ಕಾಸರಗೋಡು : ಬಿ ಶಿವಕುಮಾರ್ ಸಾರಥ್ಯದ ಸ್ವರ್ಣಭೂಮಿ ಫೌಂಡೇಶನ್ ಕೋಲಾರ, ಕನ್ನಡ ಭವನ ಕಾಸರಗೋಡು ಹಾಗೂ ಕನ್ನಡ ಭವನ ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಸವಿಸಂಭ್ರಮ ಕಾರ್ಯಕ್ರಮವು ದಿನಾಂಕ 18 ನವೆಂಬರ್ 2024 ರಂದು ಕನ್ನಡ ಭವನ ಸಭಾ ಸದನದಲ್ಲಿ ನಡೆಯಿತು.
ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ವಾಮನ್ ರಾವ್ ಬೇಕಲ್ ಇವರ ಅದ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಸ್ವರ್ಣಭೂಮಿ ಫೌಂಡೇಶನ್ ಇದರ ಅಧ್ಯಕ್ಷರಾದ ಬಿ. ಶಿವಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಕಾಸರಗೋಡಿನ ಕನ್ನಡಿಗರ ಕನ್ನಡ ಪ್ರೇಮ ಕರ್ನಾಟಕದ ಎಲ್ಲಾ ಕನ್ನಡಿಗರಿಗೆ ಹಾಗೂ ಕನ್ನಡ ಸಂಘ ಸಂಸ್ಥೆಗಳಿಗೆ ಮಾದರಿ. ಇಲ್ಲಿ ಎಂದಿಗೂ ಕನ್ನಡ ಶಾಶ್ವತವಾಗಿ ಉಳಿಯುತ್ತೆ, ಇಲ್ಲಿನ ಮನೆ ಮನೆಗಳನ್ನು ಕನ್ನಡ ಸಂಸ್ಥೆಗಳ ಕಾರ್ಯಕ್ರಮಗಳಿಗಾಗಿ ತೆರೆದಿಟ್ಟು ಕನ್ನಡ ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದೇ ಇದಕ್ಕೆ ಸಾಕ್ಷಿ. ಇದರಿಂದಲೇ ಕನ್ನಡ ಭವನ ನಮಗೆ ಮಾದರಿಯಾಗಿರುವುದು. ಇಲ್ಲಿನ ಕನ್ನಡಿಗರ ಆತಿಥ್ಯ, ಪ್ರೀತಿ, ಗೌರವ ನಮ್ಮನ್ನು ಕಾಸರಗೋಡು ಪ್ರದೇಶಕ್ಕೆ ಪದೇ ಪದೇ ಬರಲು ಪ್ರೇರಣೆ.” ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಇಂಚರ ಸಾಹಿತ್ಯ ಕುಟೀರ ಇದರ ಅಧ್ಯಕ್ಷರಾದ ಇಂಚರ ನಾರಾಯಣ ಸ್ವಾಮಿ, ಅಕ್ಷರ ವಿಜಯ ಮಸಾಪತ್ರಿಕೆಯ ಸಂಪಾದಕರಾದ ಪೋಸ್ಟ್ ನಾರಾಯಣ ಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಇದರ ಗೌರವ ಅಧ್ಯಕ್ಷರಾದ ಟಿ. ಸುಬ್ಬರಾಮಯ್ಯ, ಗಮಕ ಮಹಿಳಾ ಸಮಾಜ ಇದರ ಸಂಸ್ಥಾಪಕಿ ಶಾಂತಮ್ಮ, ಚುಟುಕು ಸಾಹಿತ್ಯ ಪರಿಷತ್ ಇದರ ಕಾರ್ಯದರ್ಶಿಯಾದ ಡಾ. ಶರಣಪ್ಪ ಗಬ್ಬೂರ್ ಹಾಗೂ ‘ಸ್ವರ್ಣಭೂಮಿ’ ಇದರ ಉಪಾಧ್ಯಕ್ಷರಾದ ತನವೀರ್ ಸಾಹಿಬ್ ಮುಂತಾದವರು ಕನ್ನಡ ಮನೆಮಾತು, ಸಾಹಿತ್ಯ ಹಾಗೂ ಕಲೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ನವೀನ್ ಎಂ., ಎನ್. ವೆಂಕಟರಾಜಮ್ಮ, ವರ್ಷ ಎನ್., ರಂಗಭೂಮಿ ಕಲಾವಿದೆ ಲಕ್ಷ್ಮೀ ದೇವಿ ಕೋಲಾರ, ನಂಜುಂಡಪ್ಪ ಬಿ. ವಿ. ಕೋಲಾರ ಹಾಗೂ ಹಿಬಾ ಸಯ್ಯದ್ ಉಪಸ್ಥಿತರಿದ್ದರು.
ಕನ್ನಡ ಭವನ ವತಿಯಿಂದ ಕೋಲಾರದಿಂದ ಬಂದ ಸಾಹಿತ್ಯ ಅತಿಥಿಗಳಿಗೆ ಪ್ರಮಾಣ ಪತ್ರ, ಪುಸ್ತಕ ಸ್ಮರಣಿಕೆ ಹಾಗೂ ಶಾಲು ಹೊದಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಕೋಲಾರದ ಬಿ. ಶಿವಕುಮಾರ್ ಇವರನ್ನು ‘ಕನ್ನಡ ಭವನ’ದ ಕರ್ನಾಟಕ ರಾಜ್ಯ ಸಂಚಾಲಕರನ್ನಾಗಿ ಆಯ್ಕೆ ಮಾಡಿ ಅಧಿಕಾರ ಪತ್ರ ಹಸ್ತಾಂತರಿಸಿತು.
ಕಾರ್ಯಕ್ರಮದಲ್ಲಿ ವಾಮನ್ ರಾವ್ ಬೇಕಲ್ ಸ್ವಾಗತಿಸಿ, ಸಂಚಾಲಕಿ ಸಂದ್ಯಾ ರಾಣಿ ಟೀಚರ್ ವಂದಿಸಿದರು. ಕೋಲಾರದ ಸಾಹಿತ್ಯ ತಂಡ ಕನ್ನಡ ಭವನ ವಾಚನಾಲಾಯ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.