ಧಾರವಾಡ : ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು (ರಿ.) ಬೆಂಗಳೂರು ಇದರ ವತಿಯಿಂದ ಕನ್ನಡ ರಾಜ್ಯೋತ್ಸವದ ನುಡಿ ಸಂಭ್ರಮ -2024 ಪ್ರಥಮ ರಾಜ್ಯ ಮಟ್ಟದ ಕವಿಪೀಠ ಮಹಾಸಮ್ಮೇಳನ ಕಾರ್ಯಕ್ರಮವನ್ನು ದಿನಾಂಕ 24 ನವೆಂಬರ್ 2024ರಂದು ಬೆಳಿಗ್ಗೆ 10-30 ಗಂಟೆಗೆ ಧಾರವಾಡದ ಕರ್ನಾಟಕ ಕಾಲೇಜು ಆವರಣದ ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಖ್ಯಾತ ಸಾಹಿತಿಗಳು ಸುಪ್ರಸಿದ್ಧ ವಕೀಲರು ರಾಷ್ಟ್ರೀಯ ಅಂತ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ಮಲ್ಲಿಕಾರ್ಜುನ ಗ. ಭೃಂಗಿಮಠ ಇವರು ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಲಿರುವರು.
ಬೆಳಿಗ್ಗೆ 8-30 ಗಂಟೆಯಿಂದ ನಾಡ ಧ್ವಜಾರೋಹಣ ಮತ್ತು ಪರಿಷತ್ತಿನ ಧ್ವಜಾರೋಹಣ, ನಾಡದೇವಿ ಭುವನೇಶ್ವರಿ ಮಾತೆ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಪರಮ ಪೂಜ್ಯ ಶ್ರೀ ಮ.ನಿ.ಪ್ರ. ಕುಮಾರ ವಿರೂಪಾಕ್ಷೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಧಾರವಾಡದ ಕ್ಲಾಸಿಕ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶ್ರೀ ಲಕ್ಷ್ಮಣ ಎಲ್. ಉಪ್ಪಾರ ಇವರು ಈ ಸಮಾರಂಭದ ಉದ್ಘಾಟನೆ ಮಾಡಲಿದ್ದಾರೆ. ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ಎಚ್. ಚನ್ನೂರ ಇವರು ಸಮ್ಮೇಳನಾಧ್ಯಕ್ಷರ ಬದು-ಬರಹ ಕೈಪಿಡಿ ಬಿಡುಗಡೆ ಮಾಡಲಿದ್ದಾರೆ.
ಮಧ್ಯಾಹ್ನ 01-30 ಗಂಟೆಗೆ ನಡೆಯಲಿರುವ ಸಮ್ಮೇಳನಾಧ್ಯಕ್ಷರಿಗೆ ಪುಸ್ತಕ ತುಲಾಭಾರ ಕವಿಪೀಠ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾವ್ಯ, ರಾಗ, ನೃತ್ಯ ಮತ್ತು ಕುಂಚ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ರಾಷ್ಟ್ರ, ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುವುದು.