ಮಂಗಳೂರು : ತಲಪಾಡಿಯ ಶಾರದಾ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ‘ಕನ್ನಡ ಹಬ್ಬ’ವನ್ನು ದಿನಾಂಕ 27 ನವೆಂಬರ್ 2024ರಂದು ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರ ಮತ್ತು ಅದರ ಸುತ್ತ ಇರುವ ಪಂಪ, ರನ್ನ, ಜನ್ನರಿಂದ ಹಿಡಿದು ಇತ್ತೀಚಿನ ಕವಿಗಳ ಮಹಾ ಕಾವ್ಯಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಹಚ್ಚೇವು ಕನ್ನಡದ ದೀಪ ಎಂಬ ಹಾಡಿನೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿನಿಯರಿಂದ ನಾಡಗೀತೆ ಗಾಯನದ ನಂತರ ಕಾಲೇಜಿನ ಪ್ರಾಂಶುಪಾಲ ವಿನಾಯಕ್ ಬಿ. ಜಿ. ಗಣ್ಯರನ್ನು ಸ್ವಾಗತಿಸಿದರು.
ಗಣ್ಯರಿಗೆ ಕನ್ನಡದ ಶಾಲು ಹೊದಿಸಿ ಹೂ ನೀಡಿ ಸ್ವಾಗತಿಸಲಾಯಿತು. ಇದೇ ಸಂದರ್ಭದಲ್ಲಿ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಂಗಳೂರು ವಿ.ವಿ. ಇಲ್ಲಿನ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಚಾರ್ಯ ಡಾ. ಧನಂಜಯ್ ಕುಂಬ್ಳೆ ಇವರನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಇವರು ಸನ್ಮಾನಿಸಿದರು. ಉಪನ್ಯಾಸಕಿ ಸಹನಾ ಪರಿಚಯಿಸಿದರು.
ಈ ವೇಳೆ ಡಾ. ಎಂ.ಬಿ. ಪುರಾಣಿಕ್ ಇವರು ಮಾತನಾಡಿ “ಶಾರದಾ ಸಂಸ್ಥೆಯು ನಾಡು, ನುಡಿ, ಕಲೆ, ಸಂಸ್ಕೃತಿ, ಸಂಸ್ಕಾರಗಳ ಉಳಿವಿಗೆ ಮತ್ತು ಬೆಳವಣಿಗೆಗೆ ಆರಂಭದಿಂದಲೂ ಶ್ರಮಿಸುತ್ತಾ ಬಂದಿದೆ. ಮುಂದೆಯೂ ಅದೇ ನಿಲುವಿನಲ್ಲಿ ಮುಂದುವರಿಯುತ್ತದೆ.” ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಧನಂಜಯ್ ಕುಂಬ್ಳೆ “ಈಗಿನ ಯುವಪೀಳಿಗೆ ಬೇರನ್ನು ಮರೆತು ಹೂವಿನೊಂದಿಗೆ ಸೆಲ್ಪಿ ತೆಗೆವ ಹುಚ್ಚಿನಲ್ಲಿದ್ದಾರೆ. ಆದರೆ ಶಾರದಾ ವಿದ್ಯಾನಿಕೇತನದಲ್ಲಿ ಹಳೆಯ ಕಾವ್ಯ ಪುಸ್ತಕಗಳ ಪ್ರದರ್ಶನದ ಮೂಲಕ ಹಾಗೂ ನೃತ್ಯದ ಮೂಲ ಸಂಸ್ಕೃತಿಯಾದ ಭರತನಾಟ್ಯವನ್ನು ಆಯೋಜಿಸುವ ಮೂಲಕ ಬೇರನ್ನು ನೆನೆಯುವ, ಗುರುತಿಸುವ ಹಾಗೂ ಪೋಷಿಸುವ ಕೆಲಸ ಮಾಡುತ್ತಿದೆ.” ಎಂದರು.
ಕನ್ನಡ ನಾಟ್ಯ ವೈಭವವನ್ನು ನಡೆಸಲು ಆಗಮಿಸಿದ ಮಂಗಳೂರಿನ ಭರತಾಂಜಲಿ ನೃತ್ಯ ಶಾಲೆಯ ನಿರ್ದೇಶಕ ವಿದ್ವಾನ್ ಶ್ರೀಧರ ಹೊಳ್ಳ ಮತ್ತು ನಾಟ್ಯ ಶಿಕ್ಷಕಿ ಪ್ರತಿಮಾ ಹೊಳ್ಳ ದಂಪತಿಯ ಪರಿಚಯವನ್ನು ಉಪನ್ಯಾಸಕಿ ಸುಮನಾ ಅವರು ವಾಚಿಸಿದರು. ನಂತರ ನಾಟ್ಯ ದಂಪತಿಯನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಪ್ರಸ್ತುತಗೊಂಡ ಭರತನಾಟ್ಯ ಕಾರ್ಯಕ್ರಮವು ಎಲ್ಲಾ ಪ್ರೇಕ್ಷಕರ ಮನ ಗೆದ್ದಿತು. ಭಾವ, ಭಂಗಿ, ಅಭಿನಯ, ನಾಟ್ಯದಲ್ಲಿ ಒಬ್ಬರನ್ನೊಬ್ಬರು ಮೀರಿಸುವಂತಿತ್ತು. ಒಟ್ಟಿನಲ್ಲಿ ಭರತನಾಟ್ಯ ಕಾರ್ಯಕ್ರಮ ಅಮೋಘ, ಅಪೂರ್ವ, ಅನುಪಮ ಎಂಬಂತಿತ್ತು. ಉಪನ್ಯಾಸಕ ಸುರೇಶ್ ರಾವ್ ಅತ್ತೂರು ಮತ್ತು ಭೌತಶಾಸ್ತ್ರ ಉಪನ್ಯಾಸಕ ಪ್ರದೀಪ್ ರೈ ಕಾರ್ಯಕ್ರಮ ನಿರೂಪಣೆಯ ಜೊತೆಗೆ ರಸ ಪ್ರಶ್ನೆಯನ್ನು ಕೇಳಿ ಉತ್ತರಿಸಿದವರಿಗೆ ಸ್ಥಳದಲ್ಲೇ ಬಹುಮಾನ ನೀಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.