ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳ ಆಶ್ರಯದಲ್ಲಿ ಅನಂತಮೂರ್ತಿ ಪ್ರೌಢಶಾಲೆಯಲ್ಲಿ ದಿನಾಂಕ 01 ನವೆಂಬರ್ 2024ರಂದು ಜರಗಿದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನಿವೃತ್ತ ಆಂಗ್ಲ ಉಪನ್ಯಾಸಕಿ ಹಿರಿಯ ಸಾಹಿತಿ ಕ.ಸಾ.ಪ. ಹಿರಿಯ ಸದಸ್ಯೆ ಶ್ರೀಮತಿ ಉಮಾದೇವಿ ಉರಾಳ್, ಗೃಹ ರಕ್ಷಕ ದಳದಲ್ಲಿ ಉತ್ತಮ ಸೇವೆಗಾಗಿ ಕಳೆದ ವರ್ಷ ರಾಜ್ಯ ಪ್ರಶಸ್ತಿ ಪಡೆದ ಎಚ್.ಆರ್. ರಾಘವೇಂದ್ರ ಹಾಗೂ ಸಾರ್ವಜನಿಕ ಜೆ.ಸಿ. ಆಸ್ಪತ್ರೆಯ ಮರಣೋತ್ತರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ದಯಾನಂದ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ಇವರು, “ಶಿಕ್ಷಕರು ವಿದ್ಯಾರ್ಥಿಗಳಿಗೆ ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನ, ಆಸಕ್ತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವಂತವರು. ಶಿಕ್ಷಕರು ನಾಡು ನುಡಿಯ ಬಗ್ಗೆ ಆಸಕ್ತಿ ವಹಿಸಿ ವಿದ್ಯಾರ್ಥಿಗಳಲ್ಲೂ ಕನ್ನಡದ ಕುರಿತು ಅಭಿಮಾನ ಮೂಡಿಸಬೇಕು” ಎಂದು ಹೇಳಿದರು. ಮೂವರು ಸನ್ಮಾನಿತರ ಸೇವೆಯನ್ನು ಪ್ರಶಂಸಿಸಿ ಅವರನ್ನು ಅಭಿನಂದಿಸಿದರು.
ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥ ಗೌಡ ಅವರು ಮಾತನಾಡಿ, “ಶಿಕ್ಷಕರು ಸೇರಿದಂತೆ ಎಲ್ಲರೂ ನಾಡು ನುಡಿಯ ಕುರಿತು ಅಭಿಮಾನ ಬೆಳಸಿಕೊಳ್ಳಬೇಕು. ನಮ್ಮ ಮಾತೃ ಭಾಷೆಯ ಬಗ್ಗೆ ನಮಗೆ ಯಾವತ್ತೂ ಹೆಮ್ಮೆಯಿರಬೇಕು. ಶಿವಮೊಗ್ಗ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಗಳು ಕನ್ನಡದ ಕೆಲಸಗಳನ್ನು ಉತ್ತಮವಾಗಿ ಮಾಡುತ್ತಿವೆ. ಈ ಸಂಸ್ಥೆಗಳಿಗೆ ಸರ್ಕಾರದ ಮತ್ತು ಎಲ್ಲರ ಸಹಯೋಗ ಸಿಗಬೇಕು” ಎಂದು ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿ ತೀರ್ಥಹಳ್ಳಿ ಪಟ್ಟಣ ಪಂಚಾಯತಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಪಟ್ಟಣ ಪಂಚಾಯತಿ ವತಿಯಿಂದ ಕರ್ನಾಟಕದ ಕಲೆ – ಸಾಹಿತ್ಯ – ಸಂಸ್ಕೃತಿಯನ್ನು ಬಿಂಬಿಸುವ ಅದ್ದೂರಿಯಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಈ ನವೆಂಬರ್ ತಿಂಗಳಿನಲ್ಲಿ ಹಮ್ಮಿಕೊಳ್ಳಲಿದ್ದು, ಎಲ್ಲರ ಸಹಕಾರ ಕೋರಿದರು”.
ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ನಾಬಳ ಶಚ್ಚೀಂದ್ರ ಹೆಗ್ಡೆ ಅವರು ರಾಜ್ಯೋತ್ಸವ ಶುಭಾಶಯ ಕೋರಿದರು. ವೇದಿಕೆಯಲ್ಲಿ ತಹಶೀಲ್ದಾರ್ ರಂಜಿತ್ ಎಸ್., ಪ.ಪಂ. ಉಪಾಧ್ಯಕ್ಷೆ ಗೀತಾ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಯಡೂರು ಸುರೇಂದ್ರ, ಸರ್ಕಾರಿ ಜೂ. ಕಾಲೇಜು ಪ್ರಾಂಶುಪಾಲರಾದ ವೈ.ಎಂ. ಸುಧಾ, ಪ.ಪಂ. ಸದಸ್ಯ ರತ್ನಾಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶೈಲಾ ಎನ್. ಸ್ವಾಗತಿಸಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ ಸನ್ಮಾನಿತರ ಪರಿಚಯ ಮಾಡಿದರು. ಕೊನೆಯಲ್ಲಿ ತಾಲೂಕು ಆಡಳಿತದ ಪರವಾಗಿ ಸೂರತ್ ಕುಮಾರ್ ಮತ್ತು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರವೀಣ್ ವಂದಿಸಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕನ್ನಡ ಗೀತೆಗಳ ಕಾರ್ಯಕ್ರಮವನ್ನು ಸುಂದರವಾಗಿ ನಡೆಸಿಕೊಟ್ಟರು. ಇದಕ್ಕೆ ಮೊದಲು ಪಟ್ಟಣದ ಬೀದಿಗಳಲ್ಲಿ ವಿದ್ಯಾರ್ಥಿಗಳು ಮತ್ತು ನಾಗರಿಕರು, ಗಣ್ಯರಿಂದ ಕೂಡಿದ ರಾಜ್ಯೋತ್ಸವ ಮೆರವಣಿಗೆ ನಡೆಯಿತು. ಅನಂತಮೂರ್ತಿ ಪ್ರೌಢಶಾಲಾ ಮೈದಾನದಲ್ಲಿ ಕನ್ನಡದ ಧ್ವಜಾರೋಹಣವನ್ನು ನೆರವೇರಿಸಿ ತಹಶೀಲ್ದಾರ್ ರಂಜಿತ್ ಮಾತನಾಡಿದರು. ಪತ್ರಕರ್ತ ಡಾನ್ ರಾಮಣ್ಣ ಕಾರ್ಯಕ್ರಮ ನಿರೂಪಿಸಿದರು.