ಪುತ್ತೂರು : ನ್ಯಾಯವಾದಿ, ಬರಹಗಾರ ಭಾಸ್ಕರ ಕೋಡಿಂಬಾಳ ಇವರು ಬರೆದ ‘ಕಣ್ಣಿಗೆ ಕಾಣದ್ದು.. ಮನಸ್ಸನ್ನು ಕಾಡಿದ್ದು’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 19 ಆಗಸ್ಟ್ 2024ರಂದು ಪುತ್ತೂರು ನ್ಯಾಯಾಲಯದ ಸಂಕೀರ್ಣ, ಪರಾಶರ ಸಭಾಂಗಣದಲ್ಲಿ ನಡೆಯಿತು.
ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಪಿ. ಕೃಷ್ಣ ಭಟ್ ಅವರು ಕೃತಿ ಲೋಕಾರ್ಪಣೆ ಮಾಡಿ, “ಈ ಕೃತಿಯಲ್ಲಿ ಹಿಂದಿನ ಕಾಲದ ದಕ್ಷಿಣ ಕನ್ನಡ ಜಿಲ್ಲೆಯ ವಾಸ್ತವ ಚಿತ್ರಣವನ್ನು ಕಾಣಬಹುದು. ನಮ್ಮ ನಮ್ಮ ಆಸ್ತಿಕತೆ, ಸಾಮಾಜಿಕ ಸಾಮರಸ್ಯ, ನೆಗೆಟಿವ್ ಇಲ್ಲದ ಭಾಂದವ್ಯಗಳನ್ನು ಅಚ್ಚೊತ್ತಿರುವ ಕೃತಿ ಇದಾಗಿದೆ. ಇಂದಿನ ದಿನಗಳಲ್ಲಿ ನಾವು ಮಾಡಿದ ಕೆಲವೊಂದು ಪಾಪಗಳನ್ನು ಕಳೆಯಲೆಂದೇ ದೇವಸ್ಥಾನಕ್ಕೆ ಹೋಗುವ ಚಿಂತನೆ, ಹಿಂದಿನ ಕಾಲದ ನಿಸ್ವಾರ್ಥತೆಯ ಆಸ್ತಿಕ ಭಾವದ ನಡುವೆ ಅಜಗಜಾಂತರ ವ್ಯತ್ಯಾಸ ಓದುಗರ ಮನಸ್ಸಿಗೆ ಕಾಡುತ್ತದೆ. ಇಂದು ವಕೀಲರು ಸಾಹಿತ್ಯ, ಸಂಗೀತದಿಂದ ‘ಹೊರತಾದ’ ಬದುಕು ಕಟ್ಟಿಕೊಳ್ಳುವುದು ಕಷ್ಟಸಾಧ್ಯ. ಅವರೊಳಗೊಂದು ಕವಿ ಹೃದಯ ಕಾಣಿಸಿಕೊಂಡಾಗ ಈ ವ್ಯವಸ್ಥೆಯ ರೂಪಕಗಳು ಹುಟ್ಟಿಕೊಳ್ಳುತ್ತವೆ. ಹಾಗಾಗಿ ಬದುಕಿನ ಅರ್ಥ ವಿಶಾಲತೆಯನ್ನು ಪಡೆದುಕೊಳ್ಳುತ್ತದೆ. ಅರ್ಥ ಎಂಬುವುದು ಸ್ಥಾಪಿತವಲ್ಲ. ಅನುಭವಾಧಾರಿತ ನೆಲೆಯಲ್ಲಿ ಅರ್ಥದ ವಿಸ್ತಾರತೆ ಹೆಚ್ಚುತ್ತಲೇ ಹೋಗುತ್ತದೆ. ಈ ನೆಲೆಯಲ್ಲಿ ಕೋಡಿಂಬಾಳ ಅವರ ಕೃತಿ ಇಷ್ಟವಾಗುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಪುತ್ತೂರಿಗೆ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಆಗಮಿಸಿದ ದೇವರಾಜ್ ಅವರನ್ನು ಸನ್ಮಾನಿಸಿ ಸ್ವಾಗತಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಅಧ್ಯಕ್ಷತೆ ವಹಿಸಿದ್ದರು. 5ನೇ ಹೆಚ್ಚುವರಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸರಿತಾ ಡಿ., ನ್ಯಾಯಾಧೀಶ ಪ್ರಿಯಾ ರವಿ ಜೋಗ್ಲೇಕರ್, ಅರ್ಚನಾ ಉನ್ನಿತ್ತಾನ್, ಯೋಗೇಂದ್ರ ಶೆಟ್ಟಿ, ಹಿರಿಯ ನ್ಯಾಯವಾದಿ ಎಂ. ರಾಮ್ ಮೋಹನ್ ರಾವ್, ಹಿರಿಯ ವೈದ್ಯ ಡಾ. ಎ.ಪಿ. ಭಟ್, ‘ಕಣ್ಣಿಗೆ ಕಾಣದ್ದು ಮನಸ್ಸಿಗೆ ಕಾಡಿದ್ದು’ ಕೃತಿಕಾರ ಭಾಸ್ಕರ ಕೋಡಿಂಬಾಳ, ಶುಭಲತಾ ಭಾಸ್ಕರ್ ಉಪಸ್ಥಿತರಿದ್ದರು. ವಕೀಲರ ಸಂಘದ ಉಪಾಧ್ಯಕ್ಷ ಮೋನಪ್ಪ ಎಂ. ಸ್ವಾಗತಿಸಿ, ಕಾರ್ಯದರ್ಶಿ ಚಿನ್ಮಯ್ ರೈ ಈಶ್ವರಮಂಗಲ ನೂತನ ನ್ಯಾಯಾಧೀಶರ ಪರಿಚಯ ಮಾಡಿದರು. ಮಾಜಿ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ ಕೃತಿಯ ಕುರಿತು ಆಶಯ ಮಾತುಗಳನ್ನಾಡಿದರು. ವಕೀಲ ಮಹೇಶ್ ಕೆ. ಸವಣೂರು ಕಾರ್ಯಕ್ರಮ ನಿರ್ವಹಿಸಿದರು.