ಬದಿಯಡ್ಕ : ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಕಾಸರಗೋಡು ಜಿಲ್ಲಾ ಘಟಕದ ನೇತೃತ್ವದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಸಹಯೋಗದಲ್ಲಿ ದಿನಾಂಕ 01-07-2024ರಂದು ಕನ್ನಡ ಪತ್ರಿಕಾ ದಿನಾಚರಣೆ ಜರಗಿತು.
ಈ ಕಾರ್ಯಕ್ರಮದಲ್ಲಿ ಹಿರಿಯ ಭಾಷಾ ತಜ್ಞ ನಿವೃತ್ತ ಪ್ರಾಂಶುಪಾಲ ಡಾ. ಬೇ.ಸೀ. ಗೋಪಾಲಕೃಷ್ಣ ಭಟ್ ಇವರು ಪತ್ರಿಕಾ ಸಂದೇಶವನ್ನು ನೀಡಿ “ವರದಿಗಾರರು ಆಳವಾದ ಭಾಷಾಜ್ಞಾನವನ್ನು ಹೊಂದಿರಬೇಕು. ಪತ್ರಿಕಾ ವರದಿಯಲ್ಲಿ ಜಾತಿ, ವರ್ಣ, ಪಕ್ಷ ಯಾವುದೂ ಗೊತ್ತಾಗಬಾರದು. ಯಾವುದೇ ಬಣದ ಪತ್ರಿಕೆಯೂ ಆಗಬಾರದು. ಪತ್ರಿಕೆಯನ್ನು ಓದಿದಾಗ ಕನ್ನಡದ ಸಮಗ್ರವಾದ ಚಿತ್ರಣ ಏನು, ಸಂಸ್ಕೃತಿ ಏನು, ಭಾವನೆ ಏನು ಎಂಬುದು ಅರ್ಥವಾಗುವಂತಿರಬೇಕು. ಪತ್ರಿಕೆಯ ಎಲ್ಲಾ ಪುಟಗಳಲ್ಲಿ ಒಂದನ್ನೂ ಬಿಡದೆ ಸಂಪೂರ್ಣವಾಗಿ ಓದಿ ಅರ್ಥಮಾಡಿ ವರದಿಗಳನ್ನು, ಕವನಗಳನ್ನು ಬರೆಯುವ ಅಭ್ಯಾಸವನ್ನು ರೂಢಿಸಿಕೊಂಡು ಅದನ್ನು ಪತ್ರಿಕೆಗಳಲ್ಲಿ ಪ್ರಕಟಿಸಬೇಕು” ಎಂದು ಶಾಲಾ ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ಕೆ.ಯು.ಡಬ್ಲ್ಯು.ಜೆ. ಕಾಸರಗೋಡು ಜಿಲ್ಲಾ ಅಧ್ಯಕ್ಷ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಬೆಂಗಳೂರು ಇದರ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ ಉದ್ಘಾಟಿಸಿ ಮಾತನಾಡುತ್ತಾ “ಪತ್ರಿಕೆಯು ಸಮಾಜದ ಕಣ್ಣು. ಅದನ್ನು ರಕ್ಷಿಸುವ ಮಹತ್ತರವಾದ ಜವಾಬ್ದಾರಿ ನಮ್ಮಮೇಲಿದೆ. ವಿದ್ಯಾರ್ಥಿಗಳು ಪತ್ರಿಕೆಯ ಓದಿನ ಕಡೆಗೂ ಗಮನವನ್ನು ನೀಡಬೇಕು” ಎಂದು ಅವರು ಕರೆಯಿತ್ತರು.
ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಅಧ್ಯಕ್ಷತೆ ವಹಿಸಿ ಮಾತನಾಡಿ ತಮ್ಮ ಪತ್ರಿಕಾ ಅನುಭವವನ್ನು ಹಂಚಿಕೊಂಡರು. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಪ್ರಬಂಧಕ ಜಯಪ್ರಕಾಶ್ ಪಜಿಲ, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ನಿವೃತ್ತ ಪ್ರಾಧ್ಯಾಪಕ ಶ್ರೀನಾಥ್ ಕೊಲ್ಲಂಗಾನ, ಹಿರಿಯ ಪತ್ರಕರ್ತ ಅಚ್ಚುತ ಚೇವಾರ್, ಪೈವಳಿಕೆ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಝಡ್.ಎ. ಕಯ್ಯಾರು, ಗಡಿನಾಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಚನಿಯಪ್ಪ ನಾಯ್ಕ್ ಶುಭಕೋರಿದರು. ಗಂಗಾಧರ ತೆಕ್ಕೆಮೂಲೆ ಸ್ವಾಗತಿಸಿ, ವಕೀಲ ಥೋಮಸ್ ಡಿಸೋಜ ಸೀತಾಂಗೋಳಿ ವಂದಿಸಿದರು. ಪುರುಷೋತ್ತಮ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ದಿನಪತ್ರಿಕೆಯನ್ನು ನೀಡಲಾಯಿತು.