ಕಾಸರಗೋಡು : ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಗಡಿನಾಡಿನಲ್ಲಿ ‘ಕನ್ನಡ ಕಲರವ’ ಕಾರ್ಯಕ್ರಮವು ಕವಿಗೋಷ್ಠಿ, ವಿಚಾರಗೋಷ್ಠಿ, ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಿನಾಂಕ 08-10-2022ರ ಆದಿತ್ಯವಾರ ಕಾಸರಗೋಡಿನ ಹೋಟೆಲ್ ಉಡುಪಿ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು.
ವಕೀಲರು ಮತ್ತು ಕಾಂಗ್ರೆಸ್ ಮುಖಂಡರಾದಂತಹ ಎಂ.ಗುರುಪ್ರಸಾದ್ ಮಂಡ್ಯ ಇವರು ಈ ಭವ್ಯ ಸಮಾರಂಭವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಗಡಿನಾಡಿನಲ್ಲಿ ಭಾಷಾ ಸಮಸ್ಯೆ ಸಾಮಾಜಿಕ ತಾರತಮ್ಯವಿದೆ. ಆದರೆ ಪ್ರತಿಯೊಬ್ಬರೂ ಭಾಷಾ ದ್ವೇಷವಿಲ್ಲದೆ ಪರಸ್ಪರ ಗೌರವದಿಂದ ಬದುಕಬೇಕು. ಎಲ್ಲಿಯೂ ಮಾನವ ಹಕ್ಕು ಉಲ್ಲಂಘನೆ ಆಗಬಾರದು” ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಜೇಶ್ವರ ಜಿ.ಪಿ.ಎಂ.ಸಿ ಕಾಲೇಜಿನ ಪ್ರಾಧ್ಯಾಪಕ ಶಿವಶಂಕರ್ ಮಾತನಾಡಿ “ಕಾಸರಗೋಡಿನ ಕನ್ನಡಿಗರು ಹೊರ ರಾಜ್ಯಗಳಿಗೆ ಉದ್ಯೋಗಕ್ಕಾಗಿ ತೆರಳುವ ಬದಲು ಜಿಲ್ಲೆಯ ಸರಕಾರಿ ಹುದ್ದೆಗಳಿಸಲು ಪ್ರಯತ್ನಿಸಬೇಕು ಅದಕ್ಕಾಗಿ ಕನ್ನಡಿಗರಿಗಾಗಿ ಪ್ರತ್ಯೇಕ ತರಬೇತಿ ಕೇಂದ್ರ ತೆರೆಯಬೇಕು ಆ ಮೂಲಕ ಕನ್ನಡಿಗರ ಸಂಖ್ಯೆಯನ್ನು ಎಲ್ಲಾ ವಲಯದಲ್ಲೂ ಕಾಣುವಂತಾಗಬೇಕು” ಎಂದರು. ಬಿ.ಇ.ಎಂ.ಎಸ್ ಸಾರ್ವಜನಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ , ಹೊಟೇಲ್ ಉಡುಪಿ ಗಾರ್ಡನ್ ಮಾಲಕ ರಾಮಪ್ರಸಾದ್ ಕಾಸರಗೋಡು ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ.ಎಸ್.ಎಸ್.ಎ.ಪಿ ಸಂಸ್ಥೆಯ ಅಧ್ಯಕ್ಷೆಯಾದ ಶ್ರೀಮತಿ ರಾಣಿ ಪುಷ್ಪಲತಾ ದೇವಿಯವರು ಮಾತನಾಡಿ “ಕನ್ನಡ ಭಾಷೆ ಸಂಸ್ಕೃತಿಯ ಉಳಿಕೆಗೆ ಇಂತಹ ಕಾರ್ಯಕ್ರಮ ನಿರಂತರವಾಗಿರಬೇಕು ಹೆಚ್ಚು ಹೆಚ್ಚು ಕಾರ್ಯಕ್ರಮ ಆಯೋಜಿಸುವ ಮೂಲಕ ಮತ್ತಷ್ಟು ಕನ್ನಡ ಅಭಿಮಾನವನ್ನು ವೃದ್ಧಿಗೊಳಿಸಬೇಕು” ಎಂದರು.
ಈ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಾ.ವಾಣಿಶ್ರೀ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಇದರ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವವು ಬಹಳ ವಿಜೃಂಭಣೆಯಿಂದ ಜರುಗಿತು. ಸಂಸ್ಥೆಯ ವತಿಯಿಂದ ಕಲಾವಿದರಾದ ಗುರುರಾಜ್ ಕಾಸರಗೋಡು, ತನ್ವಿ ಶೆಟ್ಟಿ ಪಾಣಾಜೆ, ವರ್ಷಾ ಶೆಟ್ಟಿ, ಶ್ರದ್ಧಾ ಎ.ಎಸ್, ಭಾನ್ವಿ ಕುಲಾಲ್, ಮೇಧಾ ಎ.ಎಸ್, ಅಹನಾ ಎಸ್.ರಾವ್, ಪ್ರಥಮ್ಯ ಯು.ವೈ, ಪೂಜಾಶ್ರೀ, ಸಾನಿಕ, ಧನ್ವಿತ್ ಕೃಷ್ಣ, ತನ್ವಿ ಶೆಟ್ಟಿ, ಸನುಷಾ ಸುನಿಲ್, ಸನುಷಾ ಸುಧಾಕರನ್, ವರ್ಷ ಎಂ.ಆರ್, ಅಮೃತ, ಧನ್ಯಶ್ರೀ, ಅರುಣಾ, ಮನೀಷ, ವಿಜೇತ.ಕೆ, ಶ್ರಾವಣಿ, ನವ್ಯಶ್ರೀ ಕುಲಾಲ್, ದಿಯಾ ಸುಕೇಶ್ ಗಟ್ಟಿ ಮುಂತಾದವರು ತಮ್ಮ ಪ್ರತಿಭೆಯಿಂದ ಜನಮನ ರಂಜಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಹಿತ್ಯ ಪ್ರಸ್ತುತಿ ಹಾಗೂ ನಿರೂಪಣೆಯನ್ನು ಡಾ.ವಾಣಿಶ್ರೀ ಕಾಸರಗೋಡು ನೆರವೇರಿಸಿದರು.
ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಕೆ.ಎಸ್.ಎಸ್.ಎ.ಪಿ ಸಂಸ್ಥೆಯ ವತಿಯಿಂದ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಡಾ.ವಾಣಿಶ್ರೀ ಕಾಸರಗೋಡು ಹಾಗು ಗುರುರಾಜ್ ಕಾಸರಗೋಡು ಇವರನ್ನು ಶ್ರೀಮತಿ ರಾಣಿ ಪುಷ್ಪಲತಾ ದೇವಿಯವರು ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಿದರು. ಇದೇ ಸಂದರ್ಭದಲ್ಲಿ ಕನ್ನಡದ ಸೇವೆಗಾಗಿ ಶ್ರೀ ಶಿವರಾಮ ಕಾಸರಗೋಡು, ಮಾಧ್ಯಮ ಕ್ಷೇತ್ರದಲ್ಲಿನ ಸೇವೆಗಾಗಿ ಗಂಗಾಧರ್ ಯಾದವ್ ಹಾಗೂ ಸಮಾಜ ಸೇವೆಗಾಗಿ ಝುಲ್ಫಿಕರ್ ಆಲಿ ಇವರನ್ನು ಸನ್ಮಾನಿಸಲಾಯಿತು.
ಹಿರಿಯ ಕವಿ ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ, ಹಾಗೂ ಎಸ್.ಎನ್.ಭಟ್ ಸೈಪಂಗಲ್ ಇವರು ವಿಚಾರಗೋಷ್ಠಿ ಮಂಡಿಸಿದರು. ತದನಂತರ ಡಾ. ಬೇ.ಸಿ ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ನರಸಿಂಹ ಭಟ್ ಏತಡ್ಕ, ವಿರಾಜ್ ಆಡೂರ್, ಪ್ರಭಾವತಿ ಕೆದಿಲಾಯ, ಪ್ರಣತಿ ಎನ್ ಹೀಗೆ ಸುಮಾರು 20ಕ್ಕೂ ಅಧಿಕ ಕವಿಗಳು ಭಾಗವಹಿಸಿದರು. ಸಮಾರಂಭದ ಕೊನೆಯಲ್ಲಿ ಸೌಮ್ಯ ಶ್ರೀಕಾಂತ್ ಮತ್ತು ಸೌರಮ್ಯ ಸೈಜು ಮಧೂರು ತಂಡದವರಿಂದ ನಾಟ್ಯ ಸಿಂಚನ ಕಾರ್ಯಕ್ರಮ ಹಾಗೂ ಶ್ರೀರಕ್ಷಾ ಸರ್ಪoಗಳ ಮತ್ತು ಬಳಗದವರಿಂದ ಗೀತಾಗಾಯನ ನಡೆಯಿತು. ರೇಖಾ ಸುದೇಶ್ ರಾವ್, ನವ್ಯಶ್ರೀ ಸ್ವರ್ಗ ಮತ್ತು ದಿವ್ಯಾ ಗಟ್ಟಿ ಪರಕ್ಕಿಲ ಕಾರ್ಯಕ್ರಮವನ್ನು ನಿರೂಪಸಿ, ಸಂಸ್ಥೆಯ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿಯವರು ಸ್ವಾಗತಿಸಿ, ಎ.ಶ್ರೀಯುತ ಗಂಗಾಧರ ಗಾಂಧಿಯವರು ಧನ್ಯವಾದ ವಿತ್ತರು.