ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ದ.ಕ. ಜಿಲ್ಲಾ 26ನೆಯ ‘ಕನ್ನಡ ಸಾಹಿತ್ಯ ಸಮ್ಮೇಳನ’ವು ದಿನಾಂಕ 23-03-2024 ಮತ್ತು 24-03-2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಸಭಾಂಗಣ, ಪುರಭವನದಲ್ಲಿ ನಡೆಯಲಿದೆ.
ದಿನಾಂಕ 23-03-2024ರಂದು ಬೆಳಿಗ್ಗೆ 8.45ಕ್ಕೆ ಕನ್ನಡ ಭುವನೇಶ್ವರಿ ಮೆರವಣಿಗೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸದಾಶಿವ ಉಳ್ಳಾಲ ಇವರು ಉದ್ಘಾಟಿಸಲಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಮಹಾ ಪೌರರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಇವರು ರಾಷ್ಟ್ರ ಧ್ವಜಾರೋಹಣ ಮಾಡಲಿದ್ದಾರೆ. ಗಂಟೆ 9.30ಕ್ಕೆ ಬೆಂಗಳೂರು ಕ.ಸಾ.ಪ.ದ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಇವರು ಸಮ್ಮೇಳನದ ಉದ್ಘಾಟನೆ ಮತ್ತು ಕರ್ನಾಟಕ ವಿಧಾನ ಸಭೆಯ ಅಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮಂಗಳೂರಿನ ಹಿರಿಯ ಸಾಹಿತಿ ಶ್ರೀಮತಿ ಭುವನೇಶ್ವರಿ ಹೆಗಡೆ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀಮತಿ ಹೇಮಾವತಿ ವೀ. ಹೆಗಡೆಯವರು ನಿಕಟ ಪೂರ್ವ ಸಮ್ಮೇಳನಾಧ್ಯಕ್ಷರಾಗಿರುವರು.
ಗಂಟೆ 11.30ಕ್ಕೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೆನರಾ ಪದವಿ ಪೂರ್ವ ವಿದ್ಯಾರ್ಥಿಗಳಿಂದ ‘ಭಾವ ಗಾನ’. ಗಂಟೆ 11.45ಕ್ಕೆ ನಡೆಯುವ ಗೋಷ್ಠಿ 1ರಲ್ಲಿ ‘ಕರಾವಳಿಯ ಸಾಹಿತ್ಯ ಪರಂಪರೆ ಅವಲೋಕನ’, ಮಧ್ಯಾಹ್ನ 1.15ಕ್ಕೆ ಕಾರ್ತಿಕ ರಾವ್ ಇಡ್ಯಾ ಮತ್ತು ಬಳಗದವರಿಂದ ‘ಭಕ್ತಿ ಭಾವ ಜನಪದ ಗೀತೆಗಳು’, 2-00 ಗಂಟೆಗೆ ಹಿರಿಯ ಕವಿ ಹಾಗೂ ಬಹುಭಾಷಾ ವಿದ್ವಾಂಸರಾದ ಶ್ರೀ ಮುದ್ದು ಮೂಡುಬೆಳ್ಳೆ ಇವರ ಅಧ್ಯಕ್ಷತೆಯಲ್ಲಿ ‘ಬಹು ಭಾಷಾ ಕವಿಗೋಷ್ಠಿ’, ಖ್ಯಾತ ಹನಿಗವಿಗಳಾದ ಶ್ರೀ ಹೆಚ್. ದುಂಡಿರಾಜ್ ಇವರ ಅಧ್ಯಕ್ಷತೆಯಲ್ಲಿ ಗೋಷ್ಠಿ 2 ‘ಹಾಸಭಾಸ – ನಗೆ ಸಮಯ’, ಸಂಜೆ 4-00 ಗಂಟೆಗೆ ವಿಶೇಷ ಉಪನ್ಯಾಸ -1ರಲ್ಲಿ ಮೂಡಬಿದಿರೆಯ ಹಿರಿಯ ವಿದ್ವಾಂಸರಾದ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಇವರಿಂದ ‘ಕರ್ನಾಟಕ ಸುವರ್ಣ ಸಂಭ್ರಮ – ದ.ಕ. ಜಿಲ್ಲೆಯಲ್ಲಿ ಕನ್ನಡದ ಅಸ್ಮಿತೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ, ಸುರತ್ಕಲ್ ಗೋವಿಂದ ದಾಸ ಕಾಲೇಜಿನ ‘ಕಲಾಬ್ಧಿ ಲಲಿತಾ ಕಲಾ ಅಧ್ಯಯನ ಕೇಂದ್ರ’ದ ವಿದ್ಯಾರ್ಥಿಗಳಿಂದ ಜಾನಪದ ಗಾಯನ ಹಾಗೂ ನೃತ್ಯ ವೈವಿಧ್ಯ, ಗಂಟೆ 5-00ಕ್ಕೆ ‘ಅಗಲಿದ ಗಣ್ಯರಿಗೆ ನುಡಿನಮನ’, ಸಂಜೆ ಗಂಟೆ 5.30ಕ್ಕೆ ಪ್ರೊ. ಅಮೃತ ಸೋಮೇಶ್ವರ ರಚನೆಯ ‘ಸಪ್ತಮಾತೃಕೆಯರು’ ನೃತ್ಯ ರೂಪಕವನ್ನು ಸೋಮೇಶ್ವರ ಕೊಲ್ಯದ ನಾಟ್ಯ ನಿಕೇತನದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಲಿದ್ದಾರೆ.
ದಿನಾಂಕ 24-03-2024ರಂದು ಬೆಳಿಗ್ಗೆ 8.30 ಗಂಟೆಗೆ ವಿದುಷಿ ಲಾವಣ್ಯ ಸುಧಾಕರ್ ಇವರಿಂದ ‘ಉದಯರಾಗ – ಕನ್ನಡ ವೈಭವ’, ಗಂಟೆ 8.30ಕ್ಕೆ ಶ್ರೀ ಸತೀಶ್ ಸುರುಳಿ ಇವರಿಂದ ‘ಸ್ಯಾಕ್ಸೋಫೋನ್ ವಾದನ’, ಗಂಟೆ 9.00ರಿಂದ ಹಿರಿಯ ಕವಿ ಮತ್ತು ವಿಮರ್ಶಕರಾದ ಶ್ರೀ ಉದಯ ಕುಮಾರ್ ಹಬ್ಬು ಇವರ ಅಧ್ಯಕ್ಷತೆಯಲ್ಲಿ ‘ಯುವ ಕವಿಗೋಷ್ಠಿ’, ಗಂಟೆ 10.00ಕ್ಕೆ ವಿಶೇಷ ಉಪನ್ಯಾಸ -2ರಲ್ಲಿ ‘ಪಂಜೆ ಮಂಗೇಶ ರಾವ್’ ಇವರ ಬಗ್ಗೆ ಪುತ್ತೂರಿನ ಅಂಕಣಕಾರರಾದ ಶ್ರೀಮತಿ ಕವಿತಾ ಅಡೂರು ಇವರಿಂದ ವಿಶೇಷ ಉಪನ್ಯಾಸ, ಗಂಟೆ 10.30ಕ್ಕೆ ಗೋಷ್ಠಿ 3ರಲ್ಲಿ ‘ಮಾಧ್ಯಮ – ದಿಕ್ಕುದೆಸೆ’, ಗಂಟೆ 11.30ಕ್ಕೆ ಕು. ಶ್ರದ್ಧಾ ಗುರುದಾಸ್ ಇವರಿಂದ ಹರಿಕಥೆ, ಗಂಟೆ 12.00ರಿಂದ ಗೋಷ್ಠಿ 4ರಲ್ಲಿ ‘ವೈದ್ಯಕೀಯ ಸಾಹಿತ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯ’, ಮಧ್ಯಾಹ್ನ 1.00 ಗಂಟೆಗೆ ಪ್ರತೀಕ್ಷಾ ಪ್ರಭು ಇವರ ‘ಟೀಂ ಉಪಾಸನಾ’ ಸದಸ್ಯರಿಂದ ಸಮೂಹ ನೃತ್ಯ, ಗಂಟೆ 1.30ಕ್ಕೆ ಶ್ರೀಮತಿ ಸ್ಮಿತಾ ಎಸ್. ಮತ್ತು ಶ್ರೀ ಶುಭಕರ ಕೆ. ಇವರಿಂದ ಕುಮಾರವ್ಯಾಸ ವಿರಚಿತ ಕರ್ಣಾಟ ಭಾರತ ಕಥಾಮಂಜರಿ ‘ಕರ್ಣ ಜನನ’ ಗಮಕ, ಮಧ್ಯಾಹ್ನ ಗಂಟೆ 2-00ರಿಂದ ವಿಶೇಷ ಉಪನ್ಯಾಸ -3ರಲ್ಲಿ ಚೊಕ್ಕಾಡಿ ಶ್ರೀ ರಾಮಕೃಷ್ಣ ಭಟ್ ಇವರಿಂದ ‘ಕರಾವಳಿಯ ಕನ್ನಡ ಮಾಧ್ಯಮ ಶಾಲೆಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ, ಗಂಟೆ 3-30ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಗಂಟೆ 3.15ಕ್ಕೆ ಕರ್ನಾಟಕ ಕಲಾಶ್ರೀ ಪ್ರೇಮನಾಥ್ ಮಾಸ್ಟರ್ ಇವರ ‘ಲಲಿತ ಕಲಾ ಸದನ’ದ ಶಿಷ್ಯೆಯರಿಂದ ನೃತ್ಯ ವೈವಿಧ್ಯ, ಗಂಟೆ 3.30ಕ್ಕೆ ದ.ಕ. ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಇವರ ಅಧ್ಯಕ್ಷತೆಯಲ್ಲಿ ‘ಬಹಿರಂಗ ಅಧಿವೇಶನ’, ಸಂಜೆ ಗಂಟೆ 4.00ಕ್ಕೆ ಸನ್ಮಾನ ಮತ್ತು ಸಮಾರೋಪ ಕಾರ್ಯಕ್ರಮ ನಡೆಯಲಿದೆ.