ಸುರತ್ಕಲ್ : ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ದಿನಾಂಕ 01-11-2023ರಂದು ತಾಯಿ ಭುವನೇಶ್ವರಿಯ ಛಾಯಾ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು .
ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಗೋವಿಂದ ದಾಸ ಕಾಲೇಜಿ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿಯವರು “ಮೈಸೂರು ರಾಜ್ಯವಾಗಿದ್ದ ನಮ್ಮ ರಾಜ್ಯವು ಕರ್ನಾಟಕ ರಾಜ್ಯವಾಗಿ ರೂಪುಗೊಂಡು ಐದು ದಶಕಗಳಾಗುತ್ತಿದೆ. ಕನ್ನಡ ನಾಡಿನ ಭಾಷೆ, ಕಲೆ, ಸಂಸ್ಕೃತಿಯು ಶ್ರೀಮಂತಿಕೆ ಮತ್ತು ವೈವಿಧ್ಯತೆಯಿಂದ ಕೂಡಿದ್ದು ವಿದ್ಯಾರ್ಥಿಗಳು ಇವುಗಳ ಬಗ್ಗೆ ಹೆಚ್ಚು ಅಧ್ಯಯನ ನಡೆಸಬೇಕು” ಎಂದರು.
ವಿದ್ಯಾರ್ಥಿಗಳು ಕನ್ನಡದ ಹೆಸರಾಂತ ಕವಿಗಳಾದ ಹುಯಿಲಗೋಳ ನಾರಾಯಣ ರಾವ್ ಇವರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಕುವೆಂಪು ರಚಿಸಿದ ‘ಎಲ್ಲಾದರು ಇರು ಎಂತಾದರು ಇರು’, ದ.ರಾ ಬೇಂದ್ರೆ ಇವರ ‘ಒಂದೇ ಒಂದೇ ಕರ್ನಾಟಕ ಒಂದೇ’, ಸಿದ್ದಯ್ಯ ಪುರಾಣಿಕ ಇವರ ‘ಹೊತ್ತಿತೊ ಹೊತ್ತಿತ್ತು’ ಹಾಗೂ ಚೆನ್ನವೀರ ಕಣವಿಯವರ ಹೆಸರಾಯಿತು ‘ಕರ್ನಾಟಕ ಉಸಿರಾಗಲಿ ಕನ್ನಡ’ ಸಾಹಿತ್ಯಕ್ಕೆ ಧ್ವನಿಯಾಗುವ ಮೂಲಕ ನಾಡಿಗೆ ಗಾನ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸುವ ಕಾಲೇಜಿನ ಸಾಂಸ್ಕೃತಿಕ ತಂಡದ ಕಲಾವಿದರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯ ಪ್ರೊ. ರಮೇಶ್ ಭಟ್ ಎಸ್.ಜಿ., ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕರಾದ ಪ್ರೊ. ಹರೀಶ ಆಚಾರ್ಯ ಪಿ, ಪ್ರೊ. ನೀಲಪ್ಪ.ವಿ, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೈಭವಿ ಕಾರ್ಯಕ್ರಮ ನಿರೂಪಿಸಿದರು.