರ್ಶನಗೊಂಡಿತು.