ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಯೋಜಿತವಾಗಿದ್ದ ಎಚ್.ವಿ. ನಂಜುಂಡಯ್ಯನವರ 165ನೆಯ ಮತ್ತು ಕೀರ್ತಿನಾಥ ಕುರ್ತುಕೋಟಿಯವರ 97ನೆಯ ಜನ್ಮದಿನೋತ್ಸವ ಕಾರ್ಯಕ್ರಮವು ದಿನಾಂಕ 13 ಅಕ್ಟೋಬರ್ 2025ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು “ಎಚ್.ವಿ. ನಂಜುಂಡಯ್ಯ ಮತ್ತು ಕೀರ್ತಿನಾಥ ಕುರ್ತುಕೋಟಿಯವರು ನೀಡಿದ ಅಪಾರ ಕೊಡುಗೆಯ ಮೂಲಕ ಕನ್ನಡ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬಹುಮುಖಿಯಾಗಿ ಬೆಳೆಯಲು ಕಾರಣವಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು ಮತ್ತು ಮೊದಲ ಮೂರು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರೂ ಆಗಿದ್ದ ಎಚ್.ವಿ. ನಂಜುಂಡಯ್ಯನವರು ಮೈಸೂರು ವಿಶ್ವವಿದ್ಯಾಲಯನ್ನು ಕಟ್ಟಿ ಬೆಳೆಸಿದವರು. ನಂಜನಗೂಡಿನಲ್ಲಿ ಮುನ್ಸೀಫರಾಗಿ ಉದ್ಯೋಗ ಪ್ರಾರಂಭಿಸಿದ ಅವರು ಹಾಸನದ ಅಸಿಸ್ಟೆಂಟ್ ಕಮೀಷನರ್, ಬೆಂಗಳೂರಿನ ಸಬ್ ಜಡ್ಜ್, ಮದರಾಸು ವಿಶ್ವವಿದ್ಯಾಲಯದ ಫೆಲೋ, ಮೈಸೂರು ಸರ್ಕಾರದ ಕಾರ್ಯದರ್ಶಿ; ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ, ಸರಕಾರದ ಮುಖ್ಯ ಕಾರ್ಯದರ್ಶಿ, ಮುಖ್ಯ ನ್ಯಾಯಾಧೀಶ, ವಿದ್ಯಾ ಇಲಾಖೆಯ ಪ್ರಧಾನ ಆಡಳಿತಾಧಿಕಾರಿ, ಕೌನ್ಸಿಲರ್ ಹೀಗೆ ವಿವಿಧ ಹುದ್ದೆಗಳಲ್ಲಿ ದುಡಿದಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ಭದ್ರಬುನಾದಿ ಹಾಕಿದ ನಂಜುಂಡಯ್ಯನವರು ರಾಜ್ಯಶಾಸ್ತ್ರ, ನ್ಯಾಯಶಾಸ್ತ್ರ, ಅರ್ಥಶಾಸ್ತ್ರ ಮುಂತಾದ ವಿಷಯಗಳಲ್ಲಿ ವಿದ್ವಾಂಸರಾಗಿದ್ದು, ಹಲವಾರು ಗ್ರಂಥಗಳ ರಚನೆ ಮಾಡಿದರು. ಕನ್ನಡದಲ್ಲಿ ವ್ಯವಹಾರ ದೀಪಿಕೆ, ವ್ಯವಹಾರ ಧರ್ಮಶಾಸ್ತ್ರ, ಅರ್ಥಶಾಸ್ತ್ರ, ಲೇಖ್ಯಬೋಧಿನಿ, ರಾತ್ರಿಯಲ್ಲಿ ಕಂಬನಿ ಮುಂತಾದ ಕೃತಿಗಳನ್ನು ರಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಅವರು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯುತ್ತಿದೆ” ಎಂದು ಅವರ ಜೀವನ ಯಾನವನ್ನು ನಾಡೋಜ ಡಾ.ಮಹೇಶ ಜೋಶಿಯವರು ಸ್ಮರಿಸಿದರು. ಕೀರ್ತಿನಾಥ ಕುರ್ತಕೋಟಿ ಬರೆದ ವಿಮರ್ಶೆಗಳನ್ನು ಸಾಹಿತ್ಯ ಕೃತಿಯಷ್ಟೇ ಪ್ರೀತಿಯಿಂದ ಓದುವುದು ಸಾಧ್ಯವಿತ್ತು. ಒಂದು ಕೃತಿಯನ್ನು ಓದಿ ಅದಕ್ಕೊಂದು ಪರ್ಯಾವರಣವನ್ನು ದಕ್ಕಿಸಿಕೊಡುವ ಶಕ್ತಿ ಅವರ ಬರಹಗಳಿಗಿತ್ತು. ಯಾವುದನ್ನೂ ಬರೆದಿಟ್ಟುಕೊಳ್ಳದೇ ಎಲ್ಲವನ್ನೂ ನೆನಪಿಸಿಕೊಂಡು ಬರೆಯಬಲ್ಲ ಶಕ್ತಿ ಅವರಿಗಿತ್ತು. ಶಂಬಾ ದಂಪತಿ ಒಟ್ಟಿಗೆ ತೀರಿಕೊಂಡಾಗ ಅದೊಂದು ಪುರಾಣ ಕತೆಯಂತೆ ಕುರ್ತುಕೋಟಿಯವರು ವರ್ಣಿಸಿದ್ದರು. ಅವರ ಜೀವನದಲ್ಲಿ ಕೂಡ ಹೀಗೆಯೇ ಆಯಿತು. ಕುರ್ತಕೋಟಿಯವರ ಧರ್ಮಪತ್ನಿ ಸರಸ್ವತಿಯವರೂ ಪುಣ್ಯವಂತರು. ಅವರು ತೀರಿಕೊಂಡ ಮೇಲೂ ಕುರ್ತಕೋಟಿಯವರು ಅವರ ಕೈಬಿಡಲಿಲ್ಲ” ಎಂದು ವರ್ಣಿಸಿ ಅವರ ದಿವ್ಯಸ್ಮೃತಿಗೆ ವಂದಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್. ಶ್ರೀಧರ ಮೂರ್ತಿಯವರು ಮಾತನಾಡಿ “ಕನ್ನಡದ ಮೊದಲ ಸಿನಿಮಾ ಸ್ಟುಡಿಯೋ ಸ್ಥಾಪನೆಯಾಗಿದ್ದು ಎಚ್.ವಿ. ನಂಜುಂಡಯ್ಯನವರ ಮನೆಯಲ್ಲಿ ಅಂದಿನಿಂದಲೂ ಸಾಹಿತ್ಯ ಮತ್ತು ಚಲನಚಿತ್ರದ ಸಂಬಂಧ ಆರಂಭವಾಯಿತು. ಕೀರ್ತಿನಾಥ ಕುರ್ತುಕೋಟಿಯವರು ನನ್ನ ಗುರುಗಳು. ಕಲ್ಲಿನಂತಿದ್ದ ನನ್ನನ್ನು ಕಡೆದು ವಿಗ್ರಹ ಮಾಡಿದರು” ಎಂದು ತಮ್ಮ ಒಡನಾಟದ ಘಟನೆಗಳನ್ನು ಸ್ಮರಿಸಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ಎಂ. ಪಟೇಲ್ ಪಾಂಡು, ಗೌರವ ಕೋಶಾಧ್ಯಕ್ಷರಾದ ಡಿ.ಆರ್. ವಿಜಯ ಕುಮಾರ್ ಮತ್ತು ಪರಿಷತ್ತಿನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಇಬ್ಬರೂ ಮಹನೀಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.