17 ಫೆಬ್ರವರಿ 2023, ಕಾರ್ಕಳ: ಕಾಂತಾವರ ಕನ್ನಡ ಸಂಘದ ಮೂರು ದತ್ತಿ ಪ್ರಶಸ್ತಿಗಳು ಘೋಷಣೆಯಾಗಿದ್ದು ಉಡುಪಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿರುವ ಶ್ರೀ ಸತೀಶ್ ಕುಮಾರ್ ಕೆಮ್ಮಣ್ಣು ಅವರ ಹೆಸರಿನ ಗಮಕ ಕಲಾ ಪ್ರವಚನ ಪ್ರಶಸ್ತಿಯನ್ನು ಪ್ರಸಿದ್ಧ ಗಮಕ ವಾಚನಕಾರರಾದ ಡಾ.ರಾಘವೇಂದ್ರ ರಾವ್ ಪಡುಬಿದ್ರಿ ಅವರಿಗೆ, ಪ್ರಸಿದ್ಧ ಗಮಕಿ ಉಡುಪಿಯ ಶ್ರೀಮತಿ ಯಾಮಿನಿ ಭಟ್ ಅವರು ಸ್ಥಾಪಿಸಿದ ಗಮಕ ಕಲಾ ವಾಚನ ಪ್ರಶಸ್ತಿಯನ್ನು ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಭಟ್, ಮಂಚಿ ಅವರಿಗೆ ಮತ್ತು ಭಾರತ ಸರಕಾರದ ‘ಶಿಲ್ಪಗುರು’ ಪ್ರಶಸ್ತಿ ಪುರಸ್ಕೃತ ಕಾರ್ಕಳದ ಶಿಲ್ಪಿ ಕೆ. ಶಾಮರಾಯ ಆಚಾರ್ಯ ಅವರ ಹೆಸರಿನ ದತ್ತಿನಿಧಿಯ ಶಿಲ್ಪಕಲಾ ಪ್ರಶಸ್ತಿಯನ್ನು ಶಿಲ್ಪಿ ಶ್ರೀ ಬಿ.ಎಸ್.ಭಾಸ್ಕರ ಆಚಾರ್ಯ ಕಾರ್ಕಳ ಅವರಿಗೆ ಘೋಷಿಸಲಾಗಿದೆ. ಈ ಪ್ರಶಸ್ತಿಗಳು ತಲಾ ಹತ್ತು ಸಾವಿರ ರೂಪಾಯಿಗಳ ನಗದು, ತಾಮ್ರ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದು ಇದೇ ಫೆಬ್ರವರಿ 26ರಂದು ಕಾಂತಾವರದಲ್ಲಿ ನಡೆಯುವ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನದ ಜೊತೆ ಮೂರು ದತ್ತಿ ಪ್ರಶಸ್ತಿಗಳ ಪ್ರದಾನವು ನಡೆಸಲಾಗುವುದೆಂದು ಕಾಂತಾವರ ಕನ್ನಡ ಸಂಘದ ಪ್ರಕಟಣೆಯು ತಿಳಿಸಿದೆ.
(ನೂತನ) ಗಮಕಕಲಾ ಪ್ರವಚನ ಪ್ರಶಸಿ – ಡಾ. ರಾಘವೇಂದ್ರ ರಾವ್, ಪಡುಬಿದ್ರಿ
ಉಡುಪಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರೂ ಗಮಕಿಗಳೂ ಆಗಿರುವ ಶ್ರೀ ಸತೀಶ್ ಕುಮಾರ್ ಕೆಮ್ಮಣ್ಣು ಅವರು ಸ್ಥಾಪಿಸಿದ ದತ್ತಿನಿಧಿಯ ಗಮಕ ಕಲಾ ಪ್ರವಚನ ಪ್ರಶಸ್ತಿಯನ್ನು ಪಡೆದಿರುವ ಡಾ. ರಾಘವೇಂದ್ರ ರಾವ್, ಪಡುಬಿದ್ರಿ (1975) ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿರಸಿ ಸಮೀಪದ ಬಿಸಿಲಕೊಪ್ಪ ಮೂಲದವರು. ಇವರು 1991ರಲ್ಲಿ ವಿದ್ಯಾಭ್ಯಾಸಕ್ಕೆಂದು ಉಡುಪಿಗೆ ಬಂದು ನೆಲೆಸಿದರು. ಅನಂತರ ಅದಮಾರಿನ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಕೆಲವು ಕಾಲ ಅಧ್ಯಾಪಕರಾಗಿದ್ದು, ಪ್ರಸ್ತುತ ಪಡುಬಿದ್ರೆಯ ಗಣಪತಿ ಪ್ರೌಢಶಾಲೆಯಲ್ಲಿ ಸಂಸ್ಕೃತ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ, ಸಂಸ್ಕೃತ, ಹಿಂದಿ ಮತ್ತು ಜೋತಿಷ್ಯಶಾಸ್ತç ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು ‘ದಶಾಫಲವಿಮರ್ಶಃ’ ಎಂಬ ಜ್ಯೋತಿಷ್ಯಶಾಸ್ತçಕ್ಕೆ ಸಂಬಂಧಿಸಿದ ಸಂಶೋಧನೆಯ ಮಹಾಪ್ರಬಂಧಕ್ಕೆ ತಿರುಪತಿ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ. ಇವರು ಉಪನ್ಯಾಸ, ಗಮಕ-ವ್ಯಾಖ್ಯಾನ, ಧಾರಾವಾಹಿಗಳಿಗೆ ಚಿತ್ರಕಥೆ, ರಂಗ ಚಟುವಟಿಕೆ, ಕಾವ್ಯ -ನಾಟಕ-ಅನುವಾದ- ಲೇಖನ ರಚನೆ ಮೊದಲಾದ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿರುತ್ತಾರೆ. ‘ಶರಧಿತಟದ ಭಾರ್ಗವ ರಾಮ’, ‘ಪಂಚಾವತಾರ’ ಮೊದಲಾದ ನಾಟಕಗಳನ್ನೂ ‘ಓ ರಾಧೆ ಕರೆ ಕೇಳದೆ?’, ಗೋಕುಲದ ಓಕುಳಿಯಾಟ’, ‘ಮಂಜಿನ ಪರದೆಯ ಸರಿಸಿ’ ಮೊದಲಾದ ಕವನ ಸಂಕಲನಗಳನ್ನೂ ರಚಿಸಿರುತ್ತಾರೆ. ಮಹಾಕವಿ ಕಾಳಿದಾಸನ ಮಾಲವಿಕಾಗ್ನಿಮಿತ್ರಮ್’ ನಾಟಕವನ್ನು ‘ಹೃದಯದರಸಿ ಮಾಲವಿಕೆ’ ಎಂಬ ಹೆಸರಿನಿಂದ ಕನ್ನಡಕ್ಕೆ ಅನುವಾದಿಸಿರುತ್ತಾರೆ. ಗಮಕ ಕಲೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಸ್ಥಾಪನೆಯಾದ ಮೊತ್ತ ಮೊದಲ ಈ ಪ್ರಶಸ್ತಿಯು ಹತ್ತು ಸಾವಿರ ರೂಪಾಯಿಗಳ ನಗದು, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ.
(ನೂತನ) ಗಮಕಕಲಾ ವಾಚನ ಪ್ರಶಸ್ತಿ – ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಭಟ್, ಮಂಚಿ, ಬಂಟ್ವಾಳ
ಅವಿಭಜಿತ ದ.ಕ ಜಿಲ್ಲೆಯಲ್ಲಿ ಗಮಕ ವಾಚನಕ್ಕೆ ಪ್ರಸಿದ್ಧಿ ಮತ್ತು ಜನಮನ್ನಣೆಯನ್ನು ಪಡೆದಿರುವ ಉಡುಪಿಯ ಶ್ರೀಮತಿ ಯಾಮಿನಿ ಭಟ್ ಅವರು ಸ್ಥಾಪಿಸಿದ ದತ್ತಿನಿಧಿಯ ಗಮಕ ಕಲಾ ವಾಚನ ಪ್ರಶಸ್ತಿಯನ್ನು ಪಡೆದಿರುವ ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಭಟ್ ಮಂಚಿ (1981) ಅವರು. ಬಂಟ್ವಾಳ ತಾಲೂಕು ಮಂಚಿ ಗ್ರಾಮದವರು. ಬೆಂಗಳೂರಿನ ಗಮಕ ಗುರುಗಳಾದ ಶ್ರೀಮತಿ ಗಾಯತ್ರಿ ಅಶೋಕ್ ಮತ್ತು ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಅವರಿಂದ ಗಮಕ ತರಬೇತಿ ಪಡೆದುಕೊಂಡು ಗಮಕ ಪಾರೀಣ, ದೇವರನಾಮ ಪ್ರೌಢ ಮತ್ತು ಹಾಡುಗಾರಿಕೆಯಲ್ಲಿ, ಕರ್ನಾಟಕ ಶಾಸ್ತಿçÃಯ ಸಂಗೀತ ಸೀನಿಯರ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಗಮಕ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. 