ಪುತ್ತೂರು : ಪುತ್ತೂರಿನ ಸ್ಕೌಟಿಂಗ್ ಸೆಂಟರ್ ಬೊಳುವಾರು ಶಾಲಾವಠಾರದ ಅಭಿಜ್ಞಾನ ಮಕ್ಕಳ ನಾಟಕ ಬಳಗ ಪ್ರಯೋಗಿಸುವ ಮೂಲಕಥೆ ಸಚ್ಚಿದಾನಂದ ಹೆಗ್ಗಡೆಯವರ ಮಕ್ಕಳ ನಾಟಕ ‘ಕಾರಂತಜ್ಜನಿಗೊಂದು ಪತ್ರ’ ದಿನಾಂಕ 15-09-2023ರಂದು ಅಪರಾಹ್ನ 3 ಘಂಟೆಗೆ ಬಂಟರ ಭವನ ಕೊಂಬೆಟ್ಟುವಿನ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯಲ್ಲಿ, ದಿನಾಂಕ 16-09-2023ರಂದು ಅಪರಾಹ್ನ 2 ಘಂಟೆಗೆ ಬೊಳುವಾರು ಶಾಲಾವಠಾರದ ಸ್ಕೌಟಿಂಗ್ ಸೆಂಟರಿನಲ್ಲಿ ಮತ್ತು ದಿನಾಂಕ 19-09-2023ರಂದು ಸಂಜೆ 5 ಘಂಟೆಗೆ ಮಹಾಲಿಂಗೇಶ್ವರ ದೇವಳ ವಠಾರದ ಗಣೇಶೋತ್ಸವ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ.
ಈ ನಾಟಕಕ್ಕೆ ರಂಗಪಠ್ಯ ಮತ್ತು ನಿರ್ದೇಶನ ಐ.ಕೆ.ಬೊಳುವಾರು ಮಾಡಿದ್ದು, ನೃತ್ಯ, ವಸ್ತ್ರ ವಿನ್ಯಾಸ ಹಾಗೂ ಪ್ರಸಾಧನ ಶ್ರೀಮತಿ ರೂಪಕಲಾ ಕೆ. ಮತ್ತು ರಂಗನಿರ್ಮಾಣ ಹಾಗೂ ನಿರ್ವಹಣೆ ಶ್ರೀಮತಿ ಸುನೀತಾ ಎಂ. ಇವರದ್ದು. ‘ಕಾರಂತಜ್ಜನಿಗೊಂದು ಪತ್ರ’ ಮಕ್ಕಳ ನಾಟಕದ ಪಾತ್ರವರ್ಗದಲ್ಲಿ ತೃಶಾ, ಸಾಯಿ ಕೀರ್ತನ್, ಚೈತ್ರೇಶ್, ವಿದೀಕ್ಷಾ, ನೇತ್ರಾ, ಹರ್ಷಿಣಿ, ಧನ್ವಿತಾ, ನಿರೀಕ್ಷಾ, ನಿಶಾ, ಶ್ರೀಕೃತಿ, ಧೃತಿ, ರಶ್ಮಿ ಕೆ., ಶ್ರೇಯಾ, ಸುನೇಧಿ, ಅಚಲ್, ಸಮರ್ಥ, ಸಂಭ್ರಮ ರೈ, ಶೋಭಿತ್, ಖುಷಿತ್, ಯಶ್ವಿನ್ ಮತ್ತು ಪ್ರಾಪ್ತ. ಪ್ರೀತಿಯಿಂದ ಬನ್ನಿ ಮಕ್ಕಳ ನಾಟಕವನ್ನು ಬೆಂಬಲಿಸಿ.
ನಾಟಕದ ಕುರಿತು:
ಮಕ್ಕಳ ನಾಟಕ ಕಲಿಕೆ ಶಾಲಾ ಶಿಕ್ಷಣಕ್ಕೆ ಪೂರಕವಾಗಿರಬೇಕು ಎನ್ನುವ ಉದ್ದೇಶದಿಂದ ಕಾರಂತಜ್ಜನಿಗೊಂದು ಪತ್ರ ನಾಟಕವನ್ನು ಆರಿಸಿಕೊಂಡಿದ್ದೇವೆ. ಕಲಿಕೆ ಆಟವಾಗಬೇಕು, ಆಟ ಪಾಠವಾಗಬೇಕು, ಪಾಠ ನಾಟಕವಾಗಬೇಕು, ಕಲೆ-ಸಾಹಿತ್ಯ-ಪುಸ್ತಕ ಓದು ಮಕ್ಕಳ ದಿನಚರಿಯಾಗಬೇಕು. ನಾಟಕ ನೋಡುವ ಮೂಲಕ ಮಕ್ಕಳು ಪುಸ್ತಕಗಳನ್ನು ಓದುವಂತಾಗಬೇಕು. ಒಟ್ಟಿನಲ್ಲಿ ಕಾರಂತರನ್ನು ತಿಳಿಯುವ ಓದುವ ಆಟ ಆಗಬೇಕು. ಮಕ್ಕಳು ತಮ್ಮ ಮನೆ ಶಾಲೆ ಹಾಗೂ ಊರಿನ ಬಗ್ಗೆ ಇರಿಸಿಕೊಳ್ಳಬೇಕಾದ ಪ್ರೀತಿ ಕಾಳಜಿ ಹಾಗೂ ಗೌರವದ ಬಗ್ಗೆ ಈ ರಂಗಕೃತಿ ಮಾತನಾಡುತ್ತದೆ.
ಸಣ್ಣ ಕಥೆಯೊಂದನ್ನು ನಾಟಕವಾಗಿ ವಿಸ್ತಾರಗೊಳಿಸುವಲ್ಲಿ ಡಾ. ಶಿವರಾಮ ಕಾರಂತ, ಮಹಾಕವಿ ಕುವೆಂಪು, ಡಾ .ಸಿದ್ದಲಿಂಗಯ್ಯ, ಕೋಟಿಗಾನಹಳ್ಳಿ ರಾಮಯ್ಯ ಮುಂತಾದವರ ಕವಿತೆಗಳನ್ನು ಬಳಸಿಕೊಂಡಿದ್ದೇವೆ. ಈ ಕವಿತೆಗಳು ನಮ್ಮ ನಾಟಕದಲ್ಲಿ ಹಾಡುಗಳಾಗಿ ನಿರೂಪಿತವಾಗಿವೆ. ಈ ಹಿಂದೆ ನಮ್ಮ ಮಕ್ಕಳ ನಾಟಕದ ಕುರಿತು ಮಾತನಾಡುವಾಗ ಇದು ನಮ್ಮ ಮಕ್ಕಳ ಮೊದಲ ನಾಟಕ. ಮೊಟ್ಟ ಮೊದಲ ಬಾರಿಗೆ ರಂಗವೇರುತ್ತಿದ್ದಾರೆ. ನೀವೆಲ್ಲಾ ಪ್ರೋತ್ಸಾಹಿಸಬೇಕು ಎಂದು ಕೇಳಿಕೊಳ್ಳುವುದು ಸಾಮಾನ್ಯ ಕ್ರಮವಾಗಿತ್ತು.
ಆದರೆ ಈ ಬಾರಿಯ ಮಕ್ಕಳು ಅಂದರೆ ಎಂಟು ಹಾಗೂ ಒಂಬತ್ತನೇ ತರಗತಿಯ ಮಕ್ಕಳು ಕೋವಿಡ್-ಕೊರೋನಾ ಕಾರಣದಿಂದಾಗಿ ಒಂದೇ ಒಂದು ನಾಟಕವನ್ನಾಗಲಿ ಯಕ್ಷಗಾನವನ್ನಾಗಲೀ ನೋಡಲು ಸಾಧ್ಯವಾಗಿರಲಿಲ್ಲ. ಇವರ ವಯಸ್ಸಿನ ಉಳಿದ ಮಕ್ಕಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹಾಗಿರುವಾಗ ಮಕ್ಕಳು ನಾಟಕ ಆಡಬೇಕಾದ, ನೋಡಬೇಕಾದ ಅಗತ್ಯದ ಕುರಿತಾಗಿಯೂ ನಮ್ಮ ಕಾರಂತಜ್ಜನಿಗೊಂದು ಪತ್ರ ಮಕ್ಕಳ ನಾಟಕ ಮಾತನಾಡುತ್ತದೆ.