ಮುಡಿಪು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ ಅಂಬ್ಲಮೊಗರು ಸರಕಾರಿ ಪ್ರೌಢಶಾಲೆಯ ಸಹಯೋಗದೊಂದಿಗೆ ಏರ್ಪಡಿಸಿದ ‘ಕನ್ನಡ ನವೋದಯ ಸಂಭ್ರಮ’ ಕಾರ್ಯಕ್ರಮವು ದಿನಾಂಕ 05 ಆಗಸ್ಟ್ 2025ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಡಾ. ವಿಶ್ವನಾಥ ಎನ್. ನೇರಳೆಕಟ್ಟೆ ಮಾತನಾಡಿ “ಕುವೆಂಪು ಮತ್ತು ಬೇಂದ್ರೆ ಕನ್ನಡ ನವೋದಯ ಕಾಲದ ಎರಡು ಕಣ್ಣುಗಳಿದ್ದಂತೆ. ಕವಿಗಳಾಗಿ ಅವರಿಬ್ಬರೂ ಎಷ್ಟು ದೊಡ್ಡವರೋ ಬದುಕಿನಲ್ಲಿ ಕೂಡ ಪ್ರಕೃತಿ ಪ್ರೀತಿ, ನಾಡು ನುಡಿಯ ಅಭಿಮಾನ, ವಿಶ್ವ ಸೋದರತೆಯ ಭಾವನೆಯನ್ನು ಹೊಂದಿ ಗೌರವಾರ್ಹರಾಗಿದ್ದಾರೆ. ಕನ್ನಡ ನವೋದಯ ಕಾಲದ ಬರಹಗಾರರು ಬದುಕು ಬರಹದ ನಡುವೆ ಸಾಂಗತ್ಯ ಇರಬೇಕು ಎಂದು ಪ್ರತಿಪಾದಿಸಿದ್ದಾರೆ” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ. ಸಾ. ಪ. ಉಳ್ಳಾಲ ಘಟಕದ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆ ಮಾತನಾಡಿ “ಭಾವನೆಗಳಿಲ್ಲದೇ ಮನುಷ್ಯ ಬದುಕಲಾರ. ಪ್ರಕೃತಿಯ ಜೊತೆಗಿನ ಒಡನಾಟದಿಂದ ಮನುಷ್ಯ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಬಲ್ಲ. ನಮ್ಮ ಸುತ್ತಲಿನ ಮನುಷ್ಯರನ್ನು ಪ್ರೀತಿಸುತ್ತಾ ಗೌರವಿಸುತ್ತಾ ಸಹಭಾವದ ಬದುಕನ್ನು ಹೊಂದುವುದೇ ಬಾಳಿನ ಸಾರ್ಥಕತೆ. ಸಾಹಿತ್ಯದ ಓದು ನಮಗೆ ಈ ಪ್ರಜ್ಞೆಯನ್ನು ಮೂಡಿಸುತ್ತದೆ” ಎಂದರು.
ಸಮಾರಂಭದಲ್ಲಿ ಉಳ್ಳಾಲ ಕ. ಸಾ. ಪ. ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್, ಹಿರಿಯ ಕವಿ ಗುಣಾಜೆ ರಾಮಚಂದ್ರ ಭಟ್ ಮಾತನಾಡಿದರು. ಶಾಲಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಬಾನಾ ಅಜ್ಮಿ, ಶಿಕ್ಷಕಿಯರಾದ ಲೀಲಾವತಿ, ಜಯಶ್ರೀ ಎನ್. ಆರ್., ಪ್ರಮೀಳ, ಪ್ರತೀಕ್ಷ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಕನ್ನಡ ಭಾವಗೀತೆ, ಜಾನಪದ ಗೀತೆ ಹಾಗೂ ಕವನ ರಚನ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ನಾಗರಾಜ್ ಜೆ. ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕ ಅಂಬ್ಲಮೊಗರು ಶಾಲಾ ಶಿಕ್ಷಕ ಡಾ. ರಾಮಮೂರ್ತಿ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Previous Articleಬೆಂಗಳೂರಿನಲ್ಲಿ ‘ಪಲ್ಲವಿ ಕಾರ್ಯಾಗಾರ’ | ಆಗಸ್ಟ್ 10
Next Article ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉದ್ಘಾಟನೆಗೊಂಡ ಕಲಾ ಸಂಘ