ಕಾಸರಗೋಡು : ಮನಸ್ಸಿಗೆ ಸಂತೋಷ ನೀಡುವ ಸಂಗೀತದಿಂದ ಆತಂಕ ನೆಮ್ಮದಿ ಒತ್ತಡ, ನಿವಾರಣೆಯಾಗುತ್ತದೆ. ಸಂಗೀತ ಆಲಿಸುವ ಮೂಲಕ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಜೀವನದ ಪ್ರತಿಯೊಂದು ಕ್ಷಣದಲ್ಲೂ ಪ್ರಮುಖ ಪಾತ್ರವಹಿಸುವ ಸಂಗೀತ ಮನಸು ಕದಡಿದಾಗ ಶಾಂತಗೊಳಿಸುತ್ತದೆ. ಸಂಗೀತದಿಂದ ಗುರುತಿಸಿಕೊಳ್ಳಬೇಕು. ಕರೋಕೆ ಗಾಯಕರ ಸಮ್ಮಿಲನ ಕಾರ್ಯಕ್ರಮದ ಮೂಲಕ ಸಂಗೀತ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಮಂಗಳೂರು ನಗರ ಸಹಾಯಕ ಯೋಜನಾ ಅಧಿಕಾರಿ, ಖ್ಯಾತ ರಂಗಭೂಮಿ ಹಾಗೂ ಸಂಗೀತ ಕಲಾವಿದ ನಾಗೇಂದ್ರ ಮಂಗಳೂರು ಅವರು ಹೇಳಿದರು.
ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಸಂಗೀತ ಘಟಕ ಸ್ವರ ಚಿನ್ನಾರಿ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಬೆಂಗಳೂರು ಇದರ ಸಹಯೋಗದೊಂದಿಗೆ ದಿನಾಂಕ 09 ಫೆಬ್ರವರಿ 2025 ರಂದು ಕರಂದಕ್ಕಾಡ್ ನ ಪದ್ಮಗಿರಿ ಕಲಾ ಕುಟೀರದಲ್ಲಿ ಆಯೋಜಿಸಿದ ಪ್ರತಿಭಾನ್ವಿತ ಕರೋಕೆ ಗಾಯಕರ ಸಮ್ಮಿಲನ ‘ಅಂತರ್ಧ್ವನಿ’ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ವೈದ್ಯರಾದ ಡಾ. ಕೆ. ಶಾನುಭೋಗ್ ರವರು ಪ್ರತಿಭಾನ್ವಿತ ಹೊಸ ಗಾಯಕರಿಗೆ ಹಾಡುವ ಜೊತೆ ಲಯ, ತಾಳ ಹಾಗೂ ಶ್ರುತಿಯನ್ನು ಕಲಿಯಲು ಸಹಾಯಕವಾಗುವ ಕರೋಕೆ ಮುಖಾಂತರ ಕಲಾವಿದರ ಅಂತರ್ದ್ವನಿಯ ವೇದಿಕೆಯನ್ನು ಮಾಡಿದ ಸ್ವರ ಚಿನ್ನಾರಿಯನ್ನು ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ ರಂಗ ಚಿನ್ನಾರಿಯ ನಿರ್ದೇಶಕರಾದ ಕೋಳಾರು ಸತೀಶ್ ಚಂದ್ರ ಭಂಡಾರಿ ಅವರು ಮಾತನಾಡಿ ಹೊಸ ಗಾಯಕರಿಗೆ ತಾಳಬದ್ಧವಾಗಿ, ಶ್ರುತಿಬದ್ಧವಾಗಿ ಹಾಡಲು ಕಲಿಯುವ ಸುಯೋಗ ಕಾಸರಗೋಡಿನಲ್ಲಿ ನಿರ್ಮಾಣ ಮಾಡಿದ್ದೇವೆ ಎಂದರು.
ಸುಮಾರು ಐವತ್ತಕ್ಕೂ ಮಿಕ್ಕಿದ ಗಾಯಕರು ಕನ್ನಡ, ತುಳು, ಹಿಂದಿ, ಮರಾಠಿ, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಜಾನಪದ ಭಜನೆ ಹಾಗೂ ಭಾವಗೀತೆಗಳನ್ನು ಹಾಡಿದರು. ಈ ಕಾರ್ಯಕ್ರಮವು ಬೆಳಗ್ಗಿನಿಂದ ಸಂಜೆಯ ತನಕ ನಿರಂತರವಾಗಿ ನಡೆಯಿತು.
ಸಮಾರೋಪ ಭಾಷಣ ಮಾಡಿದ ಪತ್ರಕರ್ತರಾದ ನಂದಗೋಪಾಲರವರು ದ. ಕ. ಜಿಲ್ಲೆಯಲ್ಲಿ ಕರೋಕೆ ಗಾಯನ ವ್ಯಾಪಾರಿಕರಣವಾಗುವ ಈ ಸಂದರ್ಭದಲ್ಲಿ ಎಲೆಮರೆಯಲ್ಲಿರುವ ಪ್ರತಿಭಾನ್ವಿತ ಗಾಯಕರಿಗೆ ಅಂತರ್ಧ್ವನಿ ಮುಖಾಂತರ ರಂಗು ಚಿನ್ನರಿಯ ಸಂಗೀತ ಘಟಕ ಸ್ವರ ಚಿನ್ನಾರಿಯವರು ಏರ್ಪಡಿಸಿದ ಈ ವೇದಿಕೆ ನಿಜಕ್ಕೂ ಅಭಿನಂದನೀಯ ಎಂದರು.
ರಂಗ ಚಿನ್ನಾರಿಯ ಮಾರ್ಗದರ್ಶಕರಾದ ಖ್ಯಾತ ನೇತ್ರ ತಜ್ಞ ಹಾಗೂ ಧಾರ್ಮಿಕ ಮುಂದಾಳು ಡಾ. ಅನಂತ ಕಾಮತ್ ರವರು ರಂಗ ಚಿನ್ನಾರಿಯ ಎಲ್ಲಾ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದ ಪ್ರೋತ್ಸಾಹ ನೀಡುವ ಭರವಸೆ ನೀಡಿದರು.
ರಂಗಚಿನ್ನಾರಿಯ ಸಂಚಾಲಕ ಸತ್ಯನಾರಾಯಣ, ಮಾಧವ ಸುವರ್ಣ, ಸ್ವರ ಚಿನ್ನಾರಿ ಇದರ ಪ್ರಧಾನ ಕಾರ್ಯದರ್ಶಿ ಕಿಶೋರ್ ಪೆರ್ಲ ಉಪಸ್ಥಿತರಿದ್ದರು. ರಂಗಚಿನ್ನಾರಿ ಪ್ರಧಾನ ಸಂಚಾಲಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಸಿ, ಸ್ವಾಗತಿಸಿದರು.