2004 -05ರ ಸಾಲಿನ ರಾಜ್ಯ ಸರಕಾರದ ಗಮಕ ಶಿಷ್ಯವೇತನಕ್ಕೂ ಅವರು ಭಾಜನರಾಗಿದ್ದಾರೆ. 2013ರ ದ.ಕ ಜಿಲ್ಲಾ ಗಮಕ ಸಮ್ಮೇಳನ, ಆಳ್ವಾಸ್ ವಿಶ್ವನುಡಿಸಿರಿವಿರಾಸತ್, ಮೈಸೂರಿನ ‘ಪರಂಪರೆ’ ಸಂಸ್ಥೆಯ ಕುಮಾರವ್ಯಾಸ ಭಾರತ ಸರಣಿ ಕಾರ್ಯಕ್ರಮಗಳಲ್ಲಿ ಮಾತ್ರವಲ್ಲದೆ ಆಕಾಶವಾಣಿ ಮತ್ತು ದೂರದರ್ಶನಗಳ ಕಾರ್ಯಕ್ರಮಗಳಲ್ಲಿಯೂ ಅವರು ಆಗಾಗ ಗಮಕ ವಾಚನ ನೆರವೇರಿಸುತ್ತಿದ್ದಾರೆ. ಮಂಗಳೂರು ಆಕಾಶವಾಣಿಯ ಗಮಕ ಕಲಾವಿದೆಯಾಗಿರುವ ಅವರಿಗೆ 2003ನೇ ಸಾಲಿನ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯು ನೀಡುವ ‘ಯುವ ಪ್ರತಿಭೆ ಪ್ರಶಸ್ತಿ’ಯೂ ಲಭಿಸಿದ್ದು ಪ್ರಸಕ್ತ ಸಂಗೀತ ಹಾಗೂ ಗಮಕ ತರಗತಿಗಳನ್ನು ನಡೆಸುತ್ತಾ ಯುವ ಪ್ರತಿಭೆಗಳನ್ನು ರೂಪಿಸುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಈ ವರ್ಷ ಸ್ಥಾಪನೆಯಾದ ಮೊತ್ತ ಮೊದಲ ಈ ಪ್ರಶಸ್ತಿಯು ಹತ್ತು ಸಾವಿರ ರೂಪಾಯಿಗಳ ನಗದು, ತಾಮ್ರ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ.
(ನೂತನ) ಶಿಲ್ಪಕಲಾ ಪ್ರಶಸ್ತಿ – ಶ್ರೀ ಬಿ. ಎಸ್. ಭಾಸ್ಕರ ಆಚಾರ್ಯ, ಕಾರ್ಕಳ
ಭಾರತ ಸರಕಾರ ನೀಡುವ ‘ಶಿಲ್ಪಗುರು’ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಶ್ರೀ ಕೆ. ಶಾಮರಾಯ ಆಚಾರ್ಯ, ಕಾರ್ಕಳ ಅವರ ದತ್ತಿನಿಧಿಯಿಂದ ನೀಡುವ ಶಿಲ್ಪಕಲಾ ಪ್ರಶಸ್ತಿಗೆ ಭಾಜನರಾದ ಶ್ರೀ ಬಿ.ಎಸ್. ಭಾಸ್ಕರ ಆಚಾರ್ಯ(1978) ಅವರು ಕಾರ್ಕಳದಲ್ಲಿ ಪ್ರಸ್ತುತ ‘ಕಾಳಿಕಾ ಶಿಲ್ಪಕಲಾ ಕೇಂದ್ರ’ದ ಹೆಸರಿನಿಂದ ವೃತ್ತಿ ನಿರ್ವಹಿಸುತ್ತಾ ವಾಸಿಸಿದ್ದಾರೆ. ಇವರು ಬ್ರಹ್ಮಾವರ ಮೂಲದವರು. ಬಚ್ಚು ಆಚಾರ್ಯ ಮತ್ತು ಶ್ರೀಮತಿ ಕಲ್ಯಾಣಿ ದಂಪತಿಯ ಸುಪುತ್ರರು. ಬಾಲ್ಯದಿಂದಲೇ ಚಿತ್ರಕಲೆ, ಸಂಗೀತ, ಯಕ್ಷಗಾನ ಹಾಗೂ ಶಿಲ್ಪಕಲೆಗಳ ಆಸಕ್ತಿಗಳ ಜೊತೆಗೆ, ಮನೆ ನಿರ್ಮಾಣ ಹಾಗೂ ಮರದ ಕೆತ್ತನೆ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದರು. ವಿದ್ಯಾಭ್ಯಾಸದಲ್ಲಿ ಕಲಾಪದವಿ(ಬಿ.ಎ) ಪಡೆದು ಮುಂದೆ ಕೆನರಾ ಬ್ಯಾಂಕ್ ಪ್ರವರ್ತಿತ ಕಾರ್ಕಳದ ಸಿ.ಇ. ಕಾಮತ್ ಶಿಲ್ಪಕಲಾ ಶಾಲೆಯಲ್ಲಿ ತರಬೇತಿ ಪಡೆದು ನಂತರ ಕರ್ನಾಟಕ ಶಿಲ್ಪ ಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದ ಶಿಲ್ಪಗುರು ಶ್ರೀ ಕೆ.ಶಾಮರಾಯ ಆಚಾರ್ಯ ಅವರ ಬಳಿ ಶಿಷ್ಯತ್ವ ಪಡೆದು ‘ತಂತ್ರ ಸಮುಚ್ಛಯ’, ‘ಕಾಶ್ಯಪ ಶಿಲ್ಪಶಾಸ್ತç’ ಹಾಗೂ ‘ಮಾನಸಾರ’ ಗ್ರಂಥಾನುಸಾರ ತರಬೇತಿ ಪಡೆದರು. ೨೦೦೭ರಲ್ಲಿ ಕಾರ್ಕಳದಲ್ಲಿ ತಂಜಾವೂರು ದಕ್ಷಿಣ ಪ್ರಾಂತ್ಯ ಮತ್ತು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ವೀರಾಂಜನೆಯ ಶಿಲ್ಪ ಕೃತಿಗೆ ಮೊತ್ತ ಮೊದಲ ಸನ್ಮಾನ. 2008ರಲ್ಲಿ ಡಾ. ಜಿ.ಜ್ಞಾನಾನಂದ ಮತ್ತು ಮಹಾವಿದ್ವಾಂಸ ತಾಡಿಚಲ್ಮ ವೀರರಾಘವ ಶರ್ಮ ಅವರ ನೇತೃತ್ವದಲ್ಲಿ ಶಿಲ್ಪ ಪರಂಪರೆಯ ಮೂಲ ವೈದಿಕ ಖಲಪಂಜರ ನಿರ್ಮಾಣವೇ ಆದಿಯಾಗಿ ಇಂದಿರಾಗಾಂಧಿ ರಾಷ್ಟ್ರೀಯ ಪ್ರತಿಷ್ಠಾನದವರು ಶಾಸ್ತ್ರೋಕ್ತವಾಗಿ ನಡೆಸಿದ ಶಿಬಿರದಲ್ಲಿ ನಿರ್ಮಿಸಿದ ಗಣಪತಿ ವಿಗ್ರಹಕ್ಕೆ ವಿಶೇಷ ಪುರಸ್ಕಾರ ಲಭಿಸಿತು. 2011ರಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ‘ಪ್ರದರ್ಶನ ಪ್ರಶಸ್ತಿ’, 2013ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯವರಿಂದ ಮೂರು ವರ್ಷಗಳ ಬಿ.ಎಫ್.ಎ ಪದವಿ ಪಡೆದರು. 2015ರಲ್ಲಿ ಪ್ರತಿಷ್ಠಿತ ‘ಪಾಲ್ಕೆ ಬಾಬುರಾಯ ಆಚಾರ್ಯ’ ಪ್ರಶಸ್ತಿ ಲಭಿಸಿದರೆ, 2019ರಲ್ಲಿ ಕೊಕ್ಕರ್ಣೆ ಕಜ್ಕೆಯಲ್ಲಿ ಪರಮಪೂಜ್ಯ ಗುರುಗಳಾದ ಶ್ರೀ ಶ್ರೀ ಶಿವಸುಜ್ಞಾನ ಮೂರ್ತಿ ಸ್ವಾಮೀಜಿಯವರಿಂದ ಸನ್ಮಾನ, 2021ರಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯವರು ಕುಂದಾಪುರ, ಹಟ್ಟಿಯಂಗಡಿಯಲ್ಲಿ ನಡೆಸಿದ ಶಿಲ್ಪಕಲಾ ಶಿಬಿರಕ್ಕೆ ಇವರನ್ನು ನಿರ್ದೇಶಕರಾಗಿ ನೇಮಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು. ಈಚೆಗೆ (2023) ಅವಿಭಜಿತ ದ.ಕ ಜಿಲ್ಲೆಯ ವಿಶ್ವಕರ್ಮ ಒಕ್ಕೂಟವು ಜಕಣಾಚಾರ್ಯ ಸಂಸ್ಕರಣಾ ದಿನದಂದು “ಜಕಣಾಚಾರ್ಯ ಪ್ರಶಸ್ತಿ” ನೀಡಿ ಗೌರವಿಸಿತು. ನಾಡಿಗೆ ಮೊದಲೆನ್ನುವಂತೆ ಖಾಸಗಿ ಸಂಸ್ಥೆಯಿಂದ ಈ ವರುಷ ಸ್ಥಾಪಿತವಾದ ಈ ಪ್ರಶಸ್ತಿಯು 10 ಸಾವಿರ ನಗದು, ತಾಮ್ರ ಪತ್ರ ಸನ್ಮಾನವನ್ನು ಒಳಗೊಂಡಿದೆ.
(ವಾರ್ಷಿಕ) ಮುದ್ದಣ ಕಾವ್ಯ ಪ್ರಶಸ್ತಿ – ಡಾ. ಚಿದಾನಂದ ಸಾಲಿ, ರಾಯಚೂರು
ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು (1988) ಸ್ಥಾಪಿಸಿದ ವರಕವಿ ನಂದಳಿಕೆಯ ಮುದ್ದಣ ಹೆಸರಿನ ಮುದ್ದಣ ಕಾವ್ಯ ಪ್ರಶಸ್ತಿಯನ್ನು ತಮ್ಮ ‘ಕನ್ನಡಿಯಲ್ಲಿ ಮನುಷ್ಯ ಮಾತ್ರ’ ಎಂಬ ಹಸ್ತಪ್ರತಿಗೆ (2022) ಪಡೆದಿರುವ ಡಾ. ಚಿದಾನಂದ ಸಾಲಿ (1977) ಅವರು ರಾಯಚೂರು ಮೂಲದವರು. ಕವಿಯೆಂದೇ ಪ್ರಸಿದ್ಧರಾಗಿರುವ ಅವರು ಟಿಸಿಎಚ್, ಎಂಎಸ್ಸಿ (ಗಣಿತ), ಎಂ.ಎ (ಇಂಗ್ಲೀಷ್) ಎಂ.ಎ (ಕನ್ನಡ), ಎಂ.ಇಡಿ, ಪಿಜಿಡಿಎಚ್‌ಇ, ಪಿಜಿಡಿಎಚ್‌ಆರ್‌ಎಂ, ಎಂಫಿಲ್ (ಶಿಕ್ಷಣಶಾಸ್ತ್ರ) ಮತ್ತು ಪಿಎಚ್‌ಡಿ (ಪತ್ರಿಕೋದ್ಯಮ) ಪದವೀಧರರಾಗಿದ್ದು ಗಜಲ್, ಕಾವ್ಯ, ಕಥೆ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಸಂಪಾದನೆ ಮತ್ತು ಅನುವಾದ ಪ್ರಕಾರಗಳಲ್ಲಿ ಈ ತನಕ ಮೂವತ್ತು ಕೃತಿಗಳನ್ನು ಪ್ರಕಟಿಸಿದ್ದಾರೆ.
ಎರಡು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ, ಎರಡು ಸಲ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ವಿಜಯ ಪ್ರಶಸ್ತಿ, ಕಣವಿ ಕಾವ್ಯ ಪ್ರಶಸ್ತಿ, ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ, ಬಿಎಂಟಿಸಿ – ಅರಳು ಪ್ರಶಸ್ತಿ, ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಸೋಮೇಶ್ವರ ಕಥಾಪ್ರಶಸ್ತಿ, ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ, ಪ್ರೊ. ತೇಜಸ್ವಿ ಕಟ್ಟೀಮನಿ ಯುವ ಸಾಹಿತ್ಯ ಪ್ರಶಸ್ತಿ, ಚುಕ್ಕಿ ಪ್ರತಿಷ್ಠಾನದ ಪುಸ್ತಕ ಬಹುಮಾನ, ಡಾ. ನರಹಳ್ಳಿ ಪ್ರತಿಷ್ಠಾನದ ಪ್ರಶಸ್ತಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಪುಸ್ತಕ ಪ್ರಶಸ್ತಿ, ಬಿಎಂಶ್ರೀ ಪ್ರತಿಷ್ಠಾನದ ಪ್ರೊ.ಸೂ.ವೆಂ.ಆರಗ ವಿಮರ್ಶಾ ಪ್ರಶಸ್ತಿಗಳನ್ನು ಈಗಾಗಲೇ ಪಡೆದಿದ್ದಾರೆ. ಇದೀಗ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೆಲ ಕಾಲ ಪತ್ರಕರ್ತರಾಗಿದ್ದ ಸಾಲಿ ಪ್ರಸ್ತುತ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ರಾಯಚೂರಿನ ಮೌಲಾನಾ ಆಜಾದ್ ಮಾದರಿ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದಾರೆ. ಅವರಿಗೆ ನೀಡುವ ಪ್ರಶಸ್ತಿಯು ಹತ್ತು ಸಾವಿರ ರೂಪಾಯಿಗಳ ನಗದು, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ.
ಕನ್ನಡ ಸಂಘ, ಕಾಂತಾವರ (ರಿ)
ಕಾರ್ಕಳ ತಾಲೂಕಿನ ಪುಟ್ಟ ಗ್ರಾಮ ಕಾಂತಾವರವನ್ನು ಸಾಂಸ್ಕೃತಿಕವಾಗಿ ರೂಪುಗೊಳಿಸಿದ್ದು ಕಾಂತಾವರ ಕನ್ನಡ ಸಂಘ. ಈ ಗ್ರಾಮದ ಕೇಂದ್ರದಲ್ಲಿರುವ ಬೇಲಾಡಿ ಶಾಲೆಯಲ್ಲಿ – ಬೆಳುವಾಯಿ, ಬೋಳ, ಕಾಂತಾವರ, ಕೆದಿಂಜೆ, ನಂದಳಿಕೆ – ಎಂಬ ಐದು ಗ್ರಾಮಗಳ ಆಶ್ರಯದಲ್ಲಿ ಅದು (೧೯೭೬) ಹುಟ್ಟಿತು. ಹುಟ್ಟಿದ ವರುಷದ ಒಳಗೇ ನಾಡಿನ ಯಾವ ಜಿಲ್ಲೆಯಲ್ಲೂ ಆ ತನಕ ಆಗಿರದಿದ್ದ ಜಿಲ್ಲೆಯೊಂದರ ಆ್ಯಂಥಾಲಜಿಯನ್ನು (ದ.ಕ.ಕಾವ್ಯ ೧೯೦೧ – ೧೯೭೬) ಪ್ರಕಟಿಸಿತು. ಅದರ ಬೆನ್ನಿಗೇ ನಂದಳಿಕೆಯ ವರಕವಿ ಮುದ್ದಣನ ಹೆಸರಿನಲ್ಲಿ ಅಪ್ರಕಟಿತ ಕವನ ಸಂಗ್ರಹಗಳ ಸ್ಪರ್ಧೆ ಏರ್ಪಡಿಸಿ ಅವುಗಳಲ್ಲಿ ಶ್ರೇಷ್ಠವೆನಿಸಿದ್ದಕ್ಕೆ ‘ಮುದ್ದಣ ಕಾವ್ಯ ಪ್ರಶಸ್ತಿ’ ನೀಡುತ್ತಾ ಬಂತು.
ಸಂಘವು ಮೊದಮೊದಲು ಈ ಐದು ಗ್ರಾಮಗಳಲ್ಲಿನ ವಿವಿಧ ಶಾಲೆಗಳಲ್ಲಿ ಸಾಹಿತ್ಯ ಸಾಂಸ್ಕೃತಿಕ ಕರ‍್ಯಕ್ರಮಗಳನ್ನು ಎರಡು ತಿಂಗಳಿಗೊಂದರಂತೆ ನಡೆಸುತ್ತಾ ಬಂತು. ನಡುವೆ ಪುಸ್ತಕ ಪ್ರಕಟಣೆಗಳನ್ನು ಕೈಗೊಳ್ಳುತ್ತಿತ್ತು. ೨೦೦೧ರಲ್ಲಿ ಕಾಂತಾವರ ದೇವಸ್ಥಾನದ ಬಳಿ ಬೆಳ್ಳಿ ಹಬ್ಬವನ್ನು ಹಿರಿಯ ಸಾಹಿತಿ ವ್ಯಾಸರಾಯ ಬಲ್ಲಾಳರ ಅಧ್ಯಕ್ಷತೆಯಲ್ಲಿ ದಿನಪೂರ್ತಿಯ ಕಾರ್ಯಕ್ರಮವಾಗಿ ವಿಜೃಂಭಣೆಯಿಂದ ಆಚರಿಸಿತು. ಆಗ ಮತ್ತೆ ‘ದ.ಕ.ದ ಶತಮಾನದ ಕಾವ್ಯ’ ಎಂಬ ಬೃಹತ್ ಆ್ಯಂಥಾಲಜಿಯನ್ನು ಪ್ರಕಟಿಸಿತು. ಜೊತೆಗೆ ಕಾಂತಾವರ ಮೂಲದವರಾದ ಕರ್ನಾಟಕದ ಏಕೀಕರಣದ ನೇತಾರರಾಗಿದ್ದ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ‘ಕನ್ನಡ ಭವನ’ವನ್ನು ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ನಿರ್ಮಿಸುವ ಸಂಕಲ್ಪ ಮಾಡಿತು.
೨೦೦೩ರಲ್ಲಿ ಕಾಂತಾವರದ ರಥಬೀದಿಯಲ್ಲಿ ಸರಕಾರದ ಮತ್ತು ಸಾರ್ವಜನಿಕರ ಹಾಗೂ ಜಿನರಾಜ ಹೆಗ್ಡೆ ಕುಟುಂಬಿಕರ ನೆರವಿನಿಂದ ಭವ್ಯವಾದ ‘ಕನ್ನಡ ಭವನ’ವು ಎದ್ದು ನಿಂತ ಮೇಲೆ, ಕನ್ನಡ ಸಂಘವು ಬೇಲಾಡಿಯಲ್ಲಿ ಮತ್ತು ಇತರ ಗ್ರಾಮಗಳಲ್ಲಿ ನಡೆಸುತ್ತಿದ್ದ ತನ್ನೆಲ್ಲ ಚಟುವಟಿಕೆಗಳನ್ನು ಇಲ್ಲಿ ಕೇಂದ್ರೀಕರಿಸಿತು. ಪ್ರತಿತಿಂಗಳೂ ‘ನುಡಿನಮನ’ ಎಂಬ ತಿಂಗಳ ಉಪನ್ಯಾಸ ಕಾರ‍್ಯಕ್ರಮದ ಜೊತೆ ಆ ಉಪನ್ಯಾಸಗಳನ್ನು ‘ನುಡಿಹಾರ’ ಎಂದು ಸಂಪುಟೀಕರಣಗೊಳಿಸಲು ಮುಂದಾಯಿತು. ಕೊರೊನಾ ಕಾಲಾವಧಿ ಬಿಟ್ಟರೆ ಇಂಥ ಕರ‍್ಯಕ್ರಮಗಳು ನಿರಂತರ (ಸುಮಾರು ಹನ್ನೆರಡು ವರ್ಷ) ನಡೆದಿದ್ದು, ಈಗ ಅ.ಭಾ.ಸಾ. ಪರಿಷತ್ತಿನ ಜೊತೆಗೂಡಿ ಪ್ರತಿ ತಿಂಗಳ ಕಾರ್ಯಕ್ರಮವನ್ನು ‘ಅರಿವು ತಿಳಿವು’ ಎನ್ನುವ ಹೆಸರಲ್ಲಿ ಸಂಘವು ಕಾರ್ಕಳದಲ್ಲಿ ನಡೆಸುತ್ತಿದೆ.
೧೯೭೯ರಿಂದ ಮುದ್ದಣ ಕಾವ್ಯ ಪ್ರಶಸ್ತಿಯನ್ನು ನೀಡುತ್ತಾ ಬರುವ ಈ ಯೋಜನೆಯು ಗದಗದ ಕೆಮ್ಮಣ್ಣು ನಾರಾಯಣ ರಾಯರ ಔದರ‍್ಯದಿಂದ ೧೯೮೮ರ ತನಕ ನಡೆಯಿತು. ಆಯೋಜನೆಯು ಅವರ ನಿಧನದಿಂದ ನಿಂತೇ ಹೋಗುತ್ತದೆ ಎನ್ನುವ ಸನ್ನಿವೇಶದಲ್ಲಿ ಅದಕ್ಕೆ ಜೀವಂತಿಕೆಯನ್ನು ಕೊಟ್ಟ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಈಗಲೂ ಅದನ್ನು ಮುಂದುವರಿಸುತ್ತಿದ್ದಾರೆ. ೪೪ ವರುಷಗಳಲ್ಲಿ ೪೭ (೩ ವರುಷ ೨ ಕವಿಗಳಿಗೆ) ಕವಿಗಳು ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತರಾಗಿದ್ದು ಈ ಸಾಲಿನ ಪ್ರಶಸ್ತಿಯು ಕಲ್ಯಾಣ ಕರ್ನಾಟಕದ ಒಬ್ಬ ಹಿರಿಯ ಕವಿಗೆ (ಚಿದಾನಂದ ಸಾಲಿ) ಇದೇ ಮೊದಲೆನ್ನುವಂತೆ ಅವರಿಗೆ ನೀಡಲಾಗುತ್ತಿದೆ. ೨೦೦೮ರಿಂದ ಸಂಘದಲ್ಲಿ ಎಂಟು ಪ್ರತಿಷ್ಠಿತ ಪ್ರಶಸ್ತಿಗಳು ಸ್ಥಾಪನೆಯಾಗಿದ್ದು ಅವು .೧. ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿ ೨. ಪಾ.ವೆಂ. ಮಾಧ್ಯಮ ಪ್ರಶಸ್ತಿ ೩. ಶಿಕ್ಷಕ ಸೌರಭ ಪ್ರಶಸ್ತಿ ೪. ಪ್ರಾಧ್ಯಾಪಕ ಸಂಶೋಧಕ ಪ್ರಶಸ್ತಿ ೫. ಕಾಂತಾವರ
ಸಾಹಿತ್ಯ ಪ್ರಶಸ್ತಿ ೬. ಮಹೋಪಾಧ್ಯಾಯ ಪ್ರಶಸ್ತಿ ೭. ಕಾಂತಾವರ ಸಾಹಿತ್ಯ ವಿಮರ್ಶಾ ಪ್ರಶಸ್ತಿ ೮. ಮಂಜನಬೈಲ್ ರಂಗಸನ್ಮಾನ್ (ಪ್ರಶಸ್ತಿ) ಎಂಬ ಹೆಸರಿನಲ್ಲಿವೆ. ಈ ವರುಷ ಮತ್ತೆ ಮೂರು ಪ್ರಶಸ್ತಿಗಳು (೧. ಗಮಕ ಕಲಾ ಪ್ರವಚನ ಪ್ರಶಸ್ತಿ ೨. ಗಮಕ ಕಲಾ ವಾಚನ ಪ್ರಶಸ್ತಿ ೩. ಶಿಲ್ಪಕಲಾ ಪ್ರಶಸ್ತಿ)ಗಳು ಸ್ಥಾಪನೆಯಾಗಿದ್ದು ಈ ಎಲ್ಲಾ ಪ್ರಶಸ್ತಿಗಳು ರೂಪಾÊ ಹತ್ತು ಸಾವಿರದ ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ. ಸಂಘವು ೨೦೦೬ರಲ್ಲಿ ಅವಿಭಜಿತ ದ.ಕ ಮತ್ತು ಕಾಸರಗೋಡು ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರನ್ನು ಪರಿಚಯಿಸಲಿಕ್ಕಾಗಿಯೇ ಎಂಬಂತೆ ‘ನಾಡಿಗೆ ನಮಸ್ಕಾರ’ ಎಂಬ ಗ್ರಂಥಮಾಲೆಯನ್ನು ಸ್ಥಾಪಿಸಿತು. ಸಂಘದ ಸ್ಥಾಪಕಾಧ್ಯಕ್ಷರಾದ ಡಾ.ನಾ.ಮೊಗಸಾಲೆಯವರು ಇದರ ಗೌರವ ಸಂಪಾದಕರಾದರೆ, ಹಿರಿಯ ಸಾಹಿತಿ ಡಾ.ಬಿ.ಜನಾರ್ದನ ಭಟ್ ಅವರು ಸಂಪಾದಕರಾಗಿದ್ದಾರೆ. ಇದಕ್ಕಾಗಿ ಒಂದು ಆಯ್ಕೆ ಸಮಿತಿಯೂ ಇದ್ದು ಆ ಆಧಾರದಲ್ಲಿ ಕಳೆದ ಹದಿನಾರು ವರುಷಗಳಲ್ಲಿ ಸಂಘವು ೩೩೧ ಹೊತ್ತಗೆಗಳನ್ನು ಹೊರತಂದಿದೆ.