ಕಾಸರಗೋಡು : ಕಾಸರಗೋಡಿನಲ್ಲಿ 2001ರಲ್ಲಿ ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರಿಂದ ಸ್ಥಾಪನೆಯಾಗಿ, ಇದೀಗ ವಿಂಶತಿ ವರ್ಷಾಚರಣೆಯನ್ನು ನಡೆಸುತ್ತಿರುವ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಹಾಗೂ ಗ್ರಂಥಾಲಯದಲ್ಲಿ 2023 ಅಕ್ಟೋಬರ್ 1ರಂದು ಸಂಭ್ರಮ. ಸೇರಿದ್ದ ಕನ್ನಡಿಗರಿಗೆ ಕನ್ನಡ ಉತ್ಸವದ ಖುಷಿ. ನೂತನ ಕೃತಿಯ ಸಮೀಕ್ಷೆ, ಹೊಸಾ ಕೃತಿಗಳ ಬಿಡುಗಡೆ ಹಾಗೂ ಕನ್ನಡ ಭವನದ 2023ರ ಸಾಲಿನ ಅನೇಕ ಪ್ರಶಸ್ತಿಗಳ ವಿತರಣೆಗೆ ಎಲ್ಲಾ ರೀತಿಯ ಸಿದ್ಧತೆ ನಡೆದಿತ್ತು.
ಕನ್ನಡ ಭವನ ಹಾಗೂ ಗ್ರಂಥಾಲಯದ ಬಯಲು ರಂಗಮಂದಿರದಲ್ಲಿ ನಡೆದ ಈ ಕನ್ನಡ ಪರವಾದ ಕಾರ್ಯಕ್ರಮದಲ್ಲಿ ಅನೇಕ ಕನ್ನಡಿಗರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಚೇತನ ಅಣಂಗೂರು ಬಾಲಕೃಷ್ಣ ಮಾಸ್ತರ್ ಅವರ ಬದುಕನ್ನು ಆಧರಿಸಿಕೊಂಡು ಬರೆದ ‘ಸಮಾಜ ಸಂಪದ’ ಕೃತಿಯ ಲೋಕಾರ್ಪಣೆ ಹಾಗೂ ಕೃತಿಯ ಸಮೀಕ್ಷೆ ನಡೆಯಿತು. ಈ ಕೃತಿಯು ಸುಬ್ಬಯ್ಯಕಟ್ಟೆ ಕೈರಳಿ ಪ್ರಕಾಶನದ 25ನೇ ಕೃತಿಯಾಗಿ, ರವಿ ನಾಯ್ಕಾಪು ಅವರ ಸಾಹಿತ್ಯದಲ್ಲಿ ರಚನೆಯಾಗಿದೆ. ಕೃತಿಯ ಬಗ್ಗೆ ನಿವೃತ್ತ ಪ್ರಾಂಶುಪಾಲ ಪ್ರೋ. ಎ.ಶ್ರೀನಾಥ್ ಸಮೀಕ್ಷೆ ನಡೆಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಭವನ ಪ್ರಕಾಶನಕ್ಕೆ ಚಾಲನೆ ನೀಡಲಾಯಿತು. ಪ್ರಕಾಶನವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕರ್ನಾಟಕ ಸರ್ಕಾರದ ವಿಧಾನ ಸಭಾ ಮಾಜಿ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಮಾತನಾಡಿ, “ಸಾಹಿತ್ಯ ಕಲೆಗಳಿಂದ ನಮ್ಮ ಸಂಸ್ಕೃತಿಯ ಸಂವರ್ಧನೆ ಮತ್ತು ಸಂರಕ್ಷಣೆ ಆಗುತ್ತದೆ. ವಿಜ್ಞಾನ ಇಂದು ವಿಕಾಸಗೊಂಡಿರುವುದು ನಿಜ. ಆದರೆ ಪ್ರಾಚೀನ ಕಾಲದಿಂದಲೇ ನಮ್ಮ ಹಿರಿಯರು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಬದುಕು ಕಟ್ಟಿದವರು. ಅತ್ಯಾಧುನಿಕ ತಂತ್ರಜ್ಞಾನ ಇಂದು ಅಗತ್ಯವಾದರೂ ನೈತಿಕ ಮೌಲ್ಯಗಳನ್ನು ಬಿತ್ತುವ ಕೆಲಸ ನಡೆಯಬೇಕು” ಎಂದು ತಿಳಿಸಿದರು.
ಕವಿ ಪತ್ರಕರ್ತ ರಾಧಾಕೃಷ್ಣ ಕೆ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, “ಕನ್ನಡ ಭವನವು ಕಳೆದ 20ವರ್ಷಗಳಲ್ಲಿ ನಡೆಸಿದ ವೈವಿಧ್ಯಮಯ ಕಾರ್ಯಕ್ರಮಗಳ ಬಗ್ಗೆ ಸ್ಥೂಲ ಪರಿಚಯ ನೀಡಿದರು. ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಎ.ಆರ್ ಸುಬ್ಬಯ್ಯಕಟ್ಟೆ, ಧಾರ್ಮಿಕ ಮುಂದಾಳು ಅರಿಬೈಲು ಗೋಪಾಲ ಶೆಟ್ಟಿ, ಕಮಲಾಕ್ಷ ಕಲ್ಲುಗುಡ್ಡೆ, ಶಶಿಕಾಂತ ಶೆಟ್ಟಿ, ಜಯಪ್ರಕಾಶ ಮಂಗಳೂರು, ಕಥಾ ಬಿಂದು ಪ್ರಕಾಶನದ ವಿ.ವಿ ಪ್ರದೀಪ್ ಕುಮಾರ್, ಶ್ರೀಧರ ಶೆಟ್ಟಿ ಮುಟ್ಟಂ, ಶಿವಮೊಗ್ಗದ ಕ್ರಾಂತಿಕಿಡಿ ಪತ್ರಿಕೆಯ ಸಂಪಾದಕ ಕೆ. ಜಿ. ವೆಂಕಟೇಶ್ ಶುಭ ಹಾರೈಸಿದರು.
ಡಾ. ಪ್ರಮೀಳಾ ಮಾಧವ್ ಇವರು ಕನ್ನಡ ಭವನ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ಕನ್ನಡ ಭವನದ ಪ್ರಕಾಶನವನ್ನು ಉದ್ಘಾಟಿಸಲಾಯಿತು. ಈ ಪ್ರಕಾಶನದ ಮೂಲಕ ರೇಖಾ ಸುದೇಶ್ ರಾವ್ ಅವರು ಬರೆದ ‘ನವಚೇತನ’ ಹಾಗೂ ವೀಣಾ ನಾಗರಾಜ್ ವಾಮಂಜೂರು ಅವರು ಬರೆದ ‘ನಂದಾದೀಪ’ ಕವನ ಸಂಕಲನ ಕೃತಿಗಳು ಬಿಡುಗಡೆಯಾದುವು. ‘ನವಚೇತನ’ ಕೃತಿಯ ಬಗ್ಗೆ ನಿವೃತ್ತ ಶಿಕ್ಷಕ ಗುಣಾಜೆ ರಾಮಚಂದ್ರ ಭಟ್ ಹಾಗೂ ‘ನಂದಾದೀಪ’ ಕೃತಿಯ ಬಗ್ಗೆ ಪತ್ರಕರ್ತ, ಸಾಹಿತಿ ವಿರಾಜ್ ಅಡೂರು ಸಮೀಕ್ಷೆ ನಡೆಸಿದರು.
ಕಾಸರಗೋಡಿನ ಬಾಲಪ್ರತಿಭೆಗಳಾದ ಅನ್ವಿತಾ ನೀರ್ಚಾಲು, ಅಭಿಜ್ಞಾ ಕರಂದಕ್ಕಾಡು, ಗಿರೀಶ್ ಪಿ. ಎಂ. ಚಿತ್ತಾರಿ, ಚಿತ್ತರಂಜನ್ ಕಡಂದೇಲು, ಶ್ರಾವ್ಯ ಬೆದ್ರಡ್ಕ, ಅನನ್ಯಾ ಪಿ ಎಸ್ ಕಾಸರಗೋಡು, ವೇದ ವಾಣಿಯಂಪಾರೆ, ಶಿವಾನಿ ಕೂಡ್ಲು, ತೃಷಾ ಗುರುಪ್ರಸಾದ, ಅನುಜ್ಞಾ ಲಕ್ಷ್ಮೀ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮನಸ್ವೀ ಕುಲಾಲ್, ಹನ್ವಿತಾ ಆಳ್ವ, ಋತ್ವಿ ಎಚ್. ಪಿ. ಮಂಗಳೂರು, ಸಮೃದ್ಧಿ ಎಂ. ಕೆ. ಮಂಗಳೂರು, ಹೇಮಸ್ವಾತಿ ಸುಳ್ಯ, ಧೃತಿ ಕುಲಾಲ್ ಕಿನ್ನಿಗೋಳಿ, ಶಿಲ್ಪಾ ಬೆಟ್ಟಂಪಾಡಿ ಅವರಿಗೆ 2023ನೇ ಸಾಲಿನ ಕನ್ನಡ ಭವನದ ಯುವ ಪ್ರತಿಭಾ ಪುರಸ್ಕಾರವಾದ ‘ಭರವಸೆಯ ಬೆಳಕು-2023’ನ್ನು ಪ್ರದಾನ ಮಾಡಲಾಯಿತು.
ಸಾಧಕರಾದ ರಂಜನ್ ಕಾಸರಗೋಡು (ಚಲನಚಿತ್ರ ನಟನೆ), ತ್ಯಾಗರಾಜ್ ಬಿ ಮೈಸೂರು (ಸಾಹಿತ್ಯ), ನಾಟಕ ಭಾರ್ಗವ ಕೆಂಪರಾಜು ಮೈಸೂರು (ಬಹುಮುಖ ಪ್ರತಿಭೆ) ಇವರಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೊರಕ್ಕೋಡು ಶ್ರೀ ದುರ್ಗಾ ಪರಮೇಶ್ವರಿ ಸುಬ್ರಹ್ಮಣ್ಯ ಭಜನಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.
ವಾಮನ್ ರಾವ್ ಬೇಕಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಸಂತ ಕೆರೆಮನೆ ವಂದಿಸಿದರು. ಜಗದೀಶ್ ಕೂಡ್ಲು ನಿರೂಪಿಸಿದರು.