ಬೆಂಗಳೂರು : ಕನ್ನಡದ ವಿಶಿಷ್ಟ ಬರಹಗಾರ ಮೊಗಳ್ಳಿ ಗಣೇಶ್ (62) ಇವರು ದಿನಾಂಕ 04 ಅಕ್ಟೋಬರ್ 2025ರಂದು ನಿಧನ ಹೊಂದಿದ್ದಾರೆ. ಈಗ ತಾನೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ನಿವೃತ್ತರಾಗಿ ಹೊಸ ಚಿಂತನೆಗಳಲ್ಲಿ ತೊಡಗಿಸಿಕೊಂಡಿದ್ದ ಇವರಿಂದ ಕನ್ನಡ ಸಾಹಿತ್ಯ ಇನ್ನೂ ಮಹತ್ವದ್ದನ್ನು ನಿರೀಕ್ಷಿಸುತ್ತಿತ್ತು. ಅವರ ಅಕಾಲಿಕ ಮರಣ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲಿಯೂ ದಲಿತ ಸಾಹಿತ್ಯದಲ್ಲಿ ದೊಡ್ಡ ನಿರ್ವಾತವನ್ನು ಸೃಷ್ಟಿಸಿದೆ ಎಂದು ನಾಡೋಜ ಡಾ. ಮಹೇಶ ಜೋಶಿಯವರು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.
‘ಬುಗುರಿ’ ಕಥೆಯ ಮೂಲಕ ಸಂಚಲನವನ್ನು ಉಂಟು ಮಾಡಿದ್ದ ಮೊಗಳ್ಳಿ ಕನ್ನಡಕ್ಕ ದಕ್ಕಿದ ಬಹಳ ಶಕ್ತಿಶಾಲಿ ಲೇಖಕ. ತಮ್ಮ ಆಳವಾದ ಚಿಂತನೆ ಮತ್ತು ಸೋಪಜ್ಞ ಭಾಷೆಯ ಮೂಲಕ ಕನ್ನಡಕ್ಕೆ ಹೊಸ ಕಸುವನ್ನು ತುಂಬಿದ್ದರು. ಅವರ ಕಥೆಗಳು ಇಂಗ್ಲೀಷ್‌ಗೆ ಅನುವಾದವಾಗಿದ್ದರೆ ಜಾಗತಿಕ ಪುರಸ್ಕಾರಗಳನ್ನು ಖಂಡಿತವಾಗಿಯೂ ಪಡೆಯುತ್ತಿದ್ದವು. ಆದಿಮ ಸಂವೇದನೆಯನ್ನು, ದಲಿತರ ನೋವುಗಳನ್ನು ಅವರಂತೆ ಹಿಡಿದಿಟ್ಟ ಇನ್ನೊಬ್ಬ ಲೇಖಕರಿಲ್ಲ. ಅವರು ಬಳಸುತ್ತಿದ್ದ ನುಡಿಗಟ್ಟು ಕೂಡ ನೋವಿನಲ್ಲಿ ಎದ್ದಿ ಬಂದಂತಿತ್ತು. ಬುಗುರಿ, ಅತ್ತೆ, ಭೂಮಿ, ಮಣ್ಣು, ಕನ್ನೆಮಳೆ, ದೇವರದಾರಿ ಸಂಕಲನಗಳ ಮೂಲಕ ಕನ್ನಡ ಕಥನಕ್ಕೆ ಹೊಸ ಮಾದರಿಯನ್ನು ಪರಿಚಯಿಸಿದರು. ಅವರ ಕಥೆಗಳು ಶ್ರಮಿಕಲೋಕದ ಪಿಸುಮಾತುಗಳನ್ನು ಶಕ್ತವಾಗಿ ಹಿಡಿದಿಡುತ್ತಿದ್ದವು. ಕನ್ನಡ ವಿಮರ್ಶಾ ಕ್ರಮಕ್ಕೆ ಅವರು ‘ತಕರಾರು’ ಕೃತಿಯ ಮೂಲಕ ಹೊಸ ದಿಕ್ಕನ್ನು ಕೊಟ್ಟಿದ್ದರು. ಕನ್ನಡ ಸಂಸ್ಕೃತಿ ಮತ್ತು ಜಾನಪದ ಅಧ್ಯಯನದಲ್ಲಿ ತಮ್ಮದೇ ಆದ ‘ದೇಸಿ ಚಿಂತನೆ’ಯನ್ನು ನೀಡಿದರು. ಜನಪದ ವಿದ್ವಾಂಸ ಜೀಶಂಪ ಅವರ ಶಿಷ್ಯರಾಗಿದ್ದ ಮೊಗಳ್ಳಿ ಜಾನಪದ ಆರಾಧನಾ ಭಾವಕ್ಕೆ ಭಿನ್ನಮತೀಯರಾಗಿದ್ದರು. ಇತ್ತೀಚೆಗೆ ಬಂದ ಅವರ ‘ನಾನೆಂಬುದು ಕಿಂಚಿತ್ತು’ ಆತ್ಮಕತೆ ಓದಿ ನಾನು ಬೆರಗಾಗಿದ್ದೆ. ಮೊದಲ ಕೆಲವು ಅಧ್ಯಾಯಗಳನ್ನು ಓದಿ ತಲ್ಲಣಗೊಂಡಿದ್ದೆ. ಅವರ ಬರಹಗಳ ಹಿಂದಿನ ಒಗಟಿನಂತಹ ಪ್ರಶ್ನೆಗೆ ಉತ್ತರ ಸಿಕ್ಕಿತ್ತು ಎಂದು ನಾಡೋಜ ಡಾ.ಮಹೇಶ ಜೋಶಿ ಸ್ಮರಿಸಿಕೊಂಡು ಅವರ ಕೊಡುಗೆಗಳ ಕುರಿತು ಚರ್ಚೆಗಳಾಗಲಿ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಈ ನಿಟ್ಟಿನಲ್ಲಿ ಶ್ರಮಿಸಲಿದೆ ಎಂದು ಹೇಳಿದ್ದಾರೆ.