ಕಾಂತಾವರ : ಕಾಂತಾವರ ಕನ್ನಡ ಸಂಘದಲ್ಲಿ ‘ಕಾಂತಾವರ ಉತ್ಸವ – 2024’ ಇದರ ಉದ್ಘಾಟನಾ ಸಮಾರಂಭವು ಕರ್ನಾಟಕ ರಾಜ್ಯೋತ್ಸವ ದಿನವಾದ ದಿನಾಂಕ 01 ನವೆಂಬರ್ 2024ರಂದು ನಡೆಯಿತು .
ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡು ಘಟಕದ ಅಧ್ಯಕ್ಷರಾಗಿರುವ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಮಾತನಾಡಿ “ಕಳೆದ 48 ವರ್ಷಗಳಿಂದ ಕನ್ನಡ ನಾಡು ಹೆಮ್ಮೆಪಡುವಂತಹ ಕನ್ನಡದ ಚಟುವಟಿಕೆಗಳು ಕಾಂತಾವರ ಕನ್ನಡ ಸಂಘದಲ್ಲಿ ಅರ್ಥಪೂರ್ಣವಾಗಿ ನಡೆಯುತ್ತಿರುವುದು ಅಭಿನಂದನೀಯವಾಗಿದೆ. ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣಗೊಂಡು 50 ವರ್ಷಗಳು ಪೂರ್ಣಗೊಳ್ಳುತ್ತಿರುವ ಈ ಸಂದರ್ಭ ಕಾಸರಗೋಡು ಕನ್ನಡಿಗರಿಗೆ ಇದು ಸಂಭ್ರಮಿಸುವ ದಿನವಲ್ಲವಾದರೂ ಇಂದಿಗೂ ಕಾಸರಗೋಡಿನ ಕನ್ನಡಿಗರು ಕನ್ನಡ ನಾಡು ನುಡಿಗೆ ಸಲ್ಲಿಸುತ್ತಿರುವ ಸೇವೆ ಅನನ್ಯವಾದುದು.” ಎಂಬುದಾಗಿ ತಿಳಿಸಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರು ಸಭಾಧ್ಯಕ್ಷತೆಯಲ್ಲಿ ನಡೆಡ ಈ ಕಾರ್ಯಕ್ರಮದಲ್ಲಿ ಏಳು ಜನ ಸಾಧಕರಿಗೆ ‘ದತ್ತಿನಿಧಿ ಪ್ರಶಸ್ತಿ’ಗಳನ್ನು ಪ್ರದಾನಿಸಲಾಯಿತು. ಬಳಿಕ ಮಾತನಾಡಿದ ಅವರು “ಸರಕಾರದ ಧೋರಣೆಯಿಂದಾಗಿ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಆಘಾತಕಾರಿ ಬೆಳವಣಿಗೆ.” ಎಂದರು.
ಹಿರಿಯ ಲೇಖಕಿ ಹಾಗೂ ಸಂಘಟಕರಾಗಿರುವ ಪ್ರೊ. ಪ್ರಮೀಳಾ ಮಾಧವ್ ಕಾಸರಗೋಡು ಅವರು ಪ್ರಶಸ್ತಿ ಪುರಸ್ಕೃತರಿಗೆ ಶುಭಾಶಂಸನೆ ಸಲ್ಲಿಸಿದರು. ‘ನಾಡಿಗೆ ನಮಸ್ಕಾರ ಗ್ರಂಥಮಾಲೆ’ಯ ಸಂಪಾದಕರಾಗಿರುವ ಹಿರಿಯ ವಿಮರ್ಶಕರು ಹಾಗೂ ಕಾದಂಬರಿಕಾರರಾದ ಡಾ. ಬಿ.ಜನಾರ್ದನ ಭಟ್ ಅವರು ಮಾಲೆಯಲ್ಲಿ ಮೂಡಿಬರುತ್ತಿರುವ ಕೃತಿಗಳ ಮಹತ್ವವನ್ನು ತಿಳಿಸಿದರು.
ಕಾಸರಗೋಡಿನ ಹಿರಿಯ ಸಾಹಿತಿ ಹಾಗೂ ಸಂಘಟಕರಾಗಿರುವ ಪ್ರೊ. ಪಿ. ಎನ್. ಮೂಡಿತ್ತಾಯ ಇವರು ‘ನಾಡಿಗೆ ನಮಸ್ಕಾರ ಗ್ರಂಥಮಾಲೆ’ಯ ಎಂಟು ಕೃತಿಗಳು ಮತ್ತು ‘ಸಂಸ್ಕೃತಿ ಸಂವರ್ಧನ ಮಾಲೆ’ಯ ಒಂದು ಕೃತಿಯೂ ಸೇರಿದಂತೆ ಒಟ್ಟು ಒಂಬತ್ತು ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.” ಬಳಿಕ ಮಾತನಾಡಿ “ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಿ ಉಳಿಯುವ ಈ ಮಹತ್ವದ ಕೃತಿಗಳ ಪ್ರಕಟಣೆ ಈಗ 354ನ್ನು ದಾಟಿದ್ದು ಇದು ನಾಡೇ ಬೆರಗಾಗುವಂತಹ ಕನ್ನಡ ಸಂಘದ ಮಹತ್ಸಾಧನೆಯಾಗಿದೆ.” ಎಂದರು. ನಾಡಿಗೆ ನಮಸ್ಕಾರ ಗ್ರಂಥಮಾಲೆಯಲ್ಲಿ ಬಂದ ಸಾಧಕರು, ಕೃತಿಯ ಲೇಖಕರು ಮತ್ತು ಪ್ರಾಯೋಜಕರು ಹಾಗೂ ದತ್ತಿನಿಧಿಗಳ ಪ್ರಾಯೋಜಕರನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಮುನ್ನ ಮುಂಜಾನೆ ಕನ್ನಡ ಸಂಘದ ಉಪಾಧ್ಯಕ್ಷರಾದ ಸತೀಶ ಕುಮಾರ್ ಕೆಮ್ಮಣ್ಣು ಕನ್ನಡ ಧ್ವಜಾರೋಹಣ ನೆರವೇರಿಸಿದರು. ನಾಡಗೀತೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಅಧ್ಯಕ್ಷರಾದ ಡಾ. ನಾ. ಮೊಗಸಾಲೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿ, ಸತೀಶ್ ಕುಮಾರ್ ಕೆಮ್ಮಣ್ಣು ವಂದಿಸಿದರು. ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಮಕ ವಾಚನ – ವ್ಯಾಖ್ಯಾನ ಕಾರ್ಯಕ್ರಮ ನೆರವೇರಿತು. ಚಾಟುಕವಿ ವಿರಚಿತ ಕರ್ನಾಟಕ ಭಾಗವತದ ‘ಮಹಾಬಲಿ’ ಪ್ರಸಂಗದ ವಾಚನವನ್ನು ಯಜ್ಞೇಶ್ ಆಚಾರ್ಯ ಹೊಸಬೆಟ್ಟು ನಿರ್ವಹಿಸಿದರೆ ಸರ್ಪಂಗಳ ಈಶ್ವರ ಭಟ್ ಅವರು ವ್ಯಾಖ್ಯಾನಿಸಿದರು.