ಮಂಗಳೂರು : ಕಲ್ಕೂರ ಪ್ರತಿಷ್ಠಾನ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವು ದಿನಾಂಕ 01-11-2023 ರಂದು ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಸಂದೇಶ ನೀಡಿದ ಹಿರಿಯ ಮಹಿಳಾ ಸಾಹಿತಿ ಡಾ.ಇಂದಿರಾ ಹೆಗ್ಡೆ “ನಮ್ಮ ಅಡುವ ಭಾಷೆ ಹಾಗೂ ಅಕ್ಷರ ಭಾಷೆ ಎರಡನ್ನೂ ರಾಜ್ಯ ಭಾಷೆಯಾಗಿ ಬಳಸುವ ಮೂಲಕ ಕನ್ನಡದ ಬೆಳವಣಿಗೆಗೆ ಪಣತೊಡೋಣ ತನ್ಮೂಲಕ ಕನ್ನಡ ಭಾಷಾನುಷ್ಠಾನಕ್ಕೆ ನಮ್ಮ ಕೊಡುಗೆ ನೀಡೋಣ. ತಾನು ಸ್ವತಃ ಪ್ರತಿಯೊಂದು ಪತ್ರ ವ್ಯವಹಾರವನ್ನು ಕನ್ನಡ ಭಾಷೆಯ ಮೂಲಕವೇ ಮಾಡುತ್ತಿದ್ದು, ಎಲ್ಲರೂ ಇದೇ ತೆರನಾಗಿ ಭಾಷಾ ವಾತ್ಸಲ್ಯವನ್ನು ರೂಢಿಸಿಕೊಳ್ಳುವಂತಾಗಲಿ.” ಎಂದರು.
ಇದೇ ಸಂದರ್ಭ ಹಿರಿಯ ನಾಟ್ಯ ಗುರು ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅವರನ್ನು ‘ರಾಜ್ಯೋತ್ಸವ ಗೌರವ ಪ್ರದಾನ’ ಮಾಡುವ ಮೂಲಕ ಅಭಿನಂದಿಸಲಾಯಿತು. ಗೌರವಕ್ಕೆ ಉತ್ತರಿಸಿದ ಮೋಹನ್ ಕುಮಾರ್ “ಗುರು ಪರಂಪರೆಯನ್ನು ಗೌರವಿಸುವ ಸಂಗತಿ ಬದುಕಿನ ಶ್ರೇಷ್ಠತೆಯನ್ನು ಎತ್ತಿ ತೋರಿಸುವ ಮಹತ್ಕಾರ್ಯವಾಗಿದೆ” ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಮಾತನಾಡುತ್ತಾ “ನಮ್ಮ ಮಾತೃ ಭಾಷೆ ಯಾವುದೇ ಇರಲಿ, ನಾವು ಎಲ್ಲಿ ಮತ್ತು ಹೇಗೆ ಇದ್ದರೂ ಕನ್ನಡದ ಅನುಷ್ಠಾನಕ್ಕೆ ಪ್ರಥಮ ಆದ್ಯತೆ ಕೊಡಬೇಕು ತನ್ಮೂಲಕ ರಾಷ್ಟ್ರಾಭಿಮಾನವನ್ನು ಬೆಳೆಸಿಕೊಳ್ಳೋಣ. ಸಂವಿಧಾನದಡಿಯಲ್ಲಿ ನಮ್ಮೆಲ್ಲಾ ಭಾಷೆ, ಧರ್ಮಗಳು ಅನ್ಯೋನ್ಯವಾಗಿರಬೇಕೆಂಬುದೇ ರಾಜ್ಯೋತ್ಸವ ಆಚರಣೆಯ ಮಹತ್ವವಾಗಿದೆ” ಎಂದು ನುಡಿದರು.
ಅತಿಥಿಗಳಾಗಿ ಉಪಸ್ಥಿತರಿದ್ದ ಪ್ರೊ. ಎಂ.ಬಿ.ಪುರಾಣಿಕ್ ಮಾತನಾಡಿ “ಮಾತೃ ಭಾಷೆ ಹಾಗೂ ಸಂಸ್ಕೃತಿಯ ಉಳಿವು ನಮ್ಮಿಂದಲೇ ಆಗಬೇಕು” ಎಂದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡುತ್ತಾ “ಕನ್ನಡ ಶಾಲೆಗಳು ಉಳಿದರೆ ಮಾತ್ರವೇ ಕನ್ನಡದ ಉಳಿವು ಸಾಧ್ಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಕರಾವಳಿ ಲೇಖಕಿ ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಜ್ಯೋತಿ ಚೇಳ್ಯಾರ್, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಡಾ.ಅಣ್ಣಯ್ಯ ಕುಲಾಲ್, ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಸುಮಾ ಮಾನ್ವಿ, ದುಬೈ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿಯ ಗೌರವ ಅಧ್ಯಕ್ಷ ಅಬ್ದುಲ್ಲಾ ಮಾದುಮೂಲೆ, ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ, ಯುಗಪುರುಷ ಕಿನ್ನಿಗೋಳಿಯ ಭುವನಾಭಿರಾಮ ಉಡುಪ, ಜನಾರ್ದನ ಹಂದೆ, ಶ್ರೀಧರ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.
ಮುಂಬೈ, ದುಬೈ, ಎರ್ನಾಕುಲಂ, ಬೆಹರಿನ್ ಮುಂತಾದೆಡೆಗಳಲ್ಲಿನ ಬಾಲ ಪ್ರತಿಭೆ, ಯುವ ಪ್ರತಿಭೆ, ಕನ್ನಡ ಸಂಘಟನೆಗಳನ್ನು ಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಚೈತ್ರಾ ರಾವ್ ಅಹಮದಾಬಾದ್ ಅವರಿಂದ ಪ್ರಾರ್ಥನೆ, ಜಯಶ್ರೀ ಅರವಿಂದ್, ಝೇಂಕಾರ ಬಳಗ, ರಜನಿ ಶೆಣೈ ಹಾಗೂ ಶಾರದಾ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಕನ್ನಡ ಗೀತ ಗಾಯನ ನಡೆಸಿ ಕೊಟ್ಟರು, ಉಮೇಶ್ ಕೆ.ಆರ್, ಪೂರ್ಣಿಮಾ ರಾವ್ ಪೇಜಾವರ, ದಯಾನಂದ ಕಟೀಲ್ ಸಹಕರಿಸಿದರು. ಶ್ರೀಮತಿ ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಶಶಿಪ್ರಭಾ ಐತಾಳ್ ರಾಷ್ಟ್ರಗೀತೆ ಹಾಡಿ, ಪ್ರಕಾಶ್ ನಾಯಕ್ ವಂದನಾರ್ಪಣೆಗೈದರು.
Subscribe to Updates
Get the latest creative news from FooBar about art, design and business.
Previous Articleಕೊಂಚಾಡಿಯ ಶೀರಾಮ ಭಜನಾ ಮಂದಿರದಲ್ಲಿ ಯಕ್ಷಗಾನ ತರಗತಿಗಳ ಉದ್ಘಾಟನೆ