ಬೆಂಗಳೂರು : ಕನ್ನಡ ಬರಹಗಾರ ಮತ್ತು ಪ್ರಕಾಶಕರ ಸಂಘದ ಕಾರ್ಯದರ್ಶಿ ಆರ್. ದೊಡ್ಡೇಗೌಡ ಅವರನ್ನು ‘ಕನ್ನಡ ಅರವಿಂದ’ ಪ್ರಶಸ್ತಿ ಹಾಗೂ ಕನ್ನಡ ಹೋರಾಟಗಾರ ನಾ. ನಾಗರಾಜಯ್ಯ ಅವರನ್ನು ‘ಕನ್ನಡ ಚಿರಂಜೀವಿ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ನಯನ ಸಭಾಂಗಣದಲ್ಲಿ ದಿನಾಂಕ 12-12-2022ರಂದು ನಡೆಯುವ ಕನ್ನಡ ಗೆಳೆಯರ ಬಳಗದ ವಾರ್ಷಿಕ ಪ್ರಶಸ್ತಿ ಪ್ರದಾನ, ಪುಸ್ತಕ ಬಹುಮಾನ, ಕನ್ನಡ ಚಿಂತನೆ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
ಕನ್ನಡ ಪರಿಚಾರಕ ಆರ್. ದೊಡ್ಡೇಗೌಡ ಅವರಿಗೆ ‘ಕನ್ನಡ ಅರವಿಂದ’ ಪ್ರಶಸ್ತಿ :
ಬೆಳಗಾವಿ ಕನ್ನಡಪರ ಹೋರಾಟಕ್ಕೆ ಗಟ್ಟಿಯ ನೆಲೆ ಒದಗಿಸಿದ ಪತ್ರಕರ್ತ ಅರವಿಂದರಾಯ ಜೋಶಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷರಾಗಿ ಕನ್ನಡ ಚಟುವಟಿಕೆಗೆ ವಿಸ್ತಾರವಾದ ವೇದಿಕೆಯನ್ನು ನಿರ್ಮಿಸಿದವರು. ಅಪ್ಪಟ ದೇಶಾಭಿಮಾನಿ, ಸ್ವಾತಂತ್ರ್ಯ ಸೇನಾನಿ, ಬೆಳಗಾವಿಯಲ್ಲಿ ಪ್ರಥಮ ಕನ್ನಡ ಶಾಲೆ ಆರಂಭಿಸಿದವರು, ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದವರು, ಕೇಂದ್ರ ಗೃಹ ಸಚಿವರಿಗೆ ಕಾರ್ಯದರ್ಶಿಯಾಗಿದ್ದಾಗಲೂ ಕರ್ನಾಟಕವನ್ನು ಮರೆಯಲಿಲ್ಲ. ಜೋಶಿ ಅವರ ನೆನಪಿನಲ್ಲಿ ಕನ್ನಡ ಪರಿಚಾರಕರಿಗೆ ಕನ್ನಡ ಅರವಿಂದ’ ಪ್ರಶಸ್ತಿಯನ್ನು ಬಳಗವು ನೀಡುತ್ತದೆ.
2023ರ ‘ಕನ್ನಡ ಅರವಿಂದ ಪ್ರಶಸ್ತಿಯನ್ನು ಮಕ್ಕಳ ಸಾಹಿತ್ಯ, ವ್ಯಕ್ತಿಚಿತ್ರ, ವ್ಯಕ್ತಿ ವಿಕಸನ, ಸಂಪಾದನೆ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡುತ್ತಿರುವ ಸಪ್ನ ಕನ್ನಡ ವಿಭಾಗದ ಮುಖ್ಯಸ್ಥ, ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಕಾರ್ಯದರ್ಶಿ, ರಾಜ್ಯ ಗ್ರಂಥಾಲಯ ಆಯ್ಕೆ ಸಮಿತಿಯ ಸದಸ್ಯರಾಗಿರುವ ಕನ್ನಡ ಪರಿಚಾರಕ ಆರ್. ದೊಡ್ಡೇಗೌಡ ಅವರಿಗೆ ಕೊಡ ಮಾಡಲಾಗುತ್ತಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ ಸಲ್ಲಿಸಿದ ಸೇವೆ ಉಲ್ಲೇಖನೀಯವಾದದ್ದು, ಹಾಗೇ ಪ್ರಕಾಶಕರು, ಲೇಖಕರುಗಳಿಂದ ಕನ್ನಡ ಪುಸ್ತಕಗಳನ್ನು ಸಂಗ್ರಹಿಸಿ ಪ್ರತಿ ವರ್ಷ ಒಂದೊಂದು ಜಿಲ್ಲೆಯ 100 ಶಾಲೆಗಳಿಗೆ ನೀಡುತ್ತಿರುವುದು, ಹಲವು ಕನ್ನಡ ಸಂಘಟನೆಗಳೊಡನೆ ಮಾಡುತ್ತಿರುವ ಕನ್ನಡಪರ ಚಟುವಟಿಕೆಗಳ ವಿವರಗಳನ್ನು ದಾಖಲಿಸಿದರೆ ನಾಲ್ಕಾರು ಪುಟಗಳಾಗುತ್ತದೆ.
