ಉಡುಪಿ : ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಗಾಂಧಿನಗರ ಬೈಕಾಡಿ ಬ್ರಹ್ಮಾವರ ಇವರ ಆಯೋಜನೆಯಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ, ನುಡಿಚಿತ್ತಾರ-2023 ಕಾರ್ಯಕ್ರಮವು ಎಸ್.ಎಮ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 05-11-2023ರಂದು ನೆರವೇರಿತು. ದೀಪ ಬೆಳಗಿಸಿ ಆಶಯಗೀತೆಯೊಂದಿಗೆ ಉದ್ಘಾಟನೆಗೊಂಡ ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಶ್ರೀ ಮುರಳೀಧರ ಉಪಾಧ್ಯಾಯ ಮಾಜಿ ಸದಸ್ಯರು ಸಾಹಿತ್ಯ ಅಕಾಡೆಮಿ ನವದೆಹಲಿ ಇವರು ಮಾತನಾಡಿ ಅನುಪಮಾ ನಿರಂಜನರ ದಿನಕ್ಕೊಂದು ಪುಸ್ತಕ, ಗೋವಿಂದ ಪೈ ಅವರ ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹೀಗೆ ಹಲವು ಕನ್ನಡ ಪುಸ್ತಕ, ಗೀತೆಗಳ ಕುರಿತು ಅರಿವು ಮೂಡಿಸಿದರು. ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇದರ ಉಪನಿರ್ದೇಶಕಿಯಾದ ಶ್ರೀಮತಿ ಪೂರ್ಣಿಮಾ ಅವರು ಮಾತನಾಡಿ “ಭಾಷಾಭಿಮಾನ ಇರುವವರು ಖಂಡಿತವಾಗಿ ದೇಶಾಭಿಮಾನ ಪಡೆಯಲಿಕ್ಕೆ ಸಾಧ್ಯ” ಎಂದು ಹೇಳಿದರು. ವಾರಂಬಳ್ಳಿ ಪಂಚಾಯತ್ ನ ಅಧ್ಯಕ್ಷರಾದ ನಿತ್ಯಾನಂದ ಬಿ.ಆರ್. ಹಾಗೂ ಅಜಪುರ ಕನ್ನಡ ಸಂಘದ ಅಧ್ಯಕ್ಷರಾದ ನಿತ್ಯಾನಂದ ಶೆಟ್ಟಿ ಇವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಗಾಗಿ ಕಥೆ ಹೇಳುವ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 34 ಸ್ಪರ್ಧಿಗಳು ಭಾಗವಹಿಸಿದರು. ತದನಂತರ ಸಾರ್ವಜನಿಕ ಛದ್ಮವೇಷ ಸ್ಪರ್ಧೆಯಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ಕಲೆ ವೀರಗಾಸೆ, ಯಕ್ಷಗಾನ, ಅಕ್ಕಮಹಾದೇವಿ ಹೀಗೆ ಹಲವು ಪ್ರಸ್ತುತಿಗಳು ಪ್ರದರ್ಶನಗೊಂಡವು. ನಂತರ ಕೆ.ಪಿ.ಎಸ್ ಪ್ರೌಢಶಾಲೆ ಕೊಕ್ಕರ್ಣೆಯ ವಿದ್ಯಾರ್ಥಿಗಳು ‘ವಿಜ್ಞಾನಯಾನ’ ಎಂಬ ನಾಟಕವನ್ನು ಪ್ರದರ್ಶಿಸಿದರು.
ಬಳಿಕ ಸಮಾರೋಪ ಸಮಾರಂಭದಲ್ಲಿ ಅರೆಹೊಳೆ ನಂದಗೋಕುಲದ ಸ್ಥಾಪಕರಾದ ಅರೆಹೊಳೆ ಸದಾಶಿವ ರಾವ್, ಹಾರಾಡಿ ಕೆನರಾ ಬ್ಯಾಂಕಿನ ಮ್ಯಾನೇಜರ್ ರವೀಂದ್ರ ನಾಯಕ್, ಶ್ರೀ ಕ್ಷೇತ್ರ ಕಳ್ಕಿಬೈಲ್ ಆಡಳಿತ ಮೊಕ್ತೇಸರರಾದ ಎಮ್.ಸಿ. ಚಂದ್ರಶೇಖರ್ ಸಾಸ್ತಾನ ಉಪಸ್ಥಿತರಿದ್ದು ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿತು. ಮಕ್ಕಳ ಕಥೆ ಹೇಳುವ ಸ್ಪರ್ಧೆಯಲ್ಲಿ ಪ್ರಥಮ ಪ್ರಕೃತಿ ಕುಂದಾಪುರ, ದ್ವಿತೀಯ ಸುಶಾಂತ್ ಮರತೂರು, ತೃತೀಯ ಸಾತ್ವಿಕ್ ವಿ. ಅಮೀನ್ ವಿಜೇತರಾದರೆ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ನಿತೀಶ್, ದ್ವಿತೀಯ ಅಶ್ವಿತಾ ಹಾಗೂ ತೃತೀಯ ಸಿಂಚನಾ ನಾಯ್ಕ್ ಇವರುಗಳು ಪ್ರಶಸ್ತಿ ಫಲಕಗಳನ್ನು ಪಡೆದುಕೊಂಡರು.