ಸುರತ್ಕಲ್ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ಘಟಕ, ಸುರತ್ಕಲ್ ಹೋಬಳಿ ಘಟಕ ಇವರ ಆಶ್ರಯದಲ್ಲಿ ಸುರತ್ಕಲ್ ಹೋಬಳಿ ‘ಕನ್ನಡ ಸಾಹಿತ್ಯ ಸಮ್ಮೇಳನ’ವು ದಿನಾಂಕ 11 ಡಿಸೆಂಬರ್ 2025ರಂದು ಕಾಟಿಪಳ್ಳ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆ ವಠಾರದಲ್ಲಿ ನಡೆಯಲಿದೆ.
ಪೂರ್ವಾಹ್ನ 9-30 ಗಂಟೆಗೆ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪಿ. ದಯಾಕರ್ ಇವರಿಂದ ರಾಷ್ಟ್ರ ಧ್ವಜಾರೋಹಣ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಇವರಿಂದ ಪರಿಷತ್ತಿನ ಧ್ವಜಾರೋಹಣ, ಕ.ಸಾ.ಪ. ಮಂಗಳೂರು ತಾಲೂಕು ಇದರ ಅಧ್ಯಕ್ಷರಾದ ಶ್ರೀ ಮಂಜುನಾಥ ಎಸ್. ರೇವಣ್ಕರ್ ಇವರು ಕನ್ನಡ ಧ್ವಜಾರೋಹಣ ಹಾಗೂ ಗಣೇಶಪುರ ಧರ್ಮೇಂದ್ರ ಇವರು ಪುಸ್ತಕ ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ. ಸಾಹಿತಿ ರಂಗಭೂಮಿ ಕಲಾವಿದೆ ಗೀತಾ ಸುರತ್ಕಲ್ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಕರ್ಮಯೋಗಿ ಡಾ. ಹರಿಕೃಷ್ಣ ಪುನರೂರು ಇವರು ಸಮ್ಮೇಳನದ ಉದ್ಘಾಟನೆ ಮಾಡಲಿದ್ದಾರೆ. ಡಾ. ಎಂ.ಪಿ. ಶ್ರೀನಾಥ ಮತ್ತು ಶ್ರೀ ಮಂಜುನಾಥ ಎಸ್. ರೇವಣ್ಕರ್ ಇವರು ಆಶಯ ನುಡಿಗಳನ್ನಾಡಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಪ್ರದೀಪ್ ಕುಮಾರ ಕಲ್ಕೂರ ಇವರು ಕೃತಿ ಬಿಡುಗಡೆ ಮಾಡಲಿದ್ದಾರೆ.
2-00 ಗಂಟೆಗೆ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ ಇವರು ಅಧ್ಯಕ್ಷತೆಯಲ್ಲಿ ನಡೆಯುವ ವಿಚಾರಗೋಷ್ಠಿಯಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಮಹಿಳಾ ಅಸ್ಮಿತೆ’ ಎಂಬ ವಿಷಯದ ಬಗ್ಗೆ ಸರಕಾರಿ ಪದವು ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜ್ಯೋತಿ ಚೇಳ್ಯಾರು ಮತ್ತು ‘ಶೈಕ್ಷಣಿಕ ಸ್ಥಿತ್ಯಂತರಗಳು ಮತ್ತು ಸವಾಲುಗಳು’ ಎಂಬ ವಿಷಯದ ಬಗ್ಗೆ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಡಾ. ಸುಧಾರಾಣಿ ಇವರು ವಿಷಯ ಮಂಡನೆ ಮಾಡಲಿದ್ದಾರೆ. ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದ.ಕ. ಮತ್ತು ಉಡುಪಿ ಜಿಲ್ಲೆ ಇವರಿಂದ ಸುಗಮ ಸಂಗೀತ ಪ್ರಸ್ತುತಗೊಳ್ಳಲಿದೆ. ಅಪರಾಹ್ನ 2-00 ಗಂಟೆಗೆ ಸಾಹಿತಿ ರಘು ಇಡ್ಕಿದು ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. 3-00 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾಹಿತಿ ಡಾ. ಗಣೇಶ ಅಮೀನ್ ಸಂಕಮಾರ್ ಇವರು ಸಮಾರೋಪ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

