ಮುಳ್ಳೇರಿಯ : ಹಿರಿಯ ವೈದ್ಯ, ಸಾಹಿತಿ ಡಾ.ರಮಾನಂದ ಬನಾರಿ ಅವರು ಬರೆದು ಪ್ರಕಟಿಸಿದ ‘ಕನ್ನಡಿಯಲ್ಲಿ ಕನ್ನಡಿಗ’ ಕೃತಿಯ ಐದನೇ ಸಂಚಿಕೆಯ ಲೋಕಾರ್ಪಣಾ ಸಮಾರಂಭವು ದಿನಾಂಕ 25 ಅಕ್ಟೋಬರ್ 2025ರ ಶನಿವಾರದಂದು ದೇಲಂಪಾಡಿಯ ಕೀರಿಕ್ಕಾಡು ಸಾಂಸ್ಕಂತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ನಡೆಯಿತು.
ಸಮಾರಂಭದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಹಿರಿಯ ಲೇಖಕ, ಪತ್ರಕರ್ತ, ನಿವೃತ್ತ ಪ್ರಾಧ್ಯಾಪಕ ಪ್ರೊ. ವಿ. ಬಿ. ಅರ್ತಿಕಜೆ ಮಾತನಾಡಿ “ನಾಡು-ನುಡಿಗೆ ಬಹುಮುಖ ಆಯಾಮಗಳಲ್ಲಿ ಸೇವೆ ಸಲ್ಲಿಸಿದ ವಿಶಿಷ್ಟ ಸಾಧಕರ ಜೀವನಾದರ್ಶ, ಬದುಕಿನ ಪಥಗಳು ಹೊಸ ತಲೆಮಾರಿಗೆ ಮಾರ್ಗದರ್ಶಕವೂ, ಪ್ರೇರಣದಾಯಿಯಾಗಿರುತ್ತದೆ. ಅವನ್ನು ಪರಿಚಯಿಸುವ ಹೊತ್ತಗೆ ತರುವುದು ಸಮಾಜಕ್ಕೆ ನಾವು ನೀಡುವ ದೊಡ್ಡ ಕೊಡುಗೆಗಳಲ್ಲಿ ಒಂದಾಗಿದ್ದು ಇದಕ್ಕೆ ಬೆಂಬಲ ಅಗತ್ಯ. ಡಾ. ಬನಾರಿಯವರು ಕೈಗೆತ್ತಿಕೊಂಡಿರುವ ಅಧ್ಯಯನಶೀಲ ಇಂತಹ ಕೃತಿ ಸಂಪುಟಗಳು ನಾಡಿನ ಆಸ್ತಿಯಾಗಿದ್ದು, ಮಣ್ಣಿನ ಸಾಧನಾ ಪುರುಷರ ಮಾಹಿತಿಗಳು ಏಕ ಗವಾಕ್ಷಿಯಲ್ಲಿ ಲಭ್ಯವಾಗುವುದು ವಿಶೇಷವಾಗಿದೆ” ಎಂದರು.
ಕೃತಿಕಾರ ಡಾ. ರಮಾನಂದ ಬನಾರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದ ಮುಖ್ಯ ಅತಿಥಿಯಾದ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಮಾತನಾಡಿ “ವ್ಯಕ್ತಿಗಳು ಶಕ್ತಿಗಳಾಗಿ ರೂಪುಗೊಳ್ಳುವ, ಬದುಕನ್ನು ಸಮಾಜದ ವಿವಿಧ ಮುಖಗಳಿಗೆ ತೆರೆಸಿಕೊಳ್ಳುವ ಋಷಿ ಸದೃಶ ಬದುಕುಗಳತ್ತ ಇಣುಕು ನೋಟ ನಮ್ಮಲ್ಲೂ ಬದಲಾವಣೆಗಳಿಗೆ ಕಾರಣವಾಗಬಲ್ಲದು. ಅಂತಹದೊಂದು ಸಾಧ್ಯತೆಗಳಿಗೆ ಈ ಕೃತಿ ಬೆಳಕು ತೋರುತ್ತದೆ” ಎಂದರು. ಕೃತಿ ಸಂಪಾದಕಿ, ನಿವೃತ್ತ ಪ್ರಾಧ್ಯಾಪಕಿ ಡಾ. ಪ್ರಮೀಳಾ ಮಾಧವ ಕೃತಿಯ ಬಗ್ಗೆ ಮಾತನಾಡಿದರು.
ನಿವೃತ್ತ ಪ್ರಾಂಶುಪಾಲ ಪ್ರೊ. ಪಿ. ಎನ್. ಮೂಡಿತ್ತಾಯ ಸ್ವಾಗತಿಸಿ, ನಿವೃತ್ತ ಶಿಕ್ಷಕ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿ, ಪತ್ರಕರ್ತ ಚಂದ್ರಶೇಖರ ಏತಡ್ಕ ವಂದಿಸಿದರು.