ಕನ್ನಡ ಹೋರಾಟಗಾರ ನಾ. ನಾಗರಾಜಯ್ಯ ಅವರಿಗೆ ‘ಕನ್ನಡ ಚಿರಂಜೀವಿ’ ಪ್ರಶಸ್ತಿ :
ಅಪರೂಪದ ಕನ್ನಡ ಪರಿಚಾರಕ ಅಳ್ಲ ಚಿರಂಜೀವಿ 1998ರಲ್ಲಿ ಕಣ್ಮರೆಯಾದರು. ಕೇಂದ್ರ ಅಬಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಅವರು ಅವಿವಾಹಿತರಾಗಿಯೇ ಉಳಿದು ತಮ್ಮ ಬಹುಪಾಲು ಸಂಪಾದನೆಯನ್ನು ಕನ್ನಡ ಕೆಲಸಗಳಿಗೆ ವಿನಿಯೋಗಿಸಿದರು. ಸಾಹಿತ್ಯ, ಸಂಸ್ಕೃತಿಗಳಲ್ಲಿ ಅಪಾರ ಜ್ಞಾನ ಹೊಂದಿದ್ದ ಚಿರಂಜೀವಿ ಬದುಕಿನುದ್ದಕ್ಕೂ ಕನ್ನಡ ಸೇವೆ ಮಾಡಿದರು. ಈ ಅನನ್ಯ ಕನ್ನಡ ಪರಿಚಾರಕನ ನೆನಪಿನಲ್ಲಿ ಕನ್ನಡ ಕಾರ್ಯಕರ್ತರಿಗೇ ಮೀಸಲಾದ ‘ಕನ್ನಡ ಚಿರಂಜೀವಿ’ ಪ್ರಶಸ್ತಿಯನ್ನು ಕನ್ನಡ ಗೆಳೆಯರ ಬಳಗವು 1998ರಿಂದ ನೀಡುತ್ತಾ ಬಂದಿದೆ.
2022ರ ‘ಕನ್ನಡ ಚಿರಂಜೀವಿ’ ಪ್ರಶಸ್ತಿಯನ್ನು 1960ರ ದಶಕದಲ್ಲಿ ಭದ್ರಾವತಿಯಲ್ಲಿ ನಡೆದ ಹಿಂದಿ ವಿರೋಧಿ ಹೋರಾಟದ ಮೂಲಕ ಕನ್ನಡ ಹೋರಾಟಕ್ಕೆ ಅಡಿಯಿಟ್ಟ ಸಿ.ಎಂ. ಇಬ್ರಾಹಿಂ ಸಂಗಾತಿ, ಬೆಂಗಳೂರಿಗೆ ಬಂದ ನಂತರ ವಾಟಾಳ್ ನಾಗರಾಜ್ ಅವರ ಚಳವಳಿಯಲ್ಲಿ, ಗೋಕಾಕ್ ಚಳವಳಿಯ ನಂತರ ಡಾ. ಎಂ. ಚಿದಾನಂದ ಮೂರ್ತಿ ನೇತೃತ್ವದ ಸಾಹಿತಿಗಳ ಕಲಾವಿದರ ಬಳಗ, ಕನ್ನಡ ಶಕ್ತಿ ಕೇಂದ್ರಗಳಲ್ಲಿ ಸಕ್ರಿಯ ಕಾರ್ಯಕರ್ತ ನಾ. ನಾಗರಾಜಯ್ಯ ಅವರಿಗೆ ನೀಡಲಾಗುತ್ತಿದೆ. ಎಚ್.ಎ.ಎಲ್. ಉದ್ಯೋಗಿಯಾಗಿ ಕಾರ್ಮಿಕ ಹೋರಾಟಗಳಲ್ಲಿ ಪಾಲ್ಗೊಂಡು ಕಾರ್ಮಿಕ ಸಂಘದ ಚುನಾಯಿತ ಪ್ರತಿನಿಧಿಯಾಗಿ, ಕಾರ್ಖಾನೆಯಲ್ಲಿ ಕನ್ನಡ ವಾತಾವರಣ ನಿರ್ಮಾಣ ಮಾಡುವ ಕಾಯಕದಲ್ಲಿ ಪಾಲ್ಗೊಂಡ ಇವರು ಕನ್ನಡ ಶಕ್ತಿ ಕೇಂದ್ರ ರಾಜ್ಯದ ಪ್ರವಾಸಗಳಲ್ಲೂ ಪಾಲ್ಗೊಂಡು ರಾಜ್ಯದ ವಿವಿಧ ಭಾಗಗಳಲ್ಲಿ ಕನ್ನಡ ಹೋರಾಟದಲ್ಲಿ ಭಾಗವಹಿಸಿದ್ದಾರೆ.