ಮಂಗಳೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಳ್ಳಾಲ ಮತ್ತು ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದ.ಕ., ಉಡುಪಿ ಜಿಲ್ಲೆ ಮತ್ತು ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ದೇವಿನಗರ, ತಲಪಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕನ್ನಡ ಗೀತ ಸಂಗೀತ ಕಾರ್ಯಾಗಾರ ‘ಭಾವಯಾನ’ವು ದಿನಾಂಕ 13-06-2024ರಂದು ಶಾರದಾ ವಿದ್ಯಾನಿಕೇತನ ಡೇ-ಬೋರ್ಡಿಂಗ್ ವಿಭಾಗದ ಸರಸ್ವತಿ ಮಂದಿರದಲ್ಲಿ ಜರಗಿತು.
ಈ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಪ್ರೊ. ಎಂ.ಬಿ. ಪುರಾಣಿಕ್ “ಮನುಷ್ಯನ ಎಲ್ಲಾ ಸಮಸ್ಯೆಗಳ ಮೂಲ ಅತಿಯಾದ ಆಸೆ ಮತ್ತು ಅಹಂಕಾರವೇ ಆಗಿದೆ. ಸಾಹಿತ್ಯ ಸಂಗೀತಾದಿ ಕಲೆಗಳು ಮನಸ್ಸನ್ನು ಸುಸಂಸ್ಕೃತಗೊಳಿಸಿ ಅಹಂಕಾರ ನಿರಸನಕ್ಕೆ ದಾರಿ ಮಾಡಿಕೊಡುತ್ತದೆ. ಶಿಕ್ಷಣದಲ್ಲಿ ಕಲೆ, ಸಾಹಿತ್ಯವೂ ಒಳಗೊಂಡಾಗ ಮಾತ್ರ ಪರಿಪೂರ್ಣ ಶಿಕ್ಷಣ ಸಾಧ್ಯವಾಗುತ್ತದೆ” ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕರ್ನಾಟಕ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಕೆರೆಮನೆ ನರಸಿಂಹ ಹೆಗಡೆ “ಮನಸು ಮತ್ತು ಬುದ್ಧಿಗಳ ನಡುವೆ ಹೊಂದಾಣಿಕೆ ಬೇಕು. ಸಂಗೀತದಿಂದ ಮನಸ್ಸು ಸಂಸ್ಕಾರಗೊಳ್ಳುತ್ತದೆ” ಎಂದರು. ದ.ಕ. ಜಿಲ್ಲಾ ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ಲ. ಚಂದ್ರಹಾಸ ಶೆಟ್ಟಿ ಮಾತನಾಡಿ “ಕಲಾಸಕ್ತಿಯಿಂದ ಮಕ್ಕಳ ವ್ಯಕ್ತಿತ್ವಕ್ಕೆ ಮೆರುಗು ಮತ್ತು ಸೃಜನಶೀಲತೆ ಒದಗುತ್ತದೆ” ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ಘಟಕದ ಅಧ್ಯಕ್ಷರಾದ ಡಾ. ಧನಂಜಯ ಕುಂಬ್ಳೆ ಇವರು ಮಾತನಾಡಿ “ಭಾವನೆಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ಹಾಡುಗಳಿಂದ ನಮ್ಮ ಭಾವಪ್ರಪಂಚ ಶ್ರೀಮಂತಗೊಳ್ಳುತ್ತದೆ. ನಮ್ಮ ಸಂವೇದನಾಶೀಲತೆ ಸೂಕ್ಷ್ಮವಾಗುತ್ತದೆ. ಬುದ್ಧಿಯಿಂದ ಎಲ್ಲವನ್ನು ಪಡೆಯಬಹುದೆಂಬ ಭ್ರಮೆಯಲ್ಲಿ ನಾವು ಭಾವವನ್ನು, ಮಾನವೀಯತೆಯನ್ನು ನಿರ್ಲಕ್ಷಿಸುತ್ತಿದ್ದೇವೆ. ಸಂಗೀತ ಮತ್ತು ಸಾಹಿತ್ಯದಿಂದ ಮನಸು ನೆಮ್ಮದಿಯನ್ನು ಹೊಂದುತ್ತದೆ” ಎಂದರು.
ಸಮಾರಂಭದಲ್ಲಿ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ದೀಪಕ್ ರಾಜ್ ಉಳ್ಳಾಲ, ಶಾರದಾ ವಿದ್ಯಾನಿಕೇತನದ ಪ್ರಾಂಶುಪಾಲರಾದ ಸುಶ್ಮಾ ದಿನಕರ್, ಆಡಳಿತಾಧಿಕಾರಿ ಮೋಹನ್, ಡೇ ಬೋರ್ಡಿಂಗ್ ವಿಭಾಗ ಪ್ರಾಂಶುಪಾಲ ಎ ಮೋಹನ್ ದಾಸ್, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಸ್ಥಾಪಕಾಧ್ಯಕ್ಷ ಸದಾಶಿವದಾಸ್ ಪಾಂಡೇಶ್ವರ, ಕಾರ್ಯದರ್ಶಿ ಕೇಶವ ಕನಿಲ, ಕೋಶಾಧಿಕಾರಿ ಸತೀಶ್, ಸದಸ್ಯರಾದ ಮಲ್ಲಿಕಾ ಶೆಟ್ಟಿ, ಮೋಹನ್ ಪ್ರಸಾದ್ ನಂತೂರು, ಧನುರಾಜ್, ಪವಿತ್ರ ಮಯ್ಯ, ರಂಗೋಲಿ ಹರೀಶ್, ಸಂತೋಷ್ ಅಂಚನ್, ಬಾಬು ವರ್ಗೀಸ್, ಸುಶ್ಮಿತಾ ಆಚಾರ್, ಉಳ್ಳಾಲ ಕ.ಸಾ.ಪ.ದ ಪದಾಧಿಕಾರಿಗಳಾದ ಕುಸುಮ ಪ್ರಶಾಂತ್ ಉಡುಪ, ಅಮಿತ ಆಳ್ವ, ಬ್ರಿಜೇಶ್ ಉಳ್ಳಾಲ, ಕಿರಣ್ ಹರೇಕಳ ಮತ್ತಿತರರು ಭಾಗವಹಿಸಿದ್ದರು.
ಉಳ್ಳಾಲ ಕ.ಸಾ.ಪ. ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್ ಸ್ವಾಗತಿಸಿ, ಕಾರ್ಯಕ್ರಮ ಸಂಚಾಲಕರಾದ ತೋನ್ಸೆ ಪುಷ್ಕಳ ಕುಮಾರ್ ನಿರೂಪಿಸಿ, ರಮೇಶ್ ಸಾಲ್ಯಾನ್ ವಂದಿಸಿದರು. ಕಾರ್ಯಾಗಾರದಲ್ಲಿ ಪ್ರಸಿದ್ಧ ಗಾಯಕಿ ಸಂಗೀತ ಬಾಲಚಂದ್ರ ಮತ್ತು ಕೊಲ್ಯ ತೋನ್ಸೆ ಸಾಂಸ್ಕೃತಿಕ ಪ್ರತಿಷ್ಠಾನದ ನಿರ್ದೇಶಕ ತೋನ್ಸೆ ಪುಷ್ಕಳ ಕುಮಾರ್ ಇವರು ಭಾವಗೀತೆ, ದೇಶಭಕ್ತಿಗೀತೆ ಹಾಗೂ ಜನಪದ ಗೀತೆಗಳನ್ನು ಹಾಡುವ ರೀತಿಯನ್ನು ವಿವರಿಸಿ ಹಾಡುಗಳನ್ನು ಕಲಿಸಿದರು. ತಬಲದಲ್ಲಿ ಮುರಳೀಧರ ಕಾಮತ್ ಹಾಗೂ ಕೀಬೋರ್ಡಿನಲ್ಲಿ ಅಶ್ವಿನ್ ಪುತ್ತೂರು ಸಹಕರಿಸಿದರು. ಕಾರ್ಯಾಗಾರದಲ್ಲಿ ಸುಮಾರು 128 ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.