ಏನಿದೆ ಏನಿಲ್ಲ..ಈ ಸುಂದರ ಸೃಷ್ಟಿಯಲಿ
ಅಡಗಿದೆ ಚೆಲುವೆಲ್ಲ ..ಆ ಕಾಣುವ ದೃಷ್ಟಿಯಲಿ |ಪ.|
ಭಾವಕೆ ತೋರಣವು..
ಬದುಕಿಗೆ ಹೂರಣವು
ಸಗ್ಗ- ನಿಸರ್ಗವಿದು.. ಚಂದದ ಚಾರಣವು ||ಅ.ಪ.||
ಚಾದರದಂತೆ ಹಾಸಿದ ಆಗಸ
ಚೆಲ್ಲುವ ಬಣ್ಣಗಳು
ನೇಸರ-ಚಂದಿರ ಹಗಲಲಿ-ಇರುಳಲಿ
ಅರಳುವ ಕಣ್ಣುಗಳು
ಅಲೆಯುವ ಮುಗಿಲುಗಳು…ತೇಲುವ ಮಳೆಬಿಲ್ಲು
ಮೋಡದ ಮುಗುಳುಗಳು..ಕಾಡುವ
ಪಿಸು ಸೊಲ್ಲು ||೧||
ಹಸಿರನು ಹೊದ್ದ ಶ್ಯಾಮಲೆ ಭೂರಮೆ
ಮನವನು ತಣಿಸುವಳು
ಜಲ-ಫಲ ತರುಲತೆ ಆಸರೆ-ನೆರಳಲಿ
ಉಸಿರನು ಉಣಿಸುವಳು
ಮೋಹಕ ಸಲಿಲಗಳು..ಚುಂಬಕ ಗಿರಿ ಕಡಲು
ಝರಿ-ತೊರೆ ಅಲೆಅಲೆಯು, ಖಗ-ಮಿಗ ನಲಿಯುಲಿಯು ||೨||
ತಿಂಗಳು ತುಂಬಿದ ಬಸುರಿಯ ತೆರದಿ
ಪ್ರೀತಿಸು ಇಳೆಯನ್ನು
ಮೇಯದೆ, ಸವೆಸದೆ ಒಡಲ ನೋಯಿಸದೆ
ಹೆಚ್ಚಿಸು ಕಳೆಯನ್ನು
ಬೆಳೆಸುವ ಬಸಿರನ್ನು…ಉಳಿಸುವ ಉಸಿರನ್ನು
ಶಾಶ್ವತ ಸವಿಯೋಣ..ಭೂ ದೇವಿಯ ಸಿರಿಯನ್ನು ||೩||
ರೂಪಕಲಾ ಆಳ್ವ
ಕನ್ನಡ, ತುಳು ಬರಹಗಾರ್ತಿ