ಬೆಂಗಳೂರು: 2023ನೆಯ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ‘ಪಾಂಡಪ್ಪ ಲಕ್ಷ್ಮಣ ಹೂಗಾರ್ ದತ್ತಿ ಪ್ರಶಸ್ತಿ’ಗೆ ಹಿರಿಯ ಸಾಧಕರಾದ ಬೀದರ್ ಜಿಲ್ಲೆಯ ಅಕ್ಕ ಡಾ. ಅನ್ನಪೂರ್ಣ ತಾಯಿ ಮತ್ತು ಬೆಳಗಾವಿಯ ವಿನೋದ ಸುರೇಂದ್ರ ಅವರು ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು ದತ್ತಿಯ ನಿಯಮಗಳನ್ನು ಪರಿಶೀಲಿಸಿ ಈ ಆಯ್ಕೆಯನ್ನು ಮಾಡಿದೆ.
ಮೂಲತ: ಬೀದರಿನ ಹಾರೂರಗೇರಿಯವರಾದ ಡಾ. ಅನ್ನಪೂರ್ಣ ತಾಯಿಯವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಾನೂನು ವಿಷಯದಲ್ಲಿ ಪದವಿಯನ್ನು ಪಡೆದವರು. ಬಸವ ತತ್ವ ಪ್ರಸಾರಕ್ಕೆ ತಮ್ಮನ್ನು ಸಂಪೂರ್ಣ ತೊಡಗಿಸಿ ಕೊಂಡ ಇವರು ಸಮಾನತೆಯ ಸಮಾಜವನ್ನು ಕಟ್ಟಲು ಅಹರ್ನಿಶಿ ದುಡಿಯುತ್ತಿದ್ದಾರೆ. ವಚನಕ್ಕೊಂದು ಕತೆ, ಸಂಸಾರದಲ್ಲಿ ಸದ್ಗತಿ, ಗುರು ಕರುಣೆ, ಶ್ರಾವಣ ಸುಂದರ, ಬಸವ ಭಾವ ಮೊದಲಾದವು ಇವರ ಪ್ರಮುಖ ಕೃತಿಗಳು.
ಬೆಳಗಾವಿಯ ಭರತೇಶ ಎಜ್ಯುಕೇಷನ್ ಟ್ರಸ್ಟಿನ ಕಾರ್ಯದರ್ಶಿಗಳಾದ ವಿನೋದ ಸುರೇಂದ್ರ ಅವರು ಮೂಲತ: ಸಂಶೋಧನಾ ವಿಜ್ಞಾನಿಗಳು, ಶಿಕ್ಷಣ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು. ಡಾ. ಆ. ನೇ. ಉಪಾಧ್ಯೆ ಕನ್ನಡ ಅಧ್ಯಯನ ಕೇಂದ್ರವನ್ನು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಸ್ಥಾಪಿಸಿದ್ದಾರೆ. 2018ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಭಗವಾನ್ ಬಾಹುಬಲಿ ಮಸ್ತಕಾಭಿಷೇಕದಲ್ಲಿ ಮುಖ್ಯ ಪಾತ್ರವಹಿಸಿದ್ದ ವಿನೋದ ಸುರೇಂದ್ರ ಅವರು ಈ ಸಮಾವೇಶದ ರಾಷ್ಟ್ರೀಯ ಕಾರ್ಯದರ್ಶಿಗಳಾಗಿದ್ದು ಮಾತ್ರವಲ್ಲದೆ ಎಂಟು ವಿವಿಧ ಸಮ್ಮೇಳನಗಳನ್ನು ಏರ್ಪಡಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದರು.
ಪ್ರಶಸ್ತಿಯ ಆಯ್ಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಮತ್ತು ದತ್ತಿ ದಾನಿಗಳ ಪರವಾಗಿ ನಾಡೋಜ ಡಾ. ಮನು ಬಳಿಗಾರ್ ಹಾಜರಿದ್ದರು.
ಪ್ರಶಸ್ತಿಗೆ ಆಯ್ಕೆಯಾಗಿರುವ ಅಕ್ಕ ಡಾ.ಅನ್ನಪೂರ್ಣ ತಾಯಿ ಮತ್ತು ವಿನೋದ ಸುರೇಂದ್ರ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾಗಿ ಅಭಿನಂದಿಸುತ್ತದೆ.
ಎನ್.ಎಸ್.ಶ್ರೀಧರ ಮೂರ್ತಿ
ಸಂಚಾಲಕರು, ಪ್ರಕಟಣಾ ವಿಭಾಗ, ಕನ್ನಡ ಸಾಹಿತ್ಯ ಪರಿಷತ್ತು