ಬೆಂಗಳೂರು : ಕಪ್ಪಣ್ಣ ಅಂಗಳ ಪ್ರಸ್ತುತ ಪಡಿಸುವ ಪ್ರತೀ ತಿಂಗಳ ಎರಡನೇ ಶನಿವಾರದಂದು ನಡೆಯುವ ಶಾಸ್ತ್ರೀಯ ಸಂಗೀತ ಸರಣಿ ಕಾರ್ಯಕ್ರಮ ‘ಆಲಾಪ್’ ಬೆಂಗಳೂರಿನ ಜೆ.ಪಿ. ನಗರದ ಕಪ್ಪಣ್ಣ ಅಂಗಳದಲ್ಲಿ ದಿನಾಂಕ 10-06-2023 ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀಧರ್ ಸಾಗರ್ ರವರ ಸುಪುತ್ರರಾದ 9ನೇ ತರಗತಿಯ ವಿದ್ಯಾರ್ಥಿ ತ್ರಿಧಾತ್ ಸಾಗರ್ ಮತ್ತು ಸಂಗಡಿಗರಿಂದ ಕರ್ನಾಟಕ ಶೈಲಿಯ ಶಾಸ್ತ್ರೀಯ ಸಂಗೀತ ಸ್ಯಾಕ್ಸೊಫೋನ್ ವಾದನ ನಡೆಯಿತು. ಪಕ್ಕವಾದ್ಯ ಮೃದಂಗದಲ್ಲಿ ಅಮೋಘ ಕೈಪ, ವಯಲಿನ್ ನಲ್ಲಿ ಅರ್ಚನಾ ಮರಾಠೆ ಹಾಗೂ ಖಂಜೀರದಲ್ಲಿ ಅಶುತೋಷ್ ವಿಶ್ವೇಶ್ವರ ಸಹಕರಿಸಿದರು.
ಯುವ ಪ್ರತಿಭೆ ತ್ರಿಧಾತ್ ಸಾಗರ್ ತನ್ನ ಪ್ರಾಥಮಿಕ ಅಭ್ಯಾಸವನ್ನು ತಂದೆಯವರಾದ ಶ್ರೀಧರ್ ಸಾಗರ್ ಹಾಗೂ ಮುಂದೆ ಪದ್ಮಭೂಷಣ ವಿದ್ವಾನ್ ಡಾ. ಕದ್ರಿ ಗೋಪಾಲನಾಥ್ ಬಳಿ ಅಭ್ಯಾಸ ಮಾಡಿದ್ದು ಪ್ರಸ್ತುತ ಕರ್ನಾಟಕ ಶಾಸ್ತ್ರೀಯ ಗಾಯನವನ್ನು ವಿದುಷಿ ಆರ್. ಎ. ರಮಾಮಣಿಯವರಲ್ಲಿ ಅಭ್ಯಾಸ ಮಾಡುತ್ತಿದ್ದಾನೆ , ಹಲವಾರು ಕಛೇರಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ವಯಲಿನ್ ನಲ್ಲಿ ಬಿ. ಇ. ಪದವೀಧರೆ ಹಾಗೂ ಸೌಂಡ್ ಇಂಜಿನಿಯರಿಂಗ್ ಅಧ್ಯಯನ ಮಾಡಿದ ಅರ್ಚನಾ ಮರಾಠೆ ಸಹಕರಿಸಿದ್ದಾರೆ . ವಿದ್ವಾನ್ ಬಾಲು ರಘುರಾಮ್ ರವರ ಬಳಿ ವಯಲಿನ್ ತರಬೇತಿ ಪಡೆದ ಈಕೆ ಹಲವಾರು ಕಚೇರಿಗಳಲ್ಲಿ ಭಾಗವಹಿಸಿದ್ದಾರೆ. ವಯಲಿನ್ ವಾದನದಲ್ಲಿ ಕುಶಲರಾದ ಇವರು ಅದರ ಬಗ್ಗೆ ಅಧ್ಯಯನ ಹಾಗೂ ಸಾಧನೆಯನ್ನು ಮಾಡಿರುತ್ತಾರೆ. ಮೃದಂಗದಲ್ಲಿ ಸಹಕರಿಸಿದ ಅಮೋಘ ಕೈಪ ಇವರು ವಿದ್ವಾನ್ ಶ್ರೀನಿವಾಸ ಮೂರ್ತಿಯವರಲ್ಲಿ ಮೃದಂಗ ಅಭ್ಯಾಸ ಮಾಡುತ್ತಿದ್ದಾರೆ ಹಾಗೂ ಖಂಜೀರದಲ್ಲಿ ಸಹಕರಿಸಿದ ಅಶುತೋಷ್ ವಿಶ್ವೇಶ್ವರ ಬಿ.ಇ. ಪದವೀಧರರಾಗಿದ್ದು, ಹವ್ಯಾಸಿಯಾಗಿ ಸಂಗೀತದಲ್ಲಿ ತೊಡಗಿಸಿಕೊಂಡವರು. ಖಂಜೀರ ಮತ್ತು ತಬಲಾ ಎರಡೂ ವಾದನಗಳನ್ನು ವಿದ್ವಾನ್ ಶ್ರೀನಿವಾಸಮೂರ್ತಿಯವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
‘ಆಲಾಪ’ ಸರಣಿ ಸ್ವರ ಮಾಲಿಕೆಯ 70ನೇ ಕಾರ್ಯಕ್ರಮ ಇದಾಗಿದ್ದು, ಕಳೆದ 8 ವರ್ಷಗಳಿಂದ ಈ ಕಾರ್ಯಕ್ರಮ 2 ವರ್ಷ ಕೋವಿಡ್ ಸಮಯ ಹೊರತು ಪಡಿಸಿ ಸತತ 6 ವರ್ಷಗಳಿಂದ ನಡೆದುಕೊಂಡು ಬಂದಿದೆ. ಉದಯೋನ್ಮುಖ ಕಲಾವಿದರಿಗಾಗಿಯೇ ಆಯೋಜಿಸುವ ಈ ಸರಣಿಯಲ್ಲಿ ಒಂದು ತಿಂಗಳು ಹಿಂದೂಸ್ಥಾನಿ ಹಾಗೂ ಒಂದು ತಿಂಗಳು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗಳು ನಡೆಯುತ್ತಿದೆ. ಶ್ರೀ ನಿವಾಸ್ ಜಿ. ಕಪ್ಪಣ್ಣ ಹಾಗೂ ಲಲಿತ ಕಪ್ಪಣ್ಣ ದಂಪತಿಗಳು ತಮ್ಮ ಮನೆಯ ಅಂಗಳದಲ್ಲಿಯೇ ಸುಸಜ್ಜಿತವಾದ ಸಭಾಂಗಣವನ್ನು ನಿರ್ಮಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿಯೇ ಮುಡಿಪಾಗಿಟ್ಟಿದ್ದಾರೆ. ಕಪ್ಪಣ್ಣ ಅವರ ಪುತ್ರಿ ಹಾಗೂ ಕಪ್ಪಣ್ಣ ಅಂಗಳದ ನಿರ್ದೇಶಕಿಯಾದ ಸ್ನೇಹ ಕಪ್ಪಣ್ಣರವರು ಈ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಡಾ. ಎ. ಭಾನುಇವರು ಕಾರ್ಯಕ್ರಮಗಳನ್ನು ಸಂಯೋಜಿಸುತ್ತಿದ್ದಾರೆ.