ಮಡಿಕೇರಿ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪದವಿಪೂರ್ವ ಕಾಲೇಜು ಮೂರ್ನಾಡು ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ವಿಷಯ ಸಂಕಲನ ಪುಸ್ತಕ ಬಿಡುಗಡೆ ಕಾರ್ಯಕ್ರಮವು 16 ಸೆಪ್ಟೆಂಬರ್ 2024ರಂದು ಮೂರ್ನಾಡುವಿನಲ್ಲಿರುವ ಪದವಿ ಪೂರ್ವ ಕಾಲೇಜಿನ ಕಾವೇರಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೂರ್ನಾಡು ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಚೌರಿರ ಜಗತ್ ತಿಮ್ಮಯ್ಯ ಮಾತನಾಡಿ “ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿ ಮತ್ತು ಕೊಡಗು ಜಿಲ್ಲೆಯಲ್ಲಿ ಕನ್ನಡಪರ ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ನಡೆಸುತ್ತಾ ಬಂದಿದ್ದು, ಅದರ ಮೂರ್ನಾಡು ಹೋಬಳಿ ಘಟಕವನ್ನು ನಾನು ಉದ್ಘಾಟಿಸುತ್ತಿರುವುದು ಸಂತಸದ ವಿಚಾರ. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಅವರ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮ ಸಹಕಾರ ಇರುತ್ತದೆ.” ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ. ಪಿ. ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ “ಕನ್ನಡ ಸಾಹಿತ್ಯ ಪರಿಷತ್ತು ತನ್ನೆಲ್ಲ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜುಗಳಲ್ಲಿ ನಡೆಸಿಕೊಂಡು ಬರುತ್ತಿದ್ದು “ಕನ್ನಡ-ಕನ್ನಡಿಗ-ಕರ್ನಾಟಕ” ಈ ಮೂರು ವಿಚಾರಗಳ ಕುರಿತು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿವೆ. ಈ ಕಾರ್ಯಕ್ರಮದಲ್ಲಿ ಕನ್ನಡದ ವಿಚಾರಕ್ಕೆ ಸಂಬಂಧಪಟ್ಟಂತೆ ಹೋಬಳಿ ಘಟಕ ಉದ್ಘಾಟನೆಯಾಗುತ್ತಿದೆ. ಕನ್ನಡಿಗ ಎನ್ನುವ ವಿಚಾರಕ್ಕೆ ಸಂಬಂಧಪಟ್ಟಂತೆ ಕನ್ನಡಿಗರ ಕುರಿತು ಆಸ್ತೆ ವಹಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಂಚಾರ ನಿಯಮ ಹಾಗೂ ಕಾನೂನು ಕುರಿತು ಉಪನ್ಯಾಸ ನಡೆಯುತ್ತಿದೆ. ಕರ್ನಾಟಕಕ್ಕೆ ಸಂಬಂಧಪಟ್ಟಂತೆ ಸಾಹಿತ್ಯ ಬೆಳವಣಿಗೆ ಕುರಿತು ಪುಸ್ತಕ ಬಿಡುಗಡೆಯಾಗುತ್ತಿದೆ. ಆದ್ದರಿಂದ ಈ ವೇದಿಕೆಯಲ್ಲಿ ಸಾಹಿತ್ಯ ಪರಿಷತ್ತು ಹಾಕಿಕೊಂಡಿರುವ ಧ್ಯೇಯ ವಾಕ್ಯವಾದ “ಕನ್ನಡ-ಕನ್ನಡಿಗ-ಕರ್ನಾಟಕ” ಕಾರ್ಯಕರ್ತಗೊಂಡಂತಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಾಹಿತಿ ಶ್ರೀಮತಿ ಗೌರಮ್ಮ ಮಾದಮಯ್ಯ ರಚಿಸಿದ ವಿಷಯ ಸಂಕಲನ ಕೃತಿಯನ್ನು ಮೂರ್ನಾಡು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ. ಎಂ. ದೇವಕಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಈರಮಂಡ ಹರಿಣಿ ವಿಜಯ್ ಇವರಿಗೆ ನಿಕಟಪೂರ್ವ ಅಧ್ಯಕ್ಷರಾದ ಪಿ. ಪಿ. ಸುಕುಮಾರ್ ಕನ್ನಡ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ನೂತನ ಅಧ್ಯಕ್ಷ ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರಿಗೆ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀಮತಿ ಕಡ್ಲೇರ ತುಳಸಿ ಮೋಹನ್ ಪ್ರಮಾಣ ವಚನ ಬೋಧನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ. ಪಿ. ರಮೇಶ್ ನೂತನ ನಿರ್ದೇಶಕರಿಗೆ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳ ಪರಿಚಯ ಮತ್ತು ನೀತಿ ನಿಯಮ ತಿಳಿಯಪಡಿಸಿದರು. ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷ ಬಿ. ಜಿ. ಅನಂತಶಯನ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್. ಐ. ಮುನಿರ್ ಅಹಮದ್, ಕೋಶಾಧಿಕಾರಿ ಎಸ್. ಎಸ್. ಸಂಪತ್ ಕುಮಾರ್, ಸಿರಿಗಂಧ ವೇದಿಕೆಯ ಅಧ್ಯಕ್ಷ ಅಲ್ಲಾರಂಡ ವಿಠಲ ನೂತನ ಅಧ್ಯಕ್ಷ ಮತ್ತು ಆಡಳಿತ ಮಂಡಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಾಹಿತಿ ಶ್ರೀಮತಿ ಗೌರಮ್ಮ ಮಾದಮಯ್ಯ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ವಿ. ಟಿ. ಮಂಜುನಾಥ್, ಮಡಿಕೇರಿ ತಾಲೂಕು ಕ. ಸಾ. ಪ. ಗೌರವ ಕಾರ್ಯದರ್ಶಿಗಳಾದ ಬಾಳೆಯಡ ದಿವ್ಯ ಮಂದಪ್ಪ, ಮೂರ್ನಾಡು ಹೋಬಳಿ ಕ. ಸಾ. ಪ. ಇದರ ಗೌರವ ಕಾರ್ಯದರ್ಶಿಗಳಾದ ಕಟ್ಟೆಮನೆ ಮಹಾಲಕ್ಷ್ಮೀ, ಗೌರವ ಕೋಶಾಧಿಕಾರಿ ಅಮ್ಮಟಂಡ ವಿಂಧ್ಯ ದೇವಯ್ಯ,
ಸಂಘಟನಾ ಕಾರ್ಯದರ್ಶಿ ಜಶೀರ್ ಜಿ., ನಿರ್ದೇಶಕರುಗಳಾದ ಶ್ರೀಮತಿ ಕಾಮೆಯಂಡ ಕಲ್ಪನಾ ಸಾಮ್ರಾಟ್, ಕಿಗ್ಗಾಲು ಹರೀಶ್, ಕೂಡಂಡ ರವಿ, ಕೃಷ್ಣಪ್ಪ, ಪುಷ್ಪಾ ಮಣಿ, ಮುನೀರ್ ಎಂ. ಜೆ., ಸಾಹಿತಿಗಳಾದ ಕಿಗ್ಗಾಲು ಗಿರೀಶ್, ಶ್ರೀಮತಿ ಕೆ. ಜಿ. ರಮ್ಯಾ, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾದ ವಿ. ಎಂ. ಧನಂಜಯ, ಸೂರಜ್ ತಮ್ಮಯ್ಯ ಉಪಸ್ಥಿತರಿದ್ದರು.
ಶಿಕ್ಷಕರ ದಿನಾಚರಣೆ ಕುರಿತು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಿದ್ದು ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಪದವಿ ಕಾಲೇಜಿನ ಕನ್ನಡ ಉಪನ್ಯಾಸಕಿ ಕಾಮೆಯಂಡ ಕಲ್ಪನಾ ಸಾಮ್ರಾಟ್ ಸ್ವಾಗತಿಸಿ, ಮಡಿಕೇರಿ ತಾಲೂಕು ಕ. ಸಾ. ಪ. ಗೌರವ ಕಾರ್ಯದರ್ಶಿ ಬಾಳೆಯಡ ದಿವ್ಯ ಮಂದಪ್ಪ ವಂದಿಸಿದರು. ಮೊದಲಿಗೆ ನಾಡಗೀತೆಯನ್ನು ವಿದ್ಯಾರ್ಥಿಗಳಾದ ನಿತ್ಯ ಪಿ. ಡಿ. ತಂಡದವರು ನಡೆಸಿಕೊಟ್ಟರು.