28 ಫೆಬ್ರವರಿ 2023, ಕಾಂತಾವರ: “ಕವಿಯಾದವನಿಗೆ ಸಮಾಜದ ಸಂಕಟಗಳಿಗೆ ಪರಿಹಾರ ಹುಡುಕುವ ಮತ್ತು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಇದೆ ಎಂದು ರಾಯಚೂರಿನ ಕವಿ ಡಾ. ಚಿದಾನಂದ ಸಾಲಿ ಹೇಳಿದರು.
ಕಾಂತಾವರ ಕನ್ನಡ ಸಂಘದ ಆಶ್ರಯದಲ್ಲಿ ಕಾಂತಾವರ ಕನ್ನಡ ಭವನದಲ್ಲಿ 26-02-2023ರಂದು ನಡೆದ ಮುದ್ದಣ ಸಾಹಿತ್ಯೋತ್ಸವ- 43ನೇ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುದ್ದಣ ಕಾವ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದು, ಈ ಕಾರ್ಯಕ್ರಮವನ್ನು ವಿಶ್ರಾಂತ ಪ್ರಾಂಶುಪಾಲರಾದ ಕಲಾವಿದ ಪ್ರೊ. ಎಂ.ಎಲ್. ಸಾಮಗ ಉದ್ಘಾಟಿಸಿದರು. ಕವಿ ರಾಯಚೂರಿನ ಡಾ. ಚಿದಾನಂದ ಸಾಲಿ ಅವರಿಗೆ “ಮುದ್ದಣ ಕಾವ್ಯ ಪ್ರಶಸ್ತಿ” ಪ್ರದಾನ ಮಾಡಲಾಯಿತು. ಸಂಘದಲ್ಲಿ ಹೊಸತಾಗಿ ಸ್ಥಾಪನೆಯಾದ “ಗಮಕ ಕಲಾ ಪ್ರವಚನ ಪ್ರಶಸ್ತಿ”ಯನ್ನು ಡಾ. ರಾಘವೇಂದ್ರ ರಾವ್ ಪಡುಬಿದ್ರಿ ಅವರಿಗೆ, “ಗಮಕ ವಾಚನ ಪ್ರಶಸ್ತಿ” ಮಂಜುಳಾ ಸುಬ್ರಮಣ್ಯ ಮಂಚಿ ಅವರಿಗೆ ಹಾಗೂ “ಕಾರ್ಕಳದ ಶಿಲ್ಪಿ ಶಾಮರಾಯ ಆಚಾರ್ಯ ಸ್ಮಾರಕ ಶಿಲ್ಪಕಲಾ ಪ್ರಶಸ್ತಿ”ಯನ್ನು ಬಿ.ಎಸ್. ಭಾಸ್ಕರ ಆಚಾರ್ಯ ಕಾರ್ಕಳ ಅವರಿಗೆ ಪ್ರದಾನ ಮಾಡಲಾಯಿತು. ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರು ಡಾ. ಚಿದಾನಂದ ಸಾಲಿ ಅವರ “ಕನ್ನಡಿಯಲ್ಲಿ ಮನುಷ್ಯ ಮಾತ್ರ” ಕವನ ಸಂಕಲನ ಬಿಡುಗಡೆಗೊಳಿಸಿದರು.
ಮೂಡುಬಿದಿರೆ ತಾಲೂಕು ಕ.ಸಾ.ಪ. ಅಧ್ಯಕ್ಷ ಪ್ರೊ. ವೇಣುಗೋಪಾಲ ಶೆಟ್ಟಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದರು. ಸತೀಶ್ ಕುಮಾರ್ ಕೆಮ್ಮಣ್ಣು, ಯಾಮಿನಿ ಭಟ್ ಉಡುಪಿ ಮತ್ತು ಶಿಲ್ಪಿ ಕೆ. ಸತೀಶ್ ಆಚಾರ್ಯ ಕಾರ್ಕಳ ಅವರನ್ನು ಗೌರವಿಸಲಾಯಿತು. ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ. ನಾ. ಮೊಗಸಾಲೆ ಸ್ವಾಗತಿಸಿ, ಉಪಾಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು ವಂದಿಸಿದರು. ಬಳಿಕ ‘ಪಂಪ ಭಾರತ ಭೀಷ್ಮ ಸೇನಾಪತ್ಯ’ ವಿಷಯದಲ್ಲಿ ಗಮಕ ವಾಚನ, ಪ್ರವಚನ ಕಾರ್ಯಕ್ರಮ ನಡೆಯಿತು.

