ಮಂಗಳೂರು : ಕೊಂಕಣಿಯ ಪ್ರಸಿದ್ಧ ಕಲಾ ತಂಡ ‘ಕೊಮಿಡಿ ಕಂಪೆನಿ’ಯು ತಮ್ಮ ತಂಡದ ಸದಸ್ಯ ದಿ. ಸುನಿಲ್ ಕ್ರಾಸ್ತಾ ಸ್ಮರಣಾರ್ಥ ಆಯೋಜಿಸಿದ ‘ಕರ್ ನಾಟಕ್’ ಆಹ್ವಾನಿತ ತಂಡಗಳ ನಾಟಕ ಸ್ಪರ್ಧೆಯ ಸಮಾರೋಪ ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ದಿನಾಂಕ 24-09-2023ರಂದು ನಡೆಯಿತು.
ಲೋಗೋಸ್ ಥಿಯೇಟರ್ ತಂಡದ ‘ನಾನ್ ಲೈಂಗಿಕ ತೊಳಿಲಾಲಿ’ ನಾಟಕವು ರೂ.40,000/- ಬಹುಮಾನ ಮೊತ್ತದೊಡನೆ ಪ್ರಥಮ ಸ್ಥಾನ ಪಡೆಯಿತು. ರಂಗ್ ಥಿಕಾಂ ತಂಡದ ‘ಸೊರ್ ಯಾ ವ್ಯಾಪಾರಿಚೊ ದುಡು’ ನಾಟಕಕ್ಕೆ ರೂ.30,000/- ದ್ವಿತೀಯ ಸ್ಥಾನ, ಉತ್ಸಾಹಿ ಕಲಾಕಾರ್ ಗಂಟಾಲ್ಕಟ್ಟೆ ತಂಡದ ‘ಮ್ಹಜ್ಯಾ ಪುತಾಚೊ ಕಿಣ್ಕುಳೊ’ ನಾಟಕವು ತೃತೀಯ ಸ್ಥಾನಿಯಾಗಿ ರೂ.20,000/- ಬಹುಮಾನ ಪಡೆಯಿತು.
ಉತ್ತಮ ನಟ-ಪ್ರಕಾಶ್ ಕೆ., ಉತ್ತಮ ನಟಿ- ಸ್ಪೀಡಲ್ ಡಿ’ಸೋಜಾ, ಪೋಷಕ ಪಾತ್ರ-ಡೊನ್ನಾ ಡಿ’ಸೋಜಾ, ಸಂಗೀತ- ಕ್ಲಾನ್ವಿನ್ ಫೆರ್ನಾಂಡಿಸ್, ನಿರ್ದೇಶಕ -ಕ್ರಿಸ್ಟೋಫರ್ ಡಿ’ಸೋಜಾ, ಕಥೆ – ಚಾಫ್ರಾ ಡಿ’ಕೋಸ್ತಾ, ತೀರ್ಪುದಾರರ ಮೆಚ್ಚುಗೆಯ ಪಾತ್ರ- ಕಿಯಾರಾ ಪಿರೇರಾ, ಸ್ತ್ರೀ ಲೇಖಕಿ ಪ್ರೀತಿ ಮಾರ್ತಾ ಡಿ’ಸೋಜಾ ಅವರನ್ನೂ ಗೌರವಿಸಲಾಯಿತು. ಲಿನೆಟ್ ಕ್ರಾಸ್ತಾ, ಮಕ್ಕಳಾದ ಸಿಯಾನ್, ಡ್ಯಾರನ್ ಅವರು ಟ್ರೋಫಿ ಅನಾವರಣಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲ ವಂ। ಪ್ರವೀಣ್ ಮಾರ್ಟಿಸ್, ತುಳು ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲಬೈಲ್, ಗೌರವ ಅತಿಥಿಗಳಾದ ವಾಲ್ಟರ್ ನಂದಳಿಕೆ, ಸಂತೋಷ್ ಸಿಕ್ವೇರಾ, ಸಿಎ ಓಲ್ವಿನ್ ರೊಡ್ರಿಗಸ್, ಸ್ಪರ್ಧೆಯ ನಿರ್ಣಾಯಕರಾದ ವಂ| ಫ್ರಾನ್ಸಿಸ್ ರೊಡ್ರಿಗಸ್, ಜೊಯೆಲ್ ಪಿರೇರಾ, ಡೆನಿಸ್ ಪಿರೇರಾ, ಕೊಂಕಣಿ ಚಲನಚಿತ್ರ ಅಸ್ಮಿತಾಯ್ ನಾಯಕ ನಟ ಅಶ್ವಿನ್ ಡಿ’ಕೋಸ್ತಾ, ನಾಯಕಿ ವೆನ್ಸಿಟಾ ಡಾಯಸ್ ಶುಭ ಕೋರಿದರು. ಈ ಸ್ಪರ್ಧೆಯು ಮೇ 27 ಮತ್ತು 28ರಂದು ನಡೆದಿದ್ದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ 11 ಆಹ್ವಾನಿತ ತಂಡಗಳು ಸ್ಪರ್ಧಿಸಿದ್ದವು. ಇದೇ ವೇಳೆ ಕೊಂಕಣಿ ರಂಗಭೂಮಿಗೆ ಮಹತ್ತರ ಕೊಡುಗೆ ನೀಡಿದ್ದ 10 ಮಂದಿ ಹಿರಿಯ ಕಲಾವಿದರನ್ನು ಗೌರವಿಸಲಾಯಿತು.
ಅಸ್ತಿತ್ವ ತಂಡದಿಂದ ‘ಜುಗಾರಿ’ ಹಾಸ್ಯ ನಾಟಕ ಪ್ರದರ್ಶನ ನಡೆಯಿತು. ಆಲ್ವಿನ್ ದಾಂತಿ ಪೆರ್ನಾಲ್, ಟೈಟಸ್ ನೊರೊನ್ಹಾ ನಿರೂಪಿಸಿದರು. ಲ್ಯಾನ್ಸಿ ಲೋಬೋ ಸ್ವಾಗತಿಸಿ, ನೆಲ್ಲು ಪೆರ್ಮನ್ನೂರು ವಂದಿಸಿದರು. ಕಾಮಿಡಿ ಕಂಪೆನಿ ಸದಸ್ಯರಾದ ಆಲ್ವಿನ್ ಸಿ. ವೇಗಸ್, ರವೀನ್ ಮಾರ್ಟಿಸ್, ಮರಿಯ ಜೊಯ್ಸ್ ಡಿ’ಸೋಜಾ ಸಹಕರಿಸಿದರು.