ಧಾರವಾಡ : ಬೆಳಗಾವಿಯ ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ (ರಿ.) ಇದರ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ‘ಕನ್ನಡ ನುಡಿ ಸಂಭ್ರಮ -2024’ವನ್ನು ದಿನಾಂಕ 15 ನವೆಂಬರ್ 2024ರಂದು ಮುಂಜಾನೆ 9-30 ಗಂಟೆಗೆ ಧಾರವಾಡದ ರಂಗಾಯಣ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಪರಮಪೂಜ್ಯ ಶ್ರೀ ರಮೇಶ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಿರಿಯ ಸಾಹಿತಿಗಳಾದ ಡಾ. ಬೆ.ಗೋ. ರಮೇಶ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಹಾಗೂ ‘ಜ್ಞಾನಾಮೃತ ಜ್ಯೋತಿ’ ಕಿರು ಕೃತಿ ಬಿಡುಗಡೆ ಮಾಡಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹುಬ್ಬಳ್ಳಿಯ ಕುಮಾರಿ ಕೀರ್ತನಾ ಆರ್. ಪೂಜಾರಿ ಮತ್ತು ವಿಜಯಪುರ ಜಿಲ್ಲೆಯ ಕುಮಾರಿ ಪೃಥ್ವಿ ಎಮ್. ಹೆಗಡೆ ಇವರಿಂದ ಭರತನಾಟ್ಯ ಪ್ರದರ್ಶನ, ಉತ್ತರ ಕನ್ನಡ ಜಿಲ್ಲೆಯ ಕುಮಾರಿ ನಿಶಾ ಎಮ್. ನಾಯ್ಕ್ ಇವರಿಂದ ಯಕ್ಷಗೀತ ಗಾಯನ ನೃತ್ಯ ಪ್ರದರ್ಶನ, ಬ್ಯಾಕೂಡ ಸದಾಶಿವ ಎಚ್. ನಾಯಕವಾಡಿ ಇವರಿಂದ ಕನ್ನಡ ಕರೋಕೆ ಗಾಯನ ಮತ್ತು ಗೋಕಾಕದ ಸ್ವಾಮಿ ವಿವೇಕಾನಂದ ಯೋಗ ಕೇಂದ್ರದ ತಂಡದವರಿಂದ ಯೋಗ ನೃತ್ಯ ಪ್ರದರ್ಶನ ನಡೆಯಲಿದೆ